ಸತೀಶ್‌ ನೀನಾಸಂ ಅವರ ಮಹತ್ವಾಕಾಂಕ್ಷೆಯ ಸಿನಿಮಾ ‘ದಿ ರೈಸ್ ಆಫ್ ಅಶೋಕ’ ಇವತ್ತು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಅಶೋಕ ಧೋಂಡಾಳೆ ನಿರ್ದೇಶನದ, ವರ್ಧನ್ ಹರಿ, ಜೈಷ್ಣವಿ, ಸತೀಶ್ ನೀನಾಸಂ ನಿರ್ಮಾಣದ ಈ ಸಿನಿಮಾ ಕುರಿತು ಮಾತುಕತೆ.

 ರಾಜೇಶ್ ಶೆಟ್ಟಿ

ಈ ಚಿತ್ರಕ್ಕಾಗಿ ಎಷ್ಟು ಬೆವರು ಹರಿಸಿದಿರಿ, ಎಷ್ಟು ಕಣ್ಣೀರು ಹರಿಸಿದಿರಿ?

ಕಣ್ಣೀರು ಹರಿಸಿದ್ದು ಕಡಿಮೆ, ಬೆವರು ಹರಿಸಿದ್ದು ಜಾಸ್ತಿ. ತನು ಮನ ಧನ ಎಲ್ಲಾ ಅರ್ಪಿಸಿದ್ದೇನೆ. ಈ ಸಿನಿಮಾಗಾಗಿ ಕಾರೊಂದು ಬಿಟ್ಟರೆ ಬೇರೆಲ್ಲವನ್ನೂ ಹಾಕಿದ್ದೇನೆ. ಸಾಕಷ್ಟು ಸಿನಿಮಾ ಆಫರ್‌ಗಳನ್ನು ಬಿಟ್ಟಿದ್ದೇನೆ. ಬರವಣಿಗೆ, ತಾಂತ್ರಿಕ ಕೆಲಸ ಎಲ್ಲದರಲ್ಲೂ ತೊಡಗಿಸಿಕೊಂಡಿದ್ದೇನೆ. ಅಶೋಕ ಸಿನಿಮಾ ಅನ್ನುವುದಕ್ಕಿಂತ ನನ್ನ ಬದುಕಾಗಿಬಿಟ್ಟಿದೆ. ಜವಾಬ್ದಾರಿ ತೆಗೆದುಕೊಂಡು ಎಲ್ಲವನ್ನೂ ನಿಭಾಯಿಸಿದ್ದೇನೆ. ಜನರ ಈ ಸಿನಿಮಾ ನೋಡಿ ಚೆನ್ನಾಗಿ ಮಾಡಿದ್ದಾನಪ್ಪಾ ಎಂದು ಮೆಚ್ಚಿಕೊಂಡರೆ ಸಾಕು ಎಲ್ಲಾ ಶ್ರಮ, ಬೆವರು, ಕಣ್ಣೀರು ಮರೆತುಹೋಗುತ್ತದೆ.

ಯಾಕೆ ಈ ಸಿನಿಮಾವನ್ನು ಎದೆ ಹಾಕಿಕೊಂಡು ರೂಪಿಸಿದಿರಿ?

