ಆರ್‌. ಕೇಶವಮೂರ್ತಿ

ನಟಿಯಾಗಬೇಕೆಂಬ ಯೋಚನೆ ಬಂದಿದ್ದು ಯಾವಾಗ?

ಚಿಕ್ಕ ವಯಸ್ಸಿನಿಂದಲೂ ಅಮ್ಮನ ಜೊತೆಗೆ ಸಿನಿಮಾ ಶೂಟಿಂಗ್‌ಗೆ ಹೋಗುತ್ತಿದ್ದೆ. ಮುಂದೆ ಅವರಿಗೆ ಆರ್ಟ್‌ ಡಿಪಾರ್ಟ್‌ಮೆಂಟ್‌ನಲ್ಲಿ ಸಹಾಯ ಕೂಡ ಮಾಡಲು ಶುರು ಮಾಡಿದೆ. ಸಿನಿಮಾ ವಾತಾವರಣದಲ್ಲೇ ಬೆಳೆದ ನನಗೆ ಸಹಜವಾಗಿ ನಟನೆ ಬಗ್ಗೆ ಆಸಕ್ತಿ ಹುಟ್ಟಿಕೊಂಡಿತ್ತು.

ನಿಮ್ಮ ನಟನೆಯ ಕನಸು ಮೊದಲು ಹಂಚಿಕೊಂಡಿದ್ದು ಯಾರ ಬಳಿ?

ನನ್ನ ತಾಯಿ ಬಳಿಯೇ ಹೇಳಿಕೊಂಡಿದ್ದು. ಆದರೆ, ನಾನು ನಟನಾ ಕ್ಷೇತ್ರದಲ್ಲಿದ್ದರಿಂದ ಅವರಿಗೆ ನಾನು ಹೇಳೋದಕ್ಕಿಂತ ಅವರೇ ತಿಳಿದುಕೊಂಡು ಸಪೋರ್ಟ್‌ ಮಾಡಿದರು. ಆದರೆ, ಯಾವತ್ತೂ ನೀನು ಇದೇ ಮಾಡು, ಸಿನಿಮಾಗೇ ಹೋಗು ಅಂತ ಮಾತ್ರ ಒತ್ತಾಯ ಮಾಡಿಲ್ಲ.


ತಾಯಿ ಜೊತೆಗೆ ಕಲಿತ ಸಿನಿಮಾ ವಿಷಯಗಳೇನು?

ನಾನು ಅವರ ಜೊತೆಗೆ ಹೆಚ್ಚಾಗಿ ಕತೆ ಓದುವುದು, ಸ್ಕ್ರಿಫ್ಟ್‌, ಡೈಲಾಗ್‌ ಕೇಳುವುದನ್ನು ಮಾಡುತ್ತಿದ್ದೆ. ಜೊತೆಗೆ ಆರ್ಟ್‌ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿದ್ದು.

ನೀವು ನಟನೆಗೆ ಏನೆಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದೀರಿ?

ನಾನು ಡಿಗ್ರಿ ಓದಿದ್ದು ದೆಹಲಿಯ ಅಶೋಕ ಯೂನಿವರ್ಸಿಟಿಯಲ್ಲಿ. ಇಂಗ್ಲಿಷ್‌ ಲಿಟರೇಚರ್‌ ಆಂಡ್‌ ಪರ್ಫಾರ್ಮೆನ್ಸ್‌ ಆಯ್ಕೆ ಮಾಡಿಕೊಂಡಿದ್ದೆ. ನಾಲ್ಕು ವರ್ಷದ ಕೋರ್ಸ್‌ ಇದು. ಅಲ್ಲಿ ಡ್ರಾಮಾಗಳಲ್ಲಿ ನಟಿಸಿದ್ದೇನೆ. ಯುಕೆಯಲ್ಲಿ ಆಕ್ಟಿಂಗ್‌ ಕೋರ್ಸ್‌ ಮಾಡಿಕೊಂಡು ಬಂದ ಮೇಲೆ ಜಾಹೀರಾತುಗಳಿಗೆ ಆಡಿಷನ್‌ ಕೊಡುತ್ತಿದ್ದೆ. ಇದರ ನಡುವೆ ನಟ ಪ್ರಕಾಶ್‌ ರೈ ಅವರ ನಿರ್ದಿಗಂತ ರಂಗಭೂಮಿ ಥಿಯೇಟರ್‌ನಲ್ಲಿ ಆ್ಯಕ್ಟಿಂಗ್‌ಗೆ ಪೂರಕವಾಗಿ ಸೈಕೋ ಫಿಜಿಕಲ್‌ ಕೋರ್ಸ್‌ ಮಾಡಿದ್ದೇನೆ.

ನಿಮ್ಮ ಮೊದಲ ಚಿತ್ರದ ಕತೆ ಯಾವ ರೀತಿ ಇದೆ?

