ಸಾರಾಂಶ
ನವದೆಹಲಿ: ವಿಮಾನಗಳಿಗೆ ಬಾಂಬ್ ಬೆದರಿಕೆ ಪ್ರಕರಣಗಳು ಮುಂದುವರೆದಿದ್ದು, ಗುರುವಾರ ಮತ್ತೆ ಏರಿಂಡಿಯಾದ 5, ವಿಸ್ತಾರಾದ 2 ಮತ್ತು ಇಂಡಿಗೋದ 2 ವಿಮಾನಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಬೆದರಿಕೆ ಸಂದೇಶ ಬಂದಿದೆ.
ಏರಿಂಡಿಯಾದ ದೆಹಲಿ-ನ್ಯೂಯಾರ್ಕ್, ವ್ಯಾಂಕೋವರ್- ದೆಹಲಿ, ಷಿಕಾಗೋ- ದೆಹಲಿ, ಮುಂಬೈ- ನ್ಯೂಯಾರ್ಕ್, ವಿಸ್ತಾರಾದ ಫ್ರಾಂಕ್‌ಫರ್ಟ್-ಮುಂಬೈ, ಪ್ಯಾರಿಸ್- ದೆಹಲಿ, ಇಂಡಿಗೋದ ಇಸ್ತಾನ್‌ಬುಲ್- ಮುಂಬೈ ವಿಮಾನಗಳಲ್ಲೂ ಆತಂಕ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದರೊಂದಿಗೆ ಕಳೆದ 4 ದಿನದಲ್ಲಿ ಬಾಂಬ್ ಬೆದರಿಕೆ ಪ್ರಕರಣಗಳ ಸಂಖ್ಯೆ 28ಕ್ಕೆ ಏರಿದೆ .
ಬಾಂಬ್ ಬೆದರಿಕೆ: 8 ಸೋಷಿಯಲ್ ಮೀಡಿಯಾ ಖಾತೆ ನಿಷೇಧ
ನವದೆಹಲಿ: ಒಂದು ವಾರದಿಂದ ಭಾರತೀಯ ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆಯೊಡಿದ 8 ಸಾಮಾಜಿಕ ಜಾಲತಾಣ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ಸೈಬರ್ ಏವಿಯೇಷನ್ ಸೆಕ್ಯೂರಿಟಿ ಹಾಗೂ ಇಂಟೆಲಿಜೆನ್ಸ್ ತಂಡವು, ಎಕ್ಸ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ವಿಮಾನಗಳಿಗೆ ಅವುಗಳ ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರ್ಗದ ವಿಮಾನಗಳ ಮೇಲೆ ಬಾಂಬ್ ಹಾಕುವ ಹಾಗೂ ಭಯೋತ್ಪಾದಕ ದಾಳಿ ಎಸಗುವುದಾಗಿ ಹೇಳಿದ್ದರಿಂದ ಸೋಮವಾರ ಅವುಗಳ ಮೇಲೆ ನಿಷೇಧ ಹೇರಿದೆ.
ಬೆದರಿಕೆಯೊಡ್ಡಿದ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬಾಂಬ್‌ಗಳು, ಎಲ್ಲೆಡೆ ರಕ್ತ ಚೆಲ್ಲುತ್ತದೆ, ಸ್ಪೋಟಕ ವಸ್ತುಗಳು, ಇದು ಹಾಸ್ಯವಲ್ಲ, ನೀವು ಸಾಯಲಿದ್ದೀರಿ ಹಾಗೂ ಬಾಂಬ್ ಇರಿಸಲಾಗಿದೆ ಎಂಬ ಸಾಮಾನ್ಯ ಪದಗಳಿರುವುದನ್ನ ಇಂಟೆಲಿಜೆನ್ಸ್ ತಂಡವು ಪತ್ತೆ ಮಾಡಿದೆ.ಗುಪ್ತಚರ ದಳವು ಪ್ರತಿಯೊಂದು ಬೆದರಿಕೆ ಸಂದೇಶದ ಮೇಲೆ ಎಫ್‌ಐಆರ್ ಅನ್ನು ದಾಖಲಿಸಿದ್ದು, ಸಾಮಾಜಿಕ ಜಾಲತಾಣ ಹಾಗೂ ಡಾರ್ಕ್ ವೆಬ್ ಸಂಪರ್ಕ ಹೊಂದಿರುವ ಬಗ್ಗೆ ಕಣ್ಣು ಇರಿಸಿದೆ. ಇವುಗಳ ಇಮೇಲ್ ಐಡಿ, ಭೌಗೋಳಿಕ ಪ್ರದೇಶಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಗಮನವಿಟ್ಟಿದೆ. ಇದನ್ನು ಸಂಬಂಧಪಟ್ಟ ಪೊಲೀಸ್ ವಿಭಾಗಕ್ಕೂ ಕಳುಹಿಸಿಕೊಡಲಾಗಿದೆ.