ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಯುವ ಪ್ರತಿಭೆಯ ಎಂಟ್ರಿಯಾಗಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಇಬ್ಬರೂ ಮಾತನಾಡಿದರು.
ಸಿನಿವಾರ್ತೆ :
ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ಯುವ ಪ್ರತಿಭೆಯ ಎಂಟ್ರಿಯಾಗಿದೆ. ಕಿಚ್ಚ ಸುದೀಪ್ ಅವರ ಸೋದರಳಿಯ ಸಂಚಿತ್ ಸಂಜೀವ್ ‘ಮ್ಯಾಂಗೋ ಪಚ್ಚ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಇಬ್ಬರೂ ಮಾತನಾಡಿದರು.
ನಾನು ಇಲ್ಲಿಯೇ ಇರೋಕೆ ಬಂದವನು
ಯುವ ಪ್ರತಿಭೆ ಸಂಚಿತ್ ಸಂಜೀವ್, ‘ನನ್ನ ಕನಸನ್ನು ಕಂಡು, ಅದನ್ನು ಬೆಳೆಸಿದ ಸುದೀಪ್ ಮಾವ ನನಗೆ ತಂದೆಗಿಂತಲೂ ಹೆಚ್ಚು. ಚಿತ್ರರಂಗದಲ್ಲಿ ಏನಾದರೂ ವಿಭಿನ್ನವಾಗಿ, ವಿಶಿಷ್ಟವಾಗಿ ಮಾಡಬೇಕು ಎಂಬುದು ಮಾತ್ರ ನನ್ನ ಮನಸ್ಸಿನಲ್ಲಿತ್ತು. ನನಗೆ ಸಿನಿಮಾ ಬಿಟ್ಟು ಬೇರೇನೂ ಗೊತ್ತಿಲ್ಲ. ನಾನು ಇಲ್ಲಿಯೇ ಇರೋಕೆ ಬಂದವನು’ ಎಂದರು.
‘ಸಿನಿಮಾ ನೋಡಿದ ಮೇಲೆ ದೀಪು ಮಾಮ ‘ಚೆನ್ನಾಗಿ ಮಾಡಿದ್ದೀಯಾ ಚಿನ್ನಾ’ ಎಂದಾಗ ನನಗೆ ದೊಡ್ಡ ಧೈರ್ಯ ಬಂತು. ‘ನೀನು ತಪ್ಪು ಮಾಡಿದರೆ ಮಾತ್ರ ನಿನಗೆ ಅರ್ಥವಾಗುವುದು’ ಎಂದು ಅವರು ನನಗೆ ಮುಕ್ತ ಸ್ವಾತಂತ್ರ್ಯ ನೀಡಿದ್ದರು. ಅವರ ಜೂನಿಯರ್ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆಯಿದೆ. ನನ್ನ ವ್ಯಕ್ತಿತ್ವ ನನ್ನದೇ ಆದರೂ, ನನ್ನ ಗುರುತಿನ ಬಹುದೊಡ್ಡ ಭಾಗ ಅವರೇ ಆಗಿದ್ದಾರೆ’ ಎಂದು ಸಂಚಿತ್ ಹೇಳಿದರು.
ನೆಪೋಟಿಸಂ ಕುರಿತ ಪ್ರಶ್ನೆಗೆ, ‘ನಾನು ನೆಪೋಟಿಸಂ ಎಂಬ ಪದದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಕಠಿಣ ಪರಿಶ್ರಮವೊಂದೇ ಇಲ್ಲಿ ದಾರಿ’ ಎಂದು ಹೇಳಿದರು.
ಸಂಚಿತ್ ಮಾತುಗಳ ನಂತರ ‘ನೆಪೋಟಿಸಂ’ ಪ್ರಶ್ನೆಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದ ಕಿಚ್ಚ ಸುದೀಪ್, ‘ಮುಂದಿನ ಪೀಳಿಗೆ ಚಿತ್ರರಂಗಕ್ಕೆ ಬರುವುದು ದೊಡ್ಮನೆಯಿಂದಲೇ ಶುರುವಾಯಿತಲ್ಲವೇ? ಹಾಗಾದರೆ ಶಿವರಾಜ್ ಕುಮಾರ್ ಅವರಿಗೂ ಇದೇ ಪ್ರಶ್ನೆ ಕೇಳಬೇಕಿತ್ತಲ್ಲ? ಅದು ಹಾಗಲ್ಲ. ಬಾಂಬೆಯಲ್ಲಿ ಹುಟ್ಟಿಕೊಂಡ ಈ ಪದವನ್ನು ಇಲ್ಲಿಗೆ ತರಬೇಡಿ. ಈ ಚಿತ್ರರಂಗ ಯಾರೊಬ್ಬರ ಜಾಗವೂ ಅಲ್ಲ. ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಅವರೆಲ್ಲಾ ಪ್ರತಿಭೆಯಿಂದ ಜನ ಮನ ಗೆದ್ದವರು. ನನ್ನ ಮನೆಯಲ್ಲಿ ತುಂಬಾ ಜನ ಇದ್ದಾರೆ, ಆದರೆ ಚಿತ್ರರಂಗಕ್ಕೆ ಬಂದಿರುವುದು ಇವನೊಬ್ಬನೇ. ಹಾಗಾಗಿ ನೆಪೊಟಿಸಂ ಅನ್ನೋ ಪದ ನಮಗೆ ಸೂಟ್ ಆಗಲ್ಲ. ನಮ್ಮ ಕರ್ನಾಟಕದವರಿಗೆ ಅರ್ಥವಾಗುವುದು ಒಂದೇ, ಅದು ಕಲೆ’ ಎಂದು ಸುದೀಪ್ ಸ್ಪಷ್ಟಪಡಿಸಿದರು.
