ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಏರಿಕೆ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಸೋಮವಾರ ಮತ್ತೆ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಳ ಮಾಡಿವೆ. ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 2.62 ರು. ಮತ್ತು ಡೀಸೆಲ್ ದರ ಲೀಟರ್‌ಗೆ 2.71 ರು.ನಷ್ಟು ಏರಿಕೆಯಾಗಿದೆ. ಈ ಮೂಲಕ ಕಳೆದ 11 ದಿನದಲ್ಲಿ 4ನೇ ಬಾರಿ ಎರಡೂ ತೈಲೋತ್ಪನ್ನಗಳ ದರ ಏರಿಕೆಯಾದಂತಾಗಿದೆ.
ಕಳೆದೆರಡು ವಾರಗಳಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು 7.5 ರು.ನಷ್ಟು ಏರಿಸಿದ ಪರಿಣಾಮ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ನಿತ್ಯ ಆಗುತ್ತಿದ್ದ ನಷ್ಟ 1000 ಕೋಟಿ ರು.ನಿಂದ 600 ಕೋಟಿ ರು.ಗೆ ಇಳಿದಿದೆ. ನಷ್ಟ ಮುಂದುವರಿದಿರುವ ಕಾರಣ ಮುಂದಿನ ದಿನಗಳಲ್ಲಿ ಮತ್ತೆ ತೈಲ ದರ ಏರಿಕೆಯಾಗುವ ಸಾಧ್ಯತೆಗಳಿವೆ.
ಸೋಮವಾರದ ದರ ಹೆಚ್ಚಳ ಪರಿಣಾಮ ದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ದರ 100 ರು. ಗಡಿ ದಾಟಿದೆ. ಇನ್ನು ಡೀಸೆಲ್ ದರ ಬಹುತೇಕ ಕಡೆ 100 ರು.ಗೆ ಗಡಿಗೆ ಬಂದು ನಿಂತಿದೆ. ಈ ದರಗಳು 2022ರ ಬಳಿಕ ಗರಿಷ್ಠ ಪ್ರಮಾಣದ್ದಾಗಿದೆ.
ಮಧ್ಯಪ್ರಾಚ್ಯ ಸಂಘರ್ಷ ಆರಂಭವಾದ ಬಳಿಕ ಕೇಂದ್ರ ಸರ್ಕಾರ ಮೇ 15ರಂದು ಪೆಟ್ರೋಲ್, ಡೀಸೆಲ್ ದರವನ್ನು ಪ್ರತಿ ಲೀಟರ್‌ಗೆ 3 ರು.ನಂತೆ ಹೆಚ್ಚಿಸಿತ್ತು. ಬಳಿಕ ಮೇ 19ರಂದು 90 ಪೈಸೆ, ಮೇ 23ರಂದು ಪೆಟ್ರೋಲ್ ದರ 87 ಪೈಸೆ, ಡೀಸೆಲ್ ದರ 91 ಪೈಸೆಯಷ್ಟು ಏರಿಸಿತ್ತು. ಇದರಿಂದ ಪೆಟ್ರೋಲ್, ಡೀಸೆಲ್ ದರವನ್ನು 2 ವಾರಗಳಿಂದ 7.5 ರು.ನಷ್ಟು ಹೆಚ್ಚಿಸಿದಂತಾಗಿದೆ. ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 110.93 ರು. ಮತ್ತು ಡೀಸೆಲ್ ದರ 98.80 ರು.ಗೇರಿದೆ.
ರಾಗಾ, ಖರ್ಗೆ ಆಕ್ರೋಶ:
ಪೆಟ್ರೋಲ್, ಡೀಸೆಲ್ ದರ ಏರಿಕೆ ನಿರ್ಧಾರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ‘ದುಬಾರಿ ಮನುಷ್ಯ’ ಎಂದು ಕರೆದಿರುವ ಅವರು, ಬೆಲೆ ಏರಿಕೆಯಿಂದ ಯಾರಿಗೆ ಲಾಭ ಆಗುತ್ತಿದೆ ಎಂಬುದನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ರಾಹುಲ್ ಗಾಂಧಿ, ‘ದುಬಾರಿ ಮನುಷ್ಯ ಮೋದಿ ಮತ್ತೆ ದಾಳಿ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ದರವನ್ನು ಹಂತ ಹಂತವಾಗಿ ಹೆಚ್ಚಿಸುತ್ತಿದ್ದಾರೆ. ಕೆಲ ತಿಂಗಳಿಂದ ಆರ್ಥಿಕ ಸುಂಟರಗಾಳಿ ಕುರಿತು ನಾನು ಎಚ್ಚರಿಸುತ್ತಾ ಬಂದಿದ್ದೆ. ಆದರೆ, ಮೋದಿ ಚುನಾವಣೆಯಲ್ಲಿ ಬ್ಯುಸಿಯಾಗಿದ್ದರು. ಚುನಾವಣೆ ಮುಗಿಯುತ್ತಿದ್ದಂತೆ ದರ ಹೆಚ್ಚಿಸಿದ್ದಾರೆ. ಈ ದರ ಏರಿಕೆ ಮುಂದುವರಿಯಲಿದೆ’ ಎಂದೂ ಆರೋಪಿಸಿದ್ದಾರೆ.
