ಸಾರಾಂಶ
ಸಿನಿವಾರ್ತೆ
‘ನಾನು ಈವರೆಗೆ ನಾಲ್ಕೈದು ಸಿನಿಮಾಗಳಲ್ಲಿ ನಟಿಸಿದರೂ ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಗುರುತಿಸಿಕೊಳ್ಳಲು ಕಷ್ಟವಾಗುತ್ತಿದೆ. ಆದರೆ ಕಾಂಗರೂ ಸಿನಿಮಾ ನನ್ನ ಕೆರಿಯರ್‌ನಲ್ಲಿ ಮೈಲಿಗಲ್ಲಾಗುವ ವಿಶ್ವಾಸವಿದೆ’ ಎಂದು ನಾಯಕಿ ರಂಜನಿ ರಾಘವನ್ ಹೇಳಿದ್ದಾರೆ.
ಆದಿತ್ಯ ಹಾಗೂ ರಂಜನಿ ರಾಘವನ್ ನಟನೆಯ ‘ಕಾಂಗರೂ’ ಸಿನಿಮಾದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಈ ಸಿನಿಮಾ ಮೇ 3ಕ್ಕೆ ತೆರೆಗೆ ಬರಲಿದೆ.
ಈ ವೇಳೆ ಮಾತನಾಡಿದ ರಂಜನಿ, ‘ರಿಯಾಲಿಟಿ ಶೋ ಒಂದರಲ್ಲಿ ಥಿಯೇಟರ್‌ಗೆ ಜನರನ್ನು ಕರೆಸುವಂಥಾ ನಾಯಕಿಯರಾದ ಮಾಲಾಶ್ರೀ, ಶ್ರುತಿ ಬಗ್ಗೆ ಮಾತನಾಡುತ್ತಿದ್ದೆ. ಆ ವೇಳೆ ಕಾಂಗರೂ ಸಿನಿಮಾದಲ್ಲಿ ನನ್ನ ನಟನೆ ನೋಡಿದ್ದ ಸಾಧುಕೋಕಿಲ, ಆ ಸಾಮರ್ಥ್ಯ ನಿನಗೂ ಇದೆಯಮ್ಮಾ ಎಂದಿದ್ದರು. ಈ ಮಾತು ನನ್ನಲ್ಲಿ ಸ್ಫೂರ್ತಿ ತುಂಬಿದೆ’ ಎಂದರು.
ನಾಯಕ ಆದಿತ್ಯ ಅವರೂ ರಂಜನಿ ನಟನೆಯನ್ನು ಶ್ಲಾಘಿಸಿದರು. ‘ಆ್ಯಕ್ಷನ್ ಹೀರೋನನ್ನು ಆ್ಯಕ್ಷನ್ ಇಲ್ಲದೇ ಪರಿಣಾಮಕಾರಿಯಾಗಿ ತೋರಿಸಿದ್ದು ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿ’ ಎಂದರು.
ನಿರ್ದೇಶಕ ಕಿಶೋರ್ ಮೇಗಳಮನೆ, ‘ಎದೆಗಾರಿಕೆ ಚಿತ್ರದಲ್ಲಿ ಆದಿತ್ಯ ನಿರ್ವಹಿಸಿದ ಪಾತ್ರದಂತೆ ಈ ಸಿನಿಮಾದ ಅವರ ಪಾತ್ರವಿದೆ. ಮಗು ಹುಟ್ಟಿದ ಮೇಲೂ ಅದನ್ನು ಜತನದಿಂದ ಕಾಪಾಡುವ ಕಾಂಗರೂವನ್ನು ಚಿತ್ರದ ನಾಯಕ ಪ್ರತಿನಿಧಿಸುತ್ತಾನೆ. ಆ ಮಗು ಯಾವುದು ಎಂಬುದು ಸಸ್ಪೆನ್ಸ್. ಇದೊಂದು ಕ್ರೈಮ್ ಥ್ರಿಲ್ಲರ್’ ಎಂದರು.
ಚಲನಚಿತ್ರ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು. ಈ ಸಿನಿಮಾಕ್ಕೆ ನಿರ್ಮಾಪಕ ಚನ್ನಕೇಶವ ಬಿ ಸಿ ಸೇರಿ ಒಟ್ಟು ಆರು ಮಂದಿ ನಿರ್ಮಾಪಕರು. ಕಲಾವಿದರಾದ ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಡಿಓಪಿ ಉದಯ್ ಲೀಲಾ ಕಾರ್ಯಕ್ರಮದಲ್ಲಿದ್ದರು.