ದ್ವಾರಕೀಶ್ ಅಂತಿಮ ದರ್ಶನ ಪಡೆದ ಗಣ್ಯರು

| Published : Apr 18 2024, 02:20 AM IST / Updated: Apr 18 2024, 07:23 AM IST

dwarakish and  vishnuvardhan

ಸಾರಾಂಶ

ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ದ್ವಾರಕೀಶ್ ಅವರ ಅಂತಿಮ ದರ್ಶನ ಮಾಡಿಕೊಳ್ಳುವ ಮೂಲಕ ಹಿರಿಯ ನಟನಿಗೆ ಗೌರವ ಸಲ್ಲಿಸಿದ ವಿವಿಧ ಕ್ಷೇತ್ರಗಳ ಗಣ್ಯರು.

 ಸಿನಿವಾರ್ತೆ

ಸಿನಿಮಾ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ರವೀಂದ್ರ ಕಲಾಕ್ಷೇತ್ರಕ್ಕೆ ಆಗಮಿಸಿ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್‌ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ರಾಣಿ ಸತೀಶ್‌, ಕುಮಾರ್‌ ಬಂಗಾರಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಅಂತಿಮ ದರ್ಶನ ಪಡೆದು ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

ಚಿತ್ರರಂಗದಿಂದ ದರ್ಶನ್‌, ಯಶ್‌, ಸುದೀಪ್‌, ಜಗ್ಗೇಶ್‌, ರಮೇಶ್‌ ಅರವಿಂದ್‌, ರವಿಚಂದ್ರನ್‌, ಶ್ರೀಮುರಳಿ, ಧ್ರುವ ಸರ್ಜಾ, ರಾಘವೇಂದ್ರ ರಾಜ್‌ಕುಮಾರ್‌, ದೇವರಾಜ್‌, ಮುಖ್ಯಮಂತ್ರಿ ಚಂದ್ರು, ವಿಕ್ರಮ್ ರವಿಚಂದ್ರನ್‌, ಕಲಾವಿದ ಅಶೋಕ್‌, ಶ್ರೀನಾಥ್‌, ಹೊನ್ನವಳ್ಳಿ ಕೃಷ್ಣ, ಚರಣ್‌ ರಾಜ್‌, ಅನಿರುದ್ಧ್‌ ಭಾಗಿಯಾದರು.

ಗಾಯಕಿ ಮಂಜುಳಾ ಗುರುರಾಜ್‌, ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಪ್ರಮುಖರಾದ ಎಸ್‌ ಎ ಚಿನ್ನೇಗೌಡ, ಸಾರಾ ಗೋವಿಂದು, ಭಾ ಮ ಹರೀಶ್, ಎನ್‌ ಎಂ ಸುರೇಶ್‌, ಉಮೇಶ್‌ ಬಣಕಾರ್‌, ನಟಿಯರಾದ ಸುಧಾರಾಣಿ, ಶ್ರುತಿ, ಸಂಗೀತ ನಿರ್ದೇಶಕರಾದ ಹಂಸಲೇಖ, ವಿ ಮನೋಹರ್‌ ಆಗಮಿಸಿದ್ದರು.ಗಣ್ಯರ ಮಾತುಗಳು

ನೇತ್ರದಾನ ಮಾಡಿದ್ದು ಶ್ಲಾಘನೀಯ

ದ್ವಾರಕೀಶ್‌ ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗಳನ್ನು ಕೊಟ್ಟವರು. ಎಷ್ಟೇ ಕಷ್ಟಗಳು ಬಂದರೂ ಅದನ್ನು ಸಹಿಸಿಕೊಂಡು ಸಿನಿಮಾ ಮಾಡಿದರು. ಮುಖ್ಯವಾಗಿ ದ್ವಾರಕೀಶ್‌ ನಮ್ಮೂರಿನವರು. ಮೈಸೂರಿನಲ್ಲಿ ಹುಟ್ಟಿದವರು. ಅಲ್ಲೇ ವಿದ್ಯಾಭ್ಯಾಸ ಮಾಡಿದವರು. ಮೈಸೂರಿನ ಮೇಲೆ ಅವರಿಗೆ ವಿಶೇಷ ಪ್ರೀತಿ. ನಾನು ಮತ್ತು ದ್ವಾರಕೀಶ್‌ ಒಮ್ಮೆ ಬೆಂಗಳೂರಿನಿಂದ ಮೈಸೂರಿಗೆ ಜತೆಯಾಗಿ ಪ್ರಯಾಣ ಮಾಡಿದ್ದೇವೆ. ಆಗ ಹಲವು ವಿಚಾರಗಳನ್ನು ನನ್ನೊಂದಿಗೆ ಮಾತನಾಡಿದ್ದರು. ಅವರು ನಿಧನದ ನಂತರ ನೇತ್ರದಾನ ಮಾಡಿದ್ದಾರೆಂಬ ವಿಷಯ ತಿಳಿಯಿತು. ಇದೊಂದು ಶ್ಲಾಘನೀಯ ಕೆಲಸ.

