ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಕ್ರಿಸ್ ಮಸ್ ಮತ್ತು ನೂತನ ವರ್ಷಾಚರಣೆ ಅಂಗವಾಗಿ ಅರಮನೆ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.ಅರಮನೆ ಆವರಣದಲ್ಲಿ ವಿವಿಧ ಹೂವುಗಳಿಂದ ನಿರ್ಮಿಸಿರುವ ಗಂಡು ಬೇರುಂಡ, ಗುಲಾಬಿ, ಸೇವಂತಿಗೆ, ಚೆಂಡುಮಲ್ಲಿಗೆ ಮುಂತಾದ ಹೂ ಬಳಸಿಕೊಂಡು ಟಾಂಗಾ ಗಾಡಿ ನಿರ್ಮಿಸಲಾಗಿದೆ.
ಇತ್ತೀಚೆಗಷ್ಟೇ ಯುನೆಸ್ಕೋ ದಿಂದ ಗುರುತಿಸಲ್ಪಟ್ಟ ಸೋಮನಾಥಪುರ ದೇವಾಲಯದ ಮಾದರಿಯನ್ನು ನಿರ್ಮಿಸಲಾಗಿದೆ. ದೇವಾಲಯ, ಅರಮನೆ ಮುಂತಾದ ಅನೇಕಾರು ಕಲಾಕೃತಿಗಳನ್ನು ರಚಿಸಲಾಗಿದೆ.ಕಳೆದ ಬಾರಿಯಂತೆ ಈ ವರ್ಷವೂ ಕೂಡ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿತ್ತು. ಪ್ರದರ್ಶನದಲ್ಲಿ ಜಿಲ್ಲೆಯ ಪ್ರಮುಖ ಆಕರ್ಷಕ ಕೇಂದ್ರಗಳಾದ ಸೋಮನಾಥೇಶ್ವರ ದೇವಾಲಯ, ಸಿರಿ ಧಾನ್ಯದಿಂದ ನಿರ್ಮಿಸಿದ ಮಲೆ ಮಹದೇಶ್ವರ ಪ್ರತಿಮೆ, ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ವಿಗ್ರಹ, ಬ್ರಾಂಡ್ ಮೈಸೂರು ಲೋಗೋ, 8 ಬಾರಿ ಅಂಬಾರಿ ಹೊತ್ತ ಅರ್ಜುನ ಅನೆ ಆಕೃತಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪ ನಂಜಮ್ಮಣಿ, ಶ್ರಿ ಕಂಠದತ್ತ ನರಸಿಂಹರಾಜ ಒಡೆಯರ್, ಮೈಸೂರು ಅರಮನೆ ಮಂಡಳಿ ಹಾಗೂ ವಿವಿಧ ರೀತಿಯ ಪ್ರಾಣಿಗಳ ಪ್ರತಿಮೆಗಳು ಕಂಡುಬಂದವು.
ಹಣ್ಣುಗಳಿಂದ ಚಿತ್ರಿಸಿದ ಕಲಾಕೃತಿಗಳಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಆಕೃತಿಗಳು ಜನರ ಮನ ಸೆಳೆದವು.ವಿವಿಧ ರೀತಿಯ ಕಲಾಕೃತಿಗಳು, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್ ಹೀಗೆ ಮಕ್ಕಳಿಗೆ ಪ್ರಿಯವಾದ ಹೂಗಳಿಂದ ಅಲಂಕೃತಗೊಂಡ ವಿವಿಧ ಕಲಾಕೃತಿಗಳು, ಸೆಲ್ಫಿ ಪಾಯಿಂಟ್, ರಾಜ್ ಕುಮಾರ್, ಕ್ರಿಸ್ ಮಸ್ ಟ್ರೀಗಳು ಜನರನ್ನು ಆಕರ್ಷಿಸಿದವು.
ಮೈಸೂರು ಅರಮನೆ ಮಂಡಳಿ ವತಿಯಿಂದ ರಾಜ ಮನೆತನಕ್ಕೆ ಸೇರಿದ ಆಯ್ದ ಹಳೆಯ ಹಾಗೂ ಅಮೂಲ್ಯ ಛಾಯಾಚಿತ್ರಗಳು, ನವರಾತ್ರಿ ವೇಳೆ ಮನೆಗಳಲ್ಲಿ ಪ್ರದರ್ಶಿಸಿದ ಬೊಂಬೆಗಳು, ನಾಲ್ವಡಿ ಕೃಷ್ಣರಾಜ ಒಡೆಯರು ಮತ್ತು ಮೈಸೂರು ಅರಮನೆ ಕುರಿತು ವಿಡಿಯೋ ಪ್ರದರ್ಶನ ಆಯೋಜಿಸಲಾಗಿತ್ತು.ಈ ಬಾರಿಯ ಫಲಪುಷ್ಪ ಪ್ರದರ್ಶನದಲ್ಲಿ ಸರ್ವರೂ ಸಮಾನರು ಎಂಬ ಸಂದೇಶವನ್ನು ಸಾರುವ ಸಂವಿಧಾನ ಪೀಠಿಕೆ, ಸಾರ್ವಭೌಮ, ಸಮಾಜವಾದಿ, ಜಾತ್ಯತೀತ, ಸಮಾನತೆ, ಏಕತೆ ಮತ್ತು ಸಮಗ್ರತೆ ಮೂಡಿಸುವಲ್ಲಿ ಸಂವಿಧಾನದ ಪಾತ್ರ ಮುಖ್ಯ ಎಂಬುದರ ವಿಷಯವನ್ನು ಪ್ರತಿಯೊಬ್ಬ ಸಾರ್ವಜನಿಕರಿಗೂ ತಿಳಿಸಲು ಭಾರತ ಸಂವಿಧಾನದ ಪ್ರಸ್ತಾವನೆಯನ್ನು ನಿರ್ಮಿಸಲಾಗಿತ್ತು.
ಅರಮನೆ ಅನೆಗಳಿಂದ ನಾಲ್ವಡಿ ಕೃಷ್ಣರಾಜ ಒಡೆಯರ್, ಕೆಂಪನಂಜಮ್ಮಣಿ, ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆಗಳಿಗೆ ಪುಷ್ಪಾರ್ಚನೆ ಮಾಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ. ಶಾಸಕರಾದ ಟಿ.ಎಸ್. ಶ್ರೀವತ್ಸ, ಡಿ. ತಿಮ್ಮಯ್ಯ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.