ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ತಮ್ಮ ಡ್ರಮ್ಸ್ ವಾದನದ ಮೂಲಕ ಜನಪ್ರಿಯರಾಗಿದ್ದ ಹಿರಿಯ ವಾದ್ಯ ಕಲಾವಿದ ಡ್ರಮ್ಮರ್ ದೇವ (63) ನಿಧನರಾಗಿದ್ದಾರೆ. ​ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಜರಾಜೇಶ್ವರಿ ನಗರ ಗೇಟ್ ಎದುರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

​ಬೆಂಗಳೂರು : ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಸಂಗೀತ ಲೋಕದಲ್ಲಿ ತಮ್ಮ ಡ್ರಮ್ಸ್ ವಾದನದ ಮೂಲಕ ಜನಪ್ರಿಯರಾಗಿದ್ದ ಹಿರಿಯ ವಾದ್ಯ ಕಲಾವಿದ ಡ್ರಮ್ಮರ್ ದೇವ (63) ನಿಧನರಾಗಿದ್ದಾರೆ.

​ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ರಾಜರಾಜೇಶ್ವರಿ ನಗರ ಗೇಟ್ ಎದುರಿನ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತರಿಗೆ ಕುಟುಂಬಸ್ಥರು, ಅಪಾರ ಶಿಷ್ಯವೃಂದ ಹಾಗೂ ಸಂಗೀತ ಪ್ರೇಮಿಗಳಿದ್ದಾರೆ.

4 ದಶಕಗಳ ಸೇವೆ:

​ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ದೇವ ಅವರು, ಕನ್ನಡದ ಹೆಸರಾಂತ ಸಂಗೀತ ನಿರ್ದೇಶಕರಾದ ಹಂಸಲೇಖ, ರಾಜನ್-ನಾಗೇಂದ್ರ, ಉಪೇಂದ್ರ ಕುಮಾರ್, ಸತ್ಯಂ, ಟಿ ಜಿ ಲಿಂಗಪ್ಪ, ವಿ. ಮನೋಹರ್, ಗುರುಕಿರಣ್ ಸೇರಿದಂತೆ ಅನೇಕರ ಜೊತೆ ಕಾರ್ಯನಿರ್ವಹಿಸಿದ್ದರು.

ನೂರಾರು ಜನಪ್ರಿಯ ಹಾಡುಗಳ ಧ್ವನಿಮುದ್ರಣದಲ್ಲಿ ಅವರ ಡ್ರಮ್ಸ್ ವಾದನ ಪ್ರಮುಖ ಆಕರ್ಷಣೆಯಾಗಿತ್ತು. ಕೇವಲ ರೆಕಾರ್ಡಿಂಗ್ ಅಷ್ಟೇ ಅಲ್ಲದೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಮುಖ ಆರ್ಕೆಸ್ಟ್ರಾ ಹಾಗೂ ಲೈವ್ ಶೋಗಳಲ್ಲಿ ತಮ್ಮ ಲಯಬದ್ಧ ರಿದಮ್ ಮೂಲಕ ಸಂಗೀತಾಸಕ್ತರನ್ನು ತಲೆದೂಗಿಸಿದ್ದರು.

​ಅನೇಕ ಯುವ ಡ್ರಮ್ಮರ್‌ಗಳಿಗೆ ಮಾರ್ಗದರ್ಶಕರಾಗಿದ್ದ ಅವರ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಸಂಗೀತ ನಿರ್ದೇಶಕರು, ಗಾಯಕರು, ವಾದ್ಯ ಕಲಾವಿದರು, ಅವರ ನಿವಾಸ ಇರುವ ಸ್ಕಂದಶ್ರೀ-5 ಅಪಾರ್ಟ್‌ಮೆಂಟ್‌ ನಿವಾಸಿಗಳು, ಎಸ್‌ಎಲ್‌ವಿ ಲೇಔಟ್‌ ನಿವಾಸಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಅಂತ್ಯಕ್ರಿಯೆ:

ರಾಜರಾಜೇಶ್ವರಿ ನಗರದ ಗೇಟ್‌ ಎದುರಿನ ‘ದಿ ಕ್ಲಬ್’ ಹಿಂಭಾಗದ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಇಂದು ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗುತ್ತದೆ ಮತ್ತು ​ಮೃತರ ಅಂತಿಮ ಸಂಸ್ಕಾರವು ಕ್ರಿಶ್ಚಿಯನ್ ವಿಧಿ ವಿಧಾನದ ಮೂಲಕ ನೆರವೇರಲಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.