ಈಗಾಗಲೇ ಪೂರ್ತಿ ಕತೆ ಕೇಳಿದ್ದೇನೆ. ತುಂಬಾ ಫ್ರೆಶ್‌ ಆಗಿದೆ. ಲವ್‌ ಮತ್ತು ಅಡ್ವೆಂಚರ್‌ ಸ್ಟೋರಿ. ಸ್ಟ್ರಾಂಗ್‌ ಹಾಗೂ ಇಂಡಿಫೆಂಡೆಂಟ್ ವುಮನ್‌ ಪಾತ್ರ ನನ್ನದು. ಈಗ ಬರುತ್ತಿರುವ ಕತೆಗಳಿಗಿಂತ ಬೇರೆ ರೀತಿ ಇದೆ.

ಪ್ರೀತಮ್ ಗುಬ್ಬಿ ಅವರ ನಿರ್ದೇಶನದಲ್ಲೇ ನಿಮ್ಮ ಮೊದಲ ಚಿತ್ರವಾಗಲು ಕಾರಣ?

ಅವರು ಬಂದು ಕೇಳಿದ್ದಲ್ಲ, ನಾನೇ ಆಡಿಷನ್‌ ಕೊಟ್ಟಿದ್ದು. ಅವರು ಕತೆ ಹೇಳಿದ ರೀತಿ, ‘ನಿಮಗೆ ಆಸಕ್ತಿ ಇದ್ದರೆ ನೋಡಿ’ ಎಂದು ಹೇಳಿ ಅವರು ಕೊಟ್ಟ ಫ್ರೀಡಮ್‌. ಇದೆಲ್ಲವೂ ನನಗೆ ಇಷ್ಟವಾಯಿತು.

ನೀವು ಥಿಯೇಟರ್‌ನಲ್ಲಿ ಇತ್ತೀಚೆಗೆ ನೋಡಿದ ಸಿನಿಮಾಗಳು ಯಾವುವು?

ರಕ್ಷಿತ್‌ ಶೆಟ್ಟಿ ಅವರ ‘ಸಪ್ತ ಸಾಗರದಾಚೆ ಎಲ್ಲೋ’ ಹಾಗೂ ರಾಜ್‌ ಬಿ ಶೆಟ್ಟಿ ಅವರ ‘ಸು ಫ್ರಮ್‌ ಸೋ’ ಸಿನಿಮಾಗಳನ್ನು ನೋಡಿದ್ದೇನೆ. ಈ ಎರಡೂ ನನ್ನ ಮೆಚ್ಚಿನ ಸಿನಿಮಾಗಳೇ.

ನಿಮ್ಮ ತಾಯಿ ಅವರ ಸಿನಿಮಾಗಳನ್ನು ನೋಡಿದ್ದೀರಾ?

ಎಲ್ಲಾ ಸಿನಿಮಾಗಳನ್ನು ಅಮ್ಮನಿಗೆ ಬೋರ್‌ ಆಗುಷ್ಟು ಸಲ ನಾನು ನೋಡಿದ್ದೇನೆ. ನನಗೆ ಈ ಪೈಕಿ ಹೆಚ್ಚು ಇಷ್ಟ ಆಗಿದ್ದು ‘ಅವ್ವ’ ಹಾಗೂ ‘ದೇವೀರಿ’ ಚಿತ್ರಗಳು.

ಈಗ ಗೌರಿ ಲಂಕೇಶ್‌ ಅವರು ಇದ್ದಿದ್ದರೆ?

ತುಂಬಾ ಖುಷಿ ಆಗುತ್ತಿದ್ದರು. ಅವರು ತೀರಿಕೊಂಡಾಗ ನನಗೆ 13 ವರ್ಷ. ನಾನು ಆರ್ಟ್‌ ಫೀಲ್ಡ್‌ಗೆ ಹೋಗುತ್ತೇನೆ ಅಂತ ಅವರಿಗೆ ಗೊತ್ತಿತ್ತು.

ನೀವು ಸಾಹಿತ್ಯದ ವಿದ್ಯಾರ್ಥಿ ಅಲ್ವ, ಯಾರ ಸಾಹಿತ್ಯ ನಿಮಗೆ ಹೆಚ್ಚು ಇಷ್ಟ?

ನಮ್ಮ ತಾತ ಲಂಕೇಶ್‌ ಅವರ ‘ಕಲ್ಲು ಕರಗುವ ಸಮಯ’ ನನಗೆ ತುಂಬಾ ಇಷ್ಟ. ಮೊದಲಿನಿಂದಲೂ ಕುವೆಂಪು ಅವರ ಸಾಹಿತ್ಯ ಓದುತ್ತಿದ್ದೆ. ಆ ನಂತರ ಅರುಂಧತಿ ರಾಯ್‌ ಹಾಗೂ ಅಮಿತ್‌ ಚೌಧರಿ ಬರಹಗಳು ಇಷ್ಟ ಆಗುತ್ತಾ ಬಂದವು.