70ರ ದಶಕದ ಕಾಲಘಟ್ಟದ ಕತೆ. ಕ್ರಾಂತಿಕಾರಿ ಯುವಕನೊಬ್ಬನ ಹೋರಾಟದ ಕತೆ. ಹಸಿವಿನ ಕತೆ. ಬದುಕಿನ ಕತೆ. ಈ ಕತೆಯನ್ನು ಜಾಸ್ತಿ ಜನಕ್ಕೆ, ದೊಡ್ಡ ಮಟ್ಟದಲ್ಲಿ ಹೇಳಬೇಕಿತ್ತು. ಅಷ್ಟೇ ಆಸೆ ಇದ್ದಿದ್ದು. ಅದಕ್ಕಾಗಿ ಇಡೀ ತಂಡ ಶ್ರಮಿಸಿದೆ. ಯಶ್‌ ಅವರು ಕೂಡ ‘ಕೆಜಿಎಫ್‌’ಗೆ ಮೊದಲು ಪ್ಯಾನ್‌ ಇಂಡಿಯಾ ಸಿನಿಮಾ ಮಾಡುತ್ತೇನೆ ಎಂದು ಹೇಳಿರಲಿಲ್ಲ. ಅವರು ಮಾಡಿದರು. ನಾನೂ ಈ ಕತೆಯ ತೀವ್ರತೆ, ಗಾಢತೆ ನೋಡಿ ಬೇರೆ ಭಾಷೆಗಳಿಗೂ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಿದೆ. ಕೆಲವರು ಇದು ಹುಚ್ಚು ಎಂದರು. ಇರಬಹುದು, ಪ್ರತಿಯೊಬ್ಬರಿಗೂ ಯಾವುದಾದರೊಂದು ಹುಚ್ಚು ಇರಬೇಕು. ನನ್ನದು ಸಿನಿಮಾ ಹುಚ್ಚು. ಆ ಹುಚ್ಚಿನ ಧನ್ಯತೆ ಪ್ರೇಕ್ಷಕರ ನಿರ್ಧಾರದ ಮೇಲಿದೆ.

ಅಶೋಕ ನಿಮ್ಮಲ್ಲಿ ಇನ್ನೂ ಇದ್ದಾನೆಯೇ?

ಅಶೋಕ ಜೀವನ ಪೂರ್ತಿ ನನ್ನ ಜೊತೆ ಇರುತ್ತಾನೆ. ನನ್ನನ್ನು ಆವರಿಸಿಕೊಂಡು ಬಿಟ್ಟಿದ್ದಾನೆ. ಹಾಗೆ ನೋಡಿದರೆ ಅಶೋಕ ಮತ್ತು ನಾನು ಬೇರೆ ಬೇರೆಯಲ್ಲ. ಇಬ್ಬರೂ ಒಂದೇ. ಇಬ್ಬರಲ್ಲೂ ಇರುವ ಬೆಂಕಿ ಒಂದೇ. ಹಠ ಒಂದೇ. ಹುಮ್ಮಸ್ಸು ಒಂದೇ. ಬಹುಶಃ ಅದೇ ಕಾರಣಕ್ಕೆ ಈ ಕತೆ ನನಗೆ ಅಷ್ಟೊಂದು ತಾಕಿದೆ. ನನಗೆ ತಾಕಿದೆ ಅಂದ ಮೇಲೆ ಪ್ರೇಕ್ಷಕರಿಗೂ ತಾಕುತ್ತದೆ.

ಯಾರಿವನು ಅಶೋಕ, ಯಾರನ್ನು ಪ್ರತಿನಿಧಿಸುತ್ತಾನೆ?

ಅಶೋಕ ಎಲ್ಲರ ಪ್ರತಿನಿಧಿ. ಒಳ್ಳೆಯದರ ಪ್ರತಿನಿಧಿ. ಶಾಂತಿಯ ಪ್ರತಿನಿಧಿ. ಕ್ರಾಂತಿಯ ಪ್ರತಿನಿಧಿ. ಎಲ್ಲಿ ಕೆಟ್ಟದ್ದು ನಡೆಯುತ್ತದೋ ಅದರ ವಿರುದ್ಧ ನಿಲ್ಲುವವರ ಪ್ರತಿನಿಧಿ. ಒಳ್ಳೆಯದಕ್ಕೆ ಅಶೋಕ ಇರುತ್ತಾನೆ. ಎಲ್ಲರೊಳಗೂ ಅಂಥಾ ಒಬ್ಬ ಅಶೋಕ ಇರಬೇಕು.

ಕಲಿತ ಪಾಠಗಳೇನು? ಬಿಸಿನೆಸ್‌ ಎಷ್ಟು ಅರ್ಥ ಮಾಡಿಕೊಂಡಿರಿ? 

