ಸಾರಾಂಶ
ರಂಗಾಯಣ ರಘು ಹಾಗೂ ಸಂಪತ್ ಮೈತ್ರೇಯ ನಟನೆಯ ಮೂರನೇ ಕೃಷ್ಣಪ್ಪ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ
ಸಿನಿವಾರ್ತೆ
ರಂಗಾಯಣ ರಘು ಹಾಗೂ ಸಂಪತ್ ಮೈತ್ರೇಯಾ ನಟನೆಯ ‘ಮೂರನೇ ಕೃಷ್ಣಪ್ಪ’ ಸಿನಿಮಾ ಮೇ 24ರಂದು ತೆರೆಗೆ ಬರುತ್ತಿದೆ. ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು, ಮೆಚ್ಚುಗೆ ಪಡೆದುಕೊಂಡಿದೆ.
ನವೀನ್ ರೆಡ್ಡಿ ನಿರ್ದೇಶನದ, ಮೋಹನ್ ರೆಡ್ಡಿ ಜಿ ಹಾಗೂ ರವಿಶಂಕರ್ ನಿರ್ಮಾಣದ ಈ ಚಿತ್ರದಲ್ಲಿ ಶ್ರೀಪ್ರಿಯಾ ನಾಯಕಿ. ನವೀನ್ ರೆಡ್ಡಿ, ‘ನಾನು ಬರೆದ ಪಾತ್ರಗಳಿಗೆ ಕಲಾವಿದರು ಜೀವ ತುಂಬಿದ್ದಾರೆ. ಇದು ಹಾಸ್ಯ ಪ್ರಧಾನ ಸಿನಿಮಾ. ರಂಗಾಯಣ ರಘು ಹಾಗೂ ಸಂಪತ್ ಮೈತ್ರೇಯಾ ಚಿತ್ರದ ಕಥಾನಾಯಕರು’ ಎಂದರು.
ರಂಗಾಯಣ ರಘು, ‘ಒಂದು ಪ್ರಾಂತೀಯ ಭಾಷೆಯಲ್ಲಿ ಮಾಡಿರುವ ಸಿನಿಮಾ ಇದು. ಎಲ್ಲರಿಗೂ ಇಷ್ಟವಾಗುತ್ತದೆ. ಚಿತ್ರದಲ್ಲಿ ಬಳಸಿರುವ ಕೋಲಾರ ಭಾಷೆ ತುಂಬಾ ಚೆನ್ನಾಗಿದೆ’ ಎಂದರು. ಸಂಪತ್ ಮೈತ್ರೇಯಾ, ‘ನಾನು ಈ ಚಿತ್ರದ ಹೀರೋ ಅಲ್ಲ. ಮುಖ್ಯ ಪಾತ್ರಧಾರಿ. ಒಳ್ಳೆ ವಿಷಯ ಇರುವ ಸಿನಿಮಾ. ದೇವಸ್ಥಾನ ಉದ್ಘಾಟನೆಗೆ ಸಂಬಂಧಪಟ್ಟ ಕಥೆ. ಒಬ್ಬ ಶಿಕ್ಷಕ ಸಹಾಯ ಮಾಡಲು ಹೋಗಿ ಏನ್ ಏನು ಕಷ್ಟ ಅನುಭವಿಸ್ತಾನೆ ಎಂಬುದು ಚಿತ್ರದ ಕತೆ’ ಎಂದು ಹೇಳಿದರು.