- ಸಿದ್ದರಾಮಯ್ಯ, ಮುಖ್ಯಮಂತ್ರಿ 

ದ್ವಾರಕೀಶ್ ಮಾದರಿ ವ್ಯಕ್ತಿ

ದ್ವಾರಕೀಶ್‌ ಒಬ್ಬ ಮಹಾನ್‌ ವ್ಯಕ್ತಿ. ಪ್ರಪಂಚದಲ್ಲಿ ತುಂಬಾ ಜನ ಹುಟ್ಟುತ್ತಾರೆ, ಸಾಯುತ್ತಾರೆ. ಆದರೆ, ಹುಟ್ಟಿದ ಮೇಲೆ ನಾವು ಏನು ಸಾಧನೆ ಮಾಡುತ್ತೇವೆ, ಎಷ್ಟು ಧೈರ್ಯ ಮಾಡಿ ಬದುಕು ಕೊಡುವ ಅವಕಾಶಗಳನ್ನು ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ವಿಚಾರದಲ್ಲಿ ದ್ವಾರಕೀಶ್‌ ಅವರು ನಮ್ಮೆಲ್ಲರಿಗೂ ಮಾದರಿ ಮತ್ತು ಸ್ಫೂರ್ತಿ. ಹೀರೋ ಎಂದರೆ ಹೀಗೆ ಇರಬೇಕು ಎನ್ನುವ ಸೂತ್ರಗಳನ್ನು ಸುಳ್ಳು ಮಾಡಿ ತಮ್ಮದೇ ಆದ ಸಾಧನೆ ಮಾಡಿದ ಮಹಾನ್‌ ಚೇತನ. ಬದುಕಿನ ಅವಕಾಶಗಳನ್ನು ಅದ್ಭುತವಾಗಿ ಬಳ‍ಸಿಕೊಂಡವರು. ಕರ್ನಾಟಕ, ಕನ್ನಡ ಚಿತ್ರರಂಗ ಅವರನ್ನು ಯಾವಾಗಲೂ ಸ್ಮರಿಸುತ್ತದೆ.

- ಯಶ್‌

ಅದ್ಭುತ ಬದುಕು

ದ್ವಾರಕೀಶ್‌ ಅವರದ್ದು ಅದ್ಭುತ ಪಯಣ. ತಂದೆಯಾಗಿ, ಸ್ನೇಹಿತನಾಗಿ, ನಟ, ನಿರ್ದೇಶಕ, ನಿರ್ಮಾಪಕ ಹೀಗೆ ಎಲ್ಲ ರೀತಿಯಲ್ಲೂ ಅದ್ಭುತವಾಗಿ ಬದುಕಿ ತೋರಿಸಿದವರು. ಚಿತ್ರರಂಗದಲ್ಲಿ ಅವರದ್ದು ದೊಡ್ಡ ಹೆಜ್ಜೆ ಗುರುತುಗಳು. ಸಾವಿನ ನಂತರ ನೇತ್ರ ಮಾಡುವ ಮೂಲಕ ಬೆಳಕು ನೀಡಿದ್ದಾರೆ. ಇದು ಎಲ್ಲರಿಗೂ ಸ್ಫೂರ್ತಿ ಆಗಬೇಕು.

- ಧ್ರುವ ಸರ್ಜಾ

ಸಾಹಸವಂತ ನಿರ್ಮಾಪಕದ್ವಾರಕೀಶ್‌ ಚಿತ್ರರಂಗದಲ್ಲಿ ಮಾಡಿದ ಸಾಹಸಗಳನ್ನು ಬೇರೆ ಯಾರೂ ಮಾಡಕ್ಕೆ ಆಗಲ್ಲ. ಚಿತ್ರರಂಗಕ್ಕೆ ಹೊಸ ಕಲಾವಿದರನ್ನು ಪರಿಚಯಿಸಿದವರು. ಹೊಸ ಹೊಸ ಚಿತ್ರಗಳನ್ನು ಮಾಡಿದವರು. ಆ ದಿನಗಳಲ್ಲೇ ವಿದೇಶಕ್ಕೆ ಹೋಗಿ ಸಿನಿಮಾ ಚಿತ್ರೀಕರಣ ಮಾಡಿಕೊಂಡು ಬಂದವರು. ಕನ್ನಡಕ್ಕೆ ಮತ್ತು ಕನ್ನಡ ಚಿತ್ರರಂಗಕ್ಕೆ ಒಬ್ಬರೇ ದ್ವಾರಕೀಶ್‌. 

