ಸಾರಾಂಶ
ಒಂದು ಸರಳ ಪ್ರೇಮಕಥೆ ಹಾಡು ಬಿಡುಗಡೆ ಮಾಡಿದ ಗಣೇಶ್. ಈ ವೇಳೆ ತಮ್ಮ ಹಾಗೂ ಸುನಿ ಕಾಂಬಿನೇಶನ್ ಸಿನಿಮಾವೊಂದಕ್ಕೆ ನಿರ್ಮಾಪಕರಿಂದ ಬ್ರೇಕ್ ಬಿತ್ತು ಎಂದೂ ಹೇಳಿದ್ದಾರೆ.
ಕನ್ನಡಪ್ರಭ ಸಿನಿವಾರ್ತೆ
‘ಸಿಂಪಲ್ ಸುನಿ ಜೊತೆ ನನ್ನ ಸಿನಿಮಾ ಅನೌನ್ಸ್ ಆಗಿತ್ತು. ಆದರೆ ನಿರ್ಮಾಪಕರ ಚೆಕ್ ಬೌನ್ಸ್ ಆಯ್ತು. ಸಿನಿಮಾ ಕೆಲಸಕ್ಕೆ ಬ್ರೇಕ್ ಬಿತ್ತು. ’ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮಕಥೆ’ ಸಿನಿಮಾದ ಹಾಡು ಬಿಡುಗಡೆ ಬಳಿಕ ನಟ ಗಣೇಶ್ ಜೋಕ್ ಹಾರಿಸುತ್ತಲೇ ಹೇಳಿದ ಮಾತಿದು. ಸುನಿ ಅವರೊಂದಿಗೆ ಗಣೇಶ್ ಅನೌನ್ಸ್ ಮಾಡಿರುವ ಸಿನಿಮಾ ‘ದಿ ಸ್ಟೋರಿ ಆಫ್ ರಾಯಗಢ’. ಸದ್ಯ ಈ ಸಿನಿಮಾ ನಿರ್ಮಾಪಕರಿಲ್ಲದೇ ಸ್ಥಗಿತಗೊಂಡಿದೆ ಎನ್ನಲಾಗಿದೆ. ‘ಸುನಿ ಹೆಸರಲ್ಲಷ್ಟೇ ಸಿಂಪಲ್ ಇದೆ. ಆ ಟೈಟಲ್ ಸರಿಹೊಂದೋದು ಈ ಸಿನಿಮಾದ ನಾಯಕ ವಿನಯ್‌ಗೆ. ಸುನಿ ಸಂಭಾಷಣೆ ಬರೆಯೋ ರೀತಿಗೆ ನಾನು ಅಭಿಮಾನಿ. ಯಾವ ನಿರ್ದೇಶಕನಿಗೆ ಭಾಷೆ, ಬರವಣಿಗೆ ಮೇಲೆ ಹಿಡಿತ ಇರುತ್ತೋ ಆತನ ಸಿನಿಮಾ ನೆಕ್ಸ್ಟ್ ಲೆವೆಲ್‌ನಲ್ಲಿರುತ್ತೆ. ಅಂಥಾ ವ್ಯಕ್ತಿ ನಮ್ಮ ಕಾಂಪ್ಲಿಕೇಟೆಡ್ ಸುನಿಲ್. ಈಗ ವಿನಯ್ ರಾಜ್‌ಕುಮಾರ್ ಅವರನ್ನು ನೋಡಿದರೆ ಅಣ್ಣಾವ್ರ ನೆನಪಾಗುತ್ತದೆ. ಯಾವುದೋ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದ ನನ್ನನ್ನು ಅಣ್ಣಾವ್ರು ಗಣೇಶ ಎಂದು ಕರೆದಿದ್ದನ್ನು ನೆನೆಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಅಂಥವರ ತೊಡೆ ಮೇಲೆ ಬೆಳೆದ ವಿನಯ್ ಸಿನಿಮಾದಲ್ಲಿ ಎತ್ತರಕ್ಕೆ ಬೆಳೆಯಬೇಕು’ ಎಂದೂ ಗಣೇಶ್ ಹೇಳಿದರು. ನಾಯಕ ವಿನಯ್ ರಾಜ್‌ಕುಮಾರ್, ‘ಈ ಚಿತ್ರದಲ್ಲಿ ನನಗೆ ಸಾಧು ಕೋಕಿಲ ಅವರ ಸ್ಟುಡಿಯೋದಲ್ಲಿ ಅಸಿಸ್ಟೆಂಟ್ ಪಾತ್ರ. ಚಿಕ್ಕಪೇಟೆಯ ಸೀರೆ ಮಾರುವ ಕುಟುಂಬದ ಹಿನ್ನೆಲೆ ಈ ಪಾತ್ರಕ್ಕಿದೆ. ಕಥೆಯನ್ನು ಸರಳ, ಸುಂದರವಾಗಿ ಸುನಿ ನಿರೂಪಿಸಿದ್ದಾರೆ’ ಎಂದರು. ನಿರ್ದೇಶಕ ಸುನಿ, ‘ವರ್ಷದ ಕೆಳಗೆ ಮೈಸೂರು ದಸರಾದಲ್ಲಿ ಸಾರ್ವಜನಿಕ ಜಾಗದಲ್ಲಿ ತನ್ನ ಪಾಡಿಗೆ ಕುಳಿತಿದ್ದ ವಿನಯ್ ಅವರ ಫೋಟೋ ವೈರಲ್ ಆಗಿತ್ತು. ಈ ಸಿನಿಮಾದ ನಾಯಕ ಯಾರಾಗಬಹುದು ಅಂತ ಯೋಚಿಸಿದಾಗ ಮನಸ್ಸಿಗೆ ಬಂದದ್ದು ಆ ಇಮೇಜ್. ವಿನಯ್ ಪಾತ್ರಕ್ಕೆ ಜೀವ ತುಂಬಿದ್ದಾರೆ’ ಎಂದರು. ನಾಯಕಿಯರಾದ ಸ್ವಾದಿಷ್ಟ ಹಾಗೂ ಮಲ್ಲಿಕಾ ಸಿಂಗ್ ಸಿನಿಮಾ ಬಗೆಗಿನ ಅನುಭವ ಹಂಚಿಕೊಂಡರು. ನಿರ್ಮಾಪಕ ರಮೇಶ್ ಮೈಸೂರು ಹಾಗೂ ಚಿತ್ರತಂಡದವರು ಹಾಜರಿದ್ದರು.