ಒಂದು ಒಳ್ಳೆಯ ಸಿನಿಮಾ ಮಾಡಿದರೆ ಎಲ್ಲವೂ ಕೂಡಿಬರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಕಲಿತೆ. ಒಳ್ಳೆಯ ಸಿನಿಮಾ ಮಾಡಿದಾಗ ಭಯ ಇರುವುದಿಲ್ಲ. ಎಲ್ಲರಿಗೂ ಜೋರಾಗಿ ಕೂಗಿ ಹೇಳಬಹುದು. ಸಿನಿಮಾ ತೋರಿಸಬಹುದು. ಜೊತೆ ನಿಲ್ಲಲು ಕೇಳಬಹುದು. ಹಾಗೇ ತೆಲುಗಿನ ಕಲಾಸೃಷ್ಟಿ ಸಂಸ್ಥೆಯವರು ಸಿನಿಮಾ ಮೆಚ್ಚಿ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ವಿತರಣೆ ಹಕ್ಕು ಪಡೆದುಕೊಂಡಿದ್ದಾರೆ. ತಮಿಳಿನಲ್ಲಿ ಕರುಮಾರಿ ಸಿನಿಮಾಸ್ ಸಂಸ್ಥೆ ಒಂದೊಳ್ಳೆ ಮೊತ್ತ ಕೊಟ್ಟು ವಿತರಣೆ ಹಕ್ಕು ಖರೀದಿಸಿದ್ದಾರೆ. ಒಳ್ಳೆಯ ಸಿನಿಮಾ ಇದ್ದರೆ ಒಳ್ಳೆಯ ಬಿಸಿನೆಸ್ ಮಾಡಬಹುದು.

ನಿಮ್ಮ ನಟನೆ, ಬರವಣಿಗೆ, ಮಾರ್ಕೆಟಿಂಗ್ ಸ್ಟ್ರಾಟೆಜಿ ಎಲ್ಲವನ್ನೂ ಬಳಸಿದ್ದೀರಿ, ಸಮಾಧಾನವೇ?

ತುಂಬು ತೃಪ್ತಿ ಇದೆ. ಜನರನ್ನು ತಲುಪಿರುವ ಸಮಾಧಾನವಿದೆ. ಸಾಕಷ್ಟು ಅಡೆತಡೆಗಳಿದ್ದವು. ನಿರ್ದೇಶಕ ವಿನೋದ್ ಧೋಂಡಾಳೆ ಅಗಲಿದರು. ಕೆಲವರು ಈ ಸಿನಿಮಾ ರಿಲೀಸ್‌ ಆಗುವ ಬಗ್ಗೆ ಅನುಮಾನ ಕೂಡ ವ್ಯಕ್ತಪಡಿಸಿದ್ದರು. ನೋವೆಲ್ಲವೂ ನಮ್ಮೊಳಗಿರಲಿ, ನಮ್ಮ ಕತೆಯನ್ನು ನೋಡಿ ಜನ ಮೆಚ್ಚಲಿ.

ಈ ಪಯಣದಲ್ಲಿ ನೀವು ಕಳಕೊಂಡಿದ್ದೇನು, ಪಡಕೊಂಡಿದ್ದೇನು?

ಕಳೆದುಕೊಳ್ಳುವುದು, ಪಡೆದುಕೊಳ್ಳುವುದು ಬದುಕಲ್ಲಿ ಇದ್ದಿದ್ದೇ. ಆದರೆ ನಾನು ಪಯಣವನ್ನು ನಂಬುವವನು. ಪ್ರಯತ್ನಗಳನ್ನು ನಂಬುವವನು. ಸೋಲು, ಗೆಲುವಿನ ಹೊರತಾಗಿ ಅಂತಿಮವಾಗಿ ಉಳಿಯುವುದು ಪ್ರಯತ್ನ ಮಾತ್ರ. ಗಾಢವಾಗಿ ಒಂದು ಪ್ರಯತ್ನ ಮಾಡಿದಾಗ ಪ್ರಕೃತಿ ಹರಸುತ್ತದೆ ಅನ್ನುತ್ತಾರೆ. ಪ್ರಕೃತಿಯ ಹಾರೈಕೆ, ಪ್ರೇಕ್ಷಕರ ಪ್ರೀತಿ ನಮ್ಮ ಮೇಲಿರಲಿ ಎಂಬುದಷ್ಟೇ ಆಶಯ.