ಹಾನಗಲ್ಲ: ಡಿಜಿಟಲ್ ಕಾಲದಲ್ಲಿಯೂ ಕೂಡ ರಂಗಭೂಮಿಯ ಆಸಕ್ತಿ ಕಲಾಸಕ್ತರಲ್ಲಿ ಮಾಸಿಲ್ಲ, ಯುವ ಪೀಳಿಗೆಗೆ ಈ ರಂಗ ಕಲೆಯನ್ನು ಮುನ್ನಡೆಸುವ ಹೊಣೆಗಾರಿಕೆ ನೀಡಿ ರಂಗಕಲೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸುವ ಸಂಕಲ್ಪ ಅಗತ್ಯವಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಕರೆ ನೀಡಿದರು.ಹಾನಗಲ್ಲ ತಾಲೂಕಿನ ರಂಗ ಗ್ರಾಮ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಜಾನನ ಯುವಕ ಮಂಡಳ ಸಂಯುಕ್ತವಾಗಿ ಆಯೋಜಿಸಿದ ರಾಷ್ಟ್ರಕವಿ ಕುವೆಂಪು ಅವರ ಬೆರಳ್‌ಗೆ ಕೊರಳ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗ ನಾವು ಎಐ ಕಾಲದಲ್ಲಿದ್ದೇವೆ. ಆದರೆ ಪ್ರತ್ಯಕ್ಷವಾಗಿ ಕಲಾವಿದರು ಅಭಿನಯಿಸುವುದನ್ನು ನೋಡಿ ಆನಂದಿಸುವುದರಲ್ಲಿರುವ ಕಲೆಯ ತೃಪ್ತಿ ಕೃತಕ ಪ್ರದರ್ಶನಗಳಲ್ಲಿ ಸಿಗಲಾರದು. ನಾಟಕಗಳು ನಮ್ಮ ಸಂಸ್ಕೃತಿ ಪರಂಪರೆಯ ಅಭಿವ್ಯಕ್ತಿಗಳು. ಇಂತಹ ಅಭಿರುಚಿಯನ್ನು ಮುಂದಿನ ಪೀಳಿಗೆಯಲ್ಲಿ ಉಳಿಸುವ ಹೊಣೆ ಹೊರಬೇಕು. ಬದುಕಿನ ತಲ್ಲಣ, ಜೀವನಾನುಭವಗಳ ಅಭಿವ್ಯಕ್ತಿಯೇ ಇಲ್ಲಿರುವುದರಿಂದ ನಾಟಕಗಳು ಹಚ್ಚು ಆಪ್ತವಾಗುತ್ತವೆ. ಇಂತಹ ಕಲಾ ವೈಭವ ಕೇವಲ ಮನರಂಜನೆಗೆ ಸೀಮಿತವಾಗದೇ ನ್ಯಾಯ ನೀತಿ ನಿರೂಪಣೆಯ ಹೊಣೆಗಾರಿಕೆಯಾಗಿದೆ ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ, ಗ್ರಾಮ ಭಾರತದಲ್ಲಿನ ಸಾಮಾಜಿಕ, ಭಾವನಾತ್ಮಕ ಸತ್ಯಗಳನ್ನು ಸಾರುವ ನಾಟಕಗಳು ಸಾರ್ವಕಾಲಿಕ ಸಂವೇದನೆಗಳನ್ನು ಅಭಿವ್ಯಕ್ತಿಸುತ್ತವೆ. ಮನರಂಜನೆ ಮಾತ್ರವಲ್ಲ. ಸಾಮಾಜಿಕ ಶಿಕ್ಷಣದ ಅಭಿವ್ಯಕ್ತಿ ಹೊಂದಿದ ನಾಟಕಗಳು ಒಂದು ಕಾಲದಲ್ಲಿ ಪ್ರತಿ ಹಳ್ಳಿ ಮನೆಗಳಲ್ಲಿ ಕಲಾವಿದರನ್ನು ಹುಟ್ಟು ಹಾಕಿವೆ. ಬದಲಾದ ಕಾಲಕ್ಕೆ ನಾಟಕಗಳು ವಿರಳವಾಗುತ್ತಿವೆಯಾದರೂ, ಶೇಷಗಿರಿ ಮಾತ್ರ ಇಡೀ ರಾಜ್ಯದಲ್ಲಿ ರಂಗ ವೈಭವಕ್ಕೆ ಹೆಸರು ಮಾಡಿದೆ ಎಂದರು.