- ಶ್ರೀಮುರಳಿ

ಕನಸು ಕಾಣಲು ಕಲಿಸಿದ ವ್ಯಕ್ತಿ

ಕನಸು ಕಾಣೋದನ್ನು ಹೇಳಿಕೊಟ್ಟ ವ್ಯಕ್ತಿ. ನಾವೆಲ್ಲ ಅವರ ನಂತರ ಕನಸು ಕಂಡವರು. ಅವರು ಎತ್ತರದಲ್ಲಿ ಚಿಕ್ಕವರು. ಆದರೆ ಸಾಧನೆಯಲ್ಲಿ ದೊಡ್ಡವರು. ಅವರ ಕನಸುಗಳು ಅವರಿಗಿಂತಲೂ ಎತ್ತರವಾಗಿರುತ್ತಿದ್ದವು. ದ್ವಾರಕೀಶ್‌ ನಟನೆಯ ಹಲವು ಸಿನಿಮಾಗಳನ್ನು ನಮ್ಮ ಈಶ್ವರಿ ಸಂಸ್ಥೆಯೇ ವಿತರಣೆ ಮಾಡಿದ್ದು. ದ್ವಾರಕೀಶ್‌ ಅವರ ಧೈರ್ಯ ಮತ್ತು ವಿಶ್ವಾಸ ಹೇಗಿತ್ತು ಎಂದರೆ ಕರ್ನಾಟಕ ಮ್ಯಾಪ್‌ನಲ್ಲಿ ಹುಲಿ ರೀತಿ ನಗುತ್ತಿದರು. ಆ ನಗುವೇ ದ್ವಾರಕೀಶ್‌.

- ರವಿಚಂದ್ರನ್‌ 

ನಿರ್ಮಾಣಕ್ಕೆ ಶಿಸ್ತು ತಂದವರು

ಹುಟ್ಟಿನಿಂದಲೇ ರಂಜಿಸಿದವರು ದ್ವಾರಕೀಶ್‌. ನಾನು ಮತ್ತು ದ್ವಾರಕೀಶ್‌ ನಾಟಕದಲ್ಲಿ ಜತೆಯಾಗಿ ಕೆಲಸ ಮಾಡಿದ್ದೇವೆ. ಸಿನಿಮಾ ಎಂಬುದು ಕಾಮನ್‌ ಮ್ಯಾನ್‌ ವೇದಿಕೆ. ಈ ಕಾಮನ್‌ ಮ್ಯಾನ್‌ಗೆ ಏನೆಲ್ಲಾ ಬೇಕು ಎಂಬುದು ದ್ವಾರಕೀಶ್‌ ಅವರಿಗೆ ಗೊತ್ತಿತ್ತು. ಚಿತ್ರ ನಿರ್ಮಾಣಕ್ಕೆ ಶಿಸ್ತು ತಂದವರು. ಸಿನಿಮಾ ಮೇಕಿಂಗ್‌ನಲ್ಲಿರುವಾಗಲೇ ಆ ಚಿತ್ರದ ಮೇಲೆ ನಿರೀಕ್ಷೆಗಳನ್ನು ಹುಟ್ಟುವಂತೆ ಮಾಡಿದ ಮೊದಲಿಗ. ಸಿನಿಮಾ ಮತ್ತು ಮನರಂಜನೆ ವಿಚಾರದಲ್ಲಿ ರಾಜಿಯಾಗದ ಸಿನಿಮಾ ಪ್ರೇಮಿ ದ್ವಾರಕೀಶ್‌.

