ಗಾಯಕ್ಕೆ ಹೊಲಿಗೆ ಬದಲುಫೆವಿಕ್ವಿಕ್‌ ಹಾಕಿದ ನರ್ಸ್‌!

| Published : Feb 05 2025, 12:31 AM IST

ಸಾರಾಂಶ

ಆಟ ಆಡುವಾಗ ಬಿದ್ದು ಕೆನ್ನೆಗೆ ಗಾಯ ಮಾಡಿಕೊಂಡ ಬಾಲಕನಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ವೊಬ್ಬರು ಹೊಲಿಗೆ ಬದಲು ಫೆವಿಕ್ವಿಕ್ ಹಾಕಿ ಕಳುಹಿಸಿದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ, ಹಾವೇರಿ

ಆಟ ಆಡುವಾಗ ಬಿದ್ದು ಕೆನ್ನೆಗೆ ಗಾಯ ಮಾಡಿಕೊಂಡ ಬಾಲಕನಿಗೆ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್‌ವೊಬ್ಬರು ಹೊಲಿಗೆ ಬದಲು ಫೆವಿಕ್ವಿಕ್ ಹಾಕಿ ಕಳುಹಿಸಿದ ವಿಚಿತ್ರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹಾನಗಲ್ಲ ತಾಲೂಕಿನ ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಳೆದ ಜ.14ರಂದು ಈ ವಿಚಿತ್ರ ಘಟನೆ ನಡೆದಿದೆ. ಗುರುಕಿಶನ್ ಅಣ್ಣಪ್ಪ ಹೊಸಮನಿ (7 ವರ್ಷ) ಎಂಬ ಬಾಲಕನಿಗೆ ಆಟ ಆಡುವಾಗ ಬಿದ್ದು ಕೆನ್ನೆ ಮೇಲೆ ಗಾಯವಾಗಿದೆ. ಕೂಡಲೇ ಪಾಲಕರು ಬಾಲಕನನ್ನು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದಾರೆ. ನರ್ಸ್ ಜ್ಯೋತಿ ಎಂಬುವರು ಬಾಲಕನ ಗಾಯಕ್ಕೆ ಫೆವಿಕ್ವಿಕ್ ಗಮ್ ಅಂಟಿಸಿ ಕಳುಹಿಸಿದ್ದಾರೆ. ಈ ಬಗ್ಗೆ ನರ್ಸ್ ಅವರನ್ನು ಕೇಳಿದರೆ, ಸ್ಟಿಚ್ (ಹೊಲಿಗೆ) ಹಾಕಿದರೆ ಬಾಲಕನ ಕೆನ್ನೆ ಮೇಲೆ ಕಲೆ ಆಗುತ್ತಿತ್ತು. ಹೀಗಾಗಿ ಚರ್ಮದ ಮೇಲಷ್ಟೇ ಫೆವಿಕ್ವಿಕ್ ಹಾಕಿ ಚಿಕಿತ್ಸೆ ನೀಡಿದ್ದೇನೆ. ಹೀಗೆ ಅನೇಕರಿಗೆ ಫೆವಿಕ್ವಿಕ್ ಹಾಕಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ!

ಈ ಬಗ್ಗೆ ಮೊಬೈಲ್‌ನಲ್ಲಿ ವಿಡಿಯೋ ಚಿತ್ರೀಕರಿಸಿರುವ ಬಾಲಕನ ಪೋಷಕರು ಆಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ದೂರು ನೀಡಿದ್ದಾರೆ.

ಫೆವಿಕ್ವಿಕ್‌ ಹಾಕಿದ್ದಕ್ಕೆ ತಬ್ಬಿಬ್ಬುಗೊಂಡ ಪೋಷಕರು ನಂತರ ಗುರುಕಿಶನ್‌ನನ್ನು ಹಾನಗಲ್ಲಿನ ಖಾಸಗಿ ಆಸ್ಪತ್ರೆಗೆ ತೋರಿಸಿದ್ದಾರೆ. ಅಲ್ಲಿಯ ವೈದ್ಯರು ಹೊಲಿಗೆ ಹಾಕುವ ಅಗತ್ಯವಿಲ್ಲ ಎಂದು ಹೇಳಿ ಬೇರೆ ಚಿಕಿತ್ಸೆ ನೀಡಿದ್ದಾರೆ. ಈಗ ಗುರುಕಿಶನ್‌ ಗಾಯ ವಾಸಿಯಾಗಿದ್ದು, ಆರೋಗ್ಯವಾಗಿದ್ದಾನೆ ಎಂದು ಕುಟುಂಬದವರು ತಿಳಿಸಿದ್ದಾರೆ.------ಕೋಟ್‌------

ಗಾಯಕ್ಕೆ ಫೆವಿಕ್ವಿಕ್‌ ಹಾಕುವುದು ತಪ್ಪು ವಿಧಾನ. ಆಡೂರು ಪಿಎಚ್‌ಸಿ ನರ್ಸ್‌ ಈ ರೀತಿ ಮಾಡಿರುವುದು ವಿಡಿಯೋ ನೋಡಿದ ಮೇಲೆ ಗೊತ್ತಾಗಿದೆ. ಸಂಬಂಧಪಟ್ಟ ನರ್ಸ್‌ಗೆ ನೋಟಿಸ್‌ ಜಾರಿಗೊಳಿಸಲಾಗಿದೆ. ಈ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ನರ್ಸ್‌ ಜ್ಯೋತಿ ಅವರನ್ನು ಗುತ್ತಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿದೆ. ವರದಿ ಬಂದ ತಕ್ಷಣ ಶಿಸ್ತು ಕ್ರಮ ಜರುಗಿಸಲಾಗುವುದು.

-ಡಾ. ರಾಜೇಶ ಸುರಗಿಹಳ್ಳಿ, ಡಿಎಚ್‌ಒ ಹಾವೇರಿ

\--------------------

4ಎಚ್‌ವಿಆರ್2-ಗುರುಕಿಶನ್ ಅಣ್ಣಪ್ಪ ಹೊಸಮನಿ