ಚಿತ್ರದ ಪ್ರಚಾರಕ್ಕೆ ನಾಯಕ, ನಾಯಕಿ ಬರದ ಕುರಿತು ಮಾತಾಡಿದ ಅವರು, ‘ಹೊಸಬರ ಸಿನಿಮಾ ಬಂದಾಗ ಯುವ ಪ್ರತಿಭೆಗಳು ಪಡುವ ಕಷ್ಟವನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಸಿನಿಮಾ ಬಂದ ಮೇಲೆ ಜನರೇ ಅವರ ಕುರಿತು ಮಾತನಾಡಲಿ ಎಂದು ನಾನು ಕಾಯುತ್ತಿದ್ದೆ. ಅದಕ್ಕಾಗಿ ಅವರೂ ಪ್ರಚಾರಕ್ಕೆ ಬರಲಿಲ್ಲ, ನಾನೂ ಬರಲಿಲ್ಲ’ ಎಂದರು.
‘ನಾನು ಕಳೆದ 30 ವರ್ಷಗಳಿಂದ ಚಿತ್ರರಂಗದಲ್ಲಿ ಪ್ರೀತಿಯನ್ನು ಸಂಪಾದಿಸಿದ್ದೇನೆ. ಅದನ್ನು ಎಂದಿಗೂ ನನಗಾಗಿ ಬಳಸಿಕೊಂಡಿಲ್ಲ, ಆದರೆ ನನ್ನ ಮಗನಿಗಾಗಿ ಬಳಸುತ್ತಿದ್ದೇನೆ. ಮೊದಲ ಪ್ರದರ್ಶನದಲ್ಲಿ ಚಿತ್ರಮಂದಿರದಲ್ಲಿ ಪ್ರಿಯಾ ಒಂದು ಸೀಟ್ ಖಾಲಿ ಬಿಟ್ಟಿದ್ದರು. ಅದು ನನ್ನ ಅಮ್ಮನಿಗೆ ಎಂದು ಅವರು ಹೇಳಿದಾಗ ಮನಸ್ಸಿಗೆ ತಟ್ಟಿತು. ಸಂಚಿತ್‌ನನ್ನು ಬೆಳ್ಳಿತೆರೆಯಲ್ಲಿ ನೋಡಬೇಕು ಎಂಬುದು ಅವರ ದೊಡ್ಡ ಕನಸಾಗಿತ್ತು’ ಎಂದು ಹೇಳಿದರು.
ಸಿನಿಮಾ ವಸ್ತುವಿನ ಕುರಿತು ಮಾತನಾಡಿದ ಅವರು, ‘ಟಿಪಿಕಲ್ ಕ್ರಿಂಜ್ ಕಥೆಗಳ ಹಿಂದೆ ಹೋಗಬೇಡಿ. ಬೇರೆಯವರಿಂದ ಮಾಡಲು ಸಾಧ್ಯವಾಗದಂತಹ ಸಿನಿಮಾಗಳನ್ನು ಮಾಡಿ ಎಂದು ಹೇಳಿದ್ದೆ. ಅದಕ್ಕೆ ತಕ್ಕಂತೆ ಸಿನಿಮಾ ಬಂದಿದೆ’ ಎಂದರು.
ನಿರ್ದೇಶಕ ವಿವೇಕ್, ನಿರ್ಮಾಪಕರಾದ ಪ್ರಿಯಾ ಸುದೀಪ್, ಕಾರ್ತಿಕ್ ಗೌಡ, ನಾಯಕ ನಟಿ ಕಾಜಲ್ ಕುಂದರ್, ಪ್ರಶಾಂತ್ ಹಿರೇಮಠ, ಜೈ, ಚರಣ್ ರಾಜ್ ಇದ್ದರು.