- ಹಂಸಲೇಖ

ಅಪ್ಪಟ ಸಿನಿಮಾ ಮೋಹಿ

ನಾನು ದ್ವಾರಕೀಶ್‌ ಅವರನ್ನು ಹೆಚ್ಚಾಗಿ ಭೇಟಿ ಆಗುತ್ತಿದ್ದದ್ದು ಲಕ್ಸುರಿ ಹೋಟೆಲ್‌ಗಳಲ್ಲಿ. ಅಲ್ಲಿನ ಲಾಬಿಯಲ್ಲಿ ಕೂತು ಇದು ನನ್ನ ಸಾಮ್ರಾಜ್ಯ ಎನ್ನುತ್ತಿದ್ದರು. ರಾಜನಂತೆ ಇದ್ದರು. ನಾವೆಲ್ಲ ಸಿಂಗಾಪುರ್‌, ಆಫ್ರಿಕಾ ದೇಶಗಳನ್ನು ನೋಡಿದ್ದು ದ್ವಾರಕೀಶ್‌ ಅವರ ಚಿತ್ರಗಳ ಮೂಲಕವೇ. ದ್ವಾರಕೀಶ್‌ ಹಾಗೂ ವಿಷ್ಣುವರ್ಧನ್‌ ಈ ಎರಡೂ ಫೋರ್ಸ್‌ಗಳ ನಡುವೆ ನಾನು ನಟಿಸಿದ್ದು ಅದ್ಭುತ. ಸತತವಾಗಿ 18 ವರ್ಷ ಹಿಟ್‌ ಚಿತ್ರಗಳನ್ನು ಕೊಡದಿದ್ದರೂ ಚಿತ್ರರಂಗದಿಂದ ದೂರವಾಗದ ಅಪ್ಪಟ ಸಿನಿಮಾ ಮೋಹಿ ದ್ವಾರಕೀಶ್‌ ಅವರು.

- ರಮೇಶ್‌ ಅರವಿಂದ್‌

ಬಹು ದೊಡ್ಡ ಪ್ರತಿಭೆಯ ನಿರ್ಗಮನ

ದ್ವಾರಕೀಶ್‌ ಅವರ ನಿಧನ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ. 81 ವರ್ಷಗಳ ಅವರ ಜೀವನ ಅನುಭವ ದೊಡ್ಡದು. ಕನ್ನಡ ಚಿತ್ರರಂಗದ ಬಹು ದೊಡ್ಡ ಪ್ರತಿಭೆಯನ್ನು ನಾವು ಕಳೆದುಕೊಂಡಿದ್ದೇವೆ.

- ರಾಣಿ ಸತೀಶ್‌, ಮಾಜಿ ಸಚಿವೆ

ಸೋಲಿಗೆ ಹೆದರದೆ, ಗೆಲುವಿಗೆ ಹಿಗ್ಗದೆ ಮುನ್ನಡೆದರು

ದ್ವಾರಕೀಶ್‌ ಅವರು ತಮ್ಮ ಮಕ್ಕಳ ನಂತರ ಯಾರಿಗಾದರೂ ಅವರು ಹೆಸರು ಇಟ್ಟಿದ್ದರೆ ಅದು ನನಗೆ. ‘ನಿನಗೆ ಹೆಸರು ಇಡುತ್ತಿದ್ದೇನೆ. ಹೆಸರು ಮಾಡಕ್ಕೆ ಅವಕಾಶ ಕೊಡುತ್ತಿದ್ದೇನೆ ಮರಿ’ ಎಂದು ಅವರು ಹೇಳಿದ ಮಾತು ಈಗಲೇ ನೆನಪಾಗುತ್ತಿದೆ. ‘ಶ್ರುತಿ’ ಚಿತ್ರದ ನಂತರ ‘ಶ್ರುತಿ ಹಾಕಿದ ಹೆಜ್ಜೆ’ ಸಿನಿಮಾ ಮಾಡಿದರು. ಆಗ ಅವರು ಈ ಸಿನಿಮಾ ಮತ್ತು ನಿನ್ನ ಪಯಣ ಇತಿಹಾಸ ಆಗಬೇಕು ಎಂದು. ಚಿತ್ರರಂಗಕ್ಕೆ ತಮ್ಮಿಂದ ಪರಿಚಯಗೊಂಡ ಕಲಾವಿದರು ನಾನು ಸತ್ತಾಗ ನನ್ನ ಪಕ್ಕ ಕೂತು ಅತ್ತರೆ ಅದೇ ನನ್ನ ಜೀವನ ಸಾರ್ಥಕ ಎನ್ನುತ್ತಿದ್ದರು. ಸೋಲಿಗೆ ಹೆದರದೆ, ಗೆಲುವನ್ನು ತಲೆಗೇರಿಸಿಕೊಳ್ಳದ ಬಹು ದೊಡ್ಡ ವ್ಯಕ್ತಿ ದ್ವಾರಕೀಶ್‌.

- ಶ್ರುತಿ