ಸಾರಾಂಶ
ರಾಜವರ್ಧನ್ ನಟನೆಯ ಪ್ರಣಯಂ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಫೆಬ್ರವರಿ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
ಕನ್ನಡಪ್ರಭ ಸಿನಿವಾರ್ತೆ
ರಾಜವರ್ಧನ್ ಹಾಗೂ ನೈನಾ ಗಂಗೂಲಿ ನಟನೆಯ ‘ಪ್ರಣಯಂ’ ಚಿತ್ರವು ಫೆ.9ಕ್ಕೆ ತೆರೆಕಾಣುತ್ತಿದ್ದು, ಇದೀಗ ಚಿತ್ರದ ಟ್ರೇಲರನ್ನು ಉಪ ಮೇಯರ್ ಮೋಹನ್ ರಾಜು ಬಿಡುಗಡೆ ಮಾಡಿದ್ದಾರೆ. ಎಸ್ ದತ್ತಾತ್ರೇಯ ನಿರ್ದೇಶನದ ಈ ಚಿತ್ರವನ್ನು ಪರಮೇಶ್ ನಿರ್ಮಿಸಿದ್ದಾರೆ.ದತ್ತಾತ್ರೇಯ ಮಾತನಾಡಿ, ‘ಈ ಚಿತ್ರದ ಸ್ಕ್ರಿಪ್ಟ್ ಕೇಳಿದ ಮೇಲೆ ನಿರ್ಮಾಪಕರು ಇಷ್ಟಪಟ್ಟು ಈ ಸಿನಿಮಾ ಮಾಡಿದ್ದಾರೆ. ಒಂದು ಉತ್ತಮ ಸಿನಿಮಾ ಮಾಡಿರುವ ಖುಷಿ’ ಎಂದರು. ನಿರ್ಮಾಪಕ ಪರಮೇಶ್, ‘ನಾನು ಈ ಹಿಂದೆ ಪಲ್ಲಕ್ಕಿ, ಗಣಪ, ಪಾರಿಜಾತ ಸೇರಿ 9 ಚಿತ್ರಗಳನ್ನು ನಿರ್ಮಿಸಿದ್ದೇನೆ. ತುಂಬಾ ಧೈರ್ಯ ಮಾಡಿ ಈ ಸಿನಿಮಾ ಮಾಡಿದ್ದೇನೆ. ಜನ ಈ ಚಿತ್ರವನ್ನು ನೋಡುತ್ತಾರೆಂಬ ನಂಬಿಕೆ ಇದೆ’ ಎಂದರು. ಜಯಂತ್ ಕಾಯ್ಕಿಣಿ, ಸಂಗೀತ ನಿರ್ದೇಶಕ ಮನೋಮೂರ್ತಿ ಇದ್ದರು.
ರಾಜವರ್ಧನ್, ‘ಈಗ ಕುಟುಂಬಗಳಲ್ಲಿ ನಡೆಯುವ ಘಟನೆಗಳೇ ಈ ಚಿತ್ರದ ಕತೆ. ಚಿತ್ರದಲ್ಲಿ ನನ್ನ ಪಾತ್ರದ ಹೆಸರು ಗೌತಮ್’ ಎಂದರು. ಗೋವಿಂದೇಗೌಡ, ಪ್ರಶಾಂತ್, ಸಮೀಕ್ಷಾ, ಪ್ರಿಯಾ ತರುಣ್ ಚಿತ್ರದಲ್ಲಿ ನಟಿಸಿದ್ದಾರೆ. ವಿ ನಾಗೇಶ್ ಆಚಾರ್ಯ ಕ್ಯಾಮೆರಾ ಚಿತ್ರಕ್ಕಿದೆ.