ಸಾಹಿತಿ ಸತೀಶ ಕುಲಕರ್ಣಿ ನಾಟಕ ಪ್ರದರ್ಶನ ಕುರಿತು ಪ್ರತಿಕ್ರಿಯಿಸಿ, ಕುವೆಂಪು ಅವರ ಬೆರಳ್‌ಗೆ ಕೊರಳ ಹತ್ತು ಹಲವು ನೆಲೆಯಲ್ಲಿ ಜಾಗೃತಿ ಮೂಡಿಸುವ ಒಂದು ದೃಶ್ಯ ಕಾವ್ಯ. ಹೊಸ ತಲೆಮಾರಿಗೆ ಹತ್ತು ಹಲವು ಎಚ್ಚರಿಕೆಗಳನ್ನು ನೀಡುವ ಶಕ್ತಿ ಕಾವ್ಯವಾಗಿದೆ. ಏಕಲವ್ಯನಿಂದ ಬೆರಳ ಬೇಡಿದ ದ್ರೋಣಾಚಾರ್ಯರ ತಳಮಳ, ಗುರುವಿನ ಸಂಕಟಗಳ ಸರಮಾಲೆಯೇ ಇಲ್ಲಿದೆ. ಮೇಲು ಕೀಳಿನ ತಾರತಮ್ಯ ನೀತಿಗೆ ಇದು ಸ್ಪಷ್ಟ ನಿದರ್ಶನ. ಹಳ್ಳಿಯ ಹುಡುಗರ ಈ ರಂಗ ಪ್ರದರ್ಶನ ಅದ್ಭುತವಾಗಿತ್ತು ಎಂದರು.ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಸೊರಬ ತಾಲೂಕು ಸಣ್ಣ ನೀರಾವರಿ ಇಲಾಖೆ ಅಭಿಯಂತರ ಕಾಂತಪ್ಪ ಹಿತ್ತಲಮನಿ, ಚಂದ್ರಗೌಡ ಪಾಟೀಲ ಮುಖ್ಯ ಅತಿಥಿಗಳಾಗಿದ್ದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದ ಪ್ರಭು ಗುರಪ್ಪನವರ ಆಶಯ ನುಡಿ ನುಡಿದರು. ಕಾರ್ಯಕ್ರಮದಲ್ಲಿ ಡಾ.ಎಂ. ಪ್ರಸನ್ನಕುಮಾರ, ಶೇಖರ ಭಜಂತಿ, ಮಂಜುನಾಥ ಹಟ್ಟಿಯವರ, ನರಸಿಂಹ ಕೋಮಾರ, ಕರಿಯಪ್ಪ ಹಂಚಿನಮನಿ, ಅರುಣಕುಮಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಬಿಂದು ರಕ್ಷಿದಿ, ರವಿ ಅಥರ್ವ, ಮಹಾಂತೇಶ ಆದಿಮ ಅವರು ರಂಗಗೀತೆಗಳನ್ನುಹಾಡಿದರು. ಸಿದ್ದು ಮಲಗುಂದ ಸ್ವಾಗತಿಸಿದರು. ಜಗದೀಶ ಮಲಗುಂದ ಕಾರ್ಯಕ್ರಮ ನಿರೂಪಿಸಿದರು. ನಾಗರಾಜ ಧಾರೇಶ್ವರ ವಂದಿಸಿದರು.ರಂಗ ಕಲೆ ಶಾಶ್ವತವಾಗಿ ಉಳಿಸುವ ಹೊಣೆ ನಮ್ಮದು: ಡಾ. ಸುರೇಶ ಜಂಗಮಶೆಟ್ಟಿ
ಡಿಜಿಟಲ್ ಕಾಲದಲ್ಲಿಯೂ ಕೂಡ ರಂಗಭೂಮಿಯ ಆಸಕ್ತಿ ಕಲಾಸಕ್ತರಲ್ಲಿ ಮಾಸಿಲ್ಲ, ಯುವ ಪೀಳಿಗೆಗೆ ಈ ರಂಗ ಕಲೆಯನ್ನು ಮುನ್ನಡೆಸುವ ಹೊಣೆಗಾರಿಕೆ ನೀಡಿ ರಂಗಕಲೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸುವ ಸಂಕಲ್ಪ ಅಗತ್ಯವಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ. ಸುರೇಶ ಜಂಗಮಶೆಟ್ಟಿ ಕರೆ ನೀಡಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.