ಇನ್ನು ಮಲ್ಲಿಕಾರ್ಜುನ ಖರ್ಗೆ, ಇಂಧನ ಲೂಟಿಯ ದೈನಂದಿನ ದಾಳಿ ಇನ್ನೂ ನಿಂತಿಲ್ಲ. 10 ದಿನದಲ್ಲಿ 4ನೇ ಬಾರಿ ದರ ಏರಿಕೆ ಮಾಡಲಾಗಿದೆ. ಜನಸಾಮಾನ್ಯರ ಉಳಿತಾಯದ ಹಣಕ್ಕೆ ಪೆಟ್ರೋಲ್ ಚುಮುಕಿಸಿ ಸುಟ್ಟು ಭಸ್ಮ ಮಾಡುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದ್ದಾರೆ.
ಜೊತೆಗೆ 2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ದರ 71.41 ರು. ಇತ್ತು. ಅದನ್ನು ಇದೀಗ 110 ರು. ಗಡಿ ದಾಟಿಸಲಾಗಿದೆ. ಡೀಸೆಲ್ ದರ 56.71 ರು. ಇದ್ದಿದ್ದು ಇದೀಗ 98 ರು. ಗಡಿಗೆ ಬಂದಿದೆ. ಕಳೆದ 12 ವರ್ಷದಲ್ಲಿ ಕೇಂದ್ರ ಸರ್ಕಾರ ಜನಸಾಮಾನ್ಯರ 43 ಲಕ್ಷ ಕೋಟಿ ರು. ಹಣ ದೋಚಿದೆ ಎಂದು ಆರೋಪಿಸಿದ್ದಾರೆ.
ದಿನಾಂಕ ಪೆಟ್ರೋಲ್ ಡೀಸೆಲ್
ಮೇ 15 3 ರು. 3 ರು.
ಮೇ 19 90 ಪೈಸೆ 90 ಪೈಸೆ
ಮೇ 23 87 ಪೈಸೆ 91 ಪೈಸೆ
ಮೇ 25 2.62 ರು. 2.71 ರು.
ಒಟ್ಟು 7.39 ರು. 7.52 ರು.
ಬೆಂಗಳೂರಲ್ಲಿ ದರ
ಪೆಟ್ರೋಲ್ ₹110.93
ಡೀಸೆಲ್ ₹98.80
ಅಚ್ಛೇ ದಿನ ಹೆಸರಲ್ಲಿ ಟೋಪಿ
ತೈಲ ಬೆಲೆ ಏರಿಕೆ ಮೂಲಕ ಪ್ರಧಾನಿ ಮೋದಿ ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ. ಅಚ್ಛೇ ದಿನ ಬರುತ್ತದೆ ಎಂದು ಹೇಳಿ ಈಗ ಜನರಿಗೆ ಟೋಪಿ ಹಾಕಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಕೈ ರಾಜ್ಯಗಳಲ್ಲೇ ದುಬಾರಿ
ಬಿಜೆಪಿ ಅಧಿಕಾರದಲ್ಲಿರುವ ಗುಜರಾತ್‌ನಲ್ಲಿ ಪೆಟ್ರೋಲ್ ದರ 101 ರು. ಇದೆ. ಕಾಂಗ್ರೆಸ್ ಆಳ್ವಿಕೆಯ ಕರ್ನಾಟಕದಲ್ಲಿ 110 ರು., ತೆಲಂಗಾಣದಲ್ಲಿ 118 ರು. ಇದೆ. ಅಲ್ಲಿ ಇತರೆ ರಾಜ್ಯಗಳಿಗಿಂತ ಹೆಚ್ಚು ವ್ಯಾಟ್ ವಿಧಿಸಲಾಗುತ್ತಿದೆ.
- ರಾಷ್ಟ್ರೀಯ ಬಿಜೆಪಿ
ವ್ಯಾಟ್ ಇಳಿಕೆ ಮಾಡಿ
ಪೆಟ್ರೋಲ್ ದರ ಏರಿಕೆಯಿಂದ ಕರ್ನಾಟಕ ಸರ್ಕಾರ 6000 ಕೋಟಿ ರು. ಹೆಚ್ಚುವರಿ ಆದಾಯ ಗಳಿಸುತ್ತಿದೆ. ವ್ಯಾಟ್ ಕಡಿಮೆ ಮಾಡದೆ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ.
- ಆರ್.ಅಶೋಕ್, ವಿಪಕ್ಷ ನಾಯಕ
ಮೇ 30ಕ್ಕೆ ಪ್ರತಿಭಟನೆ
ತೆರಿಗೆ ಕಡಿತ ಮಾಡಿ ಎಂದು ನಮಗೆ ಹೇಳುವ ಬದಲು ಸುಲಿಗೆ ನಿಲ್ಲಿಸುವಂತೆ ಕೇಂದ್ರವನ್ನು ಬಿಜೆಪಿಗರು ಆಗ್ರಹಿಸಲಿ. ಬೆಲೆ ಏರಿಕೆ ವಿರುದ್ಧ ಮೇ 30ಕ್ಕೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟಿಸುತ್ತೇವೆ.
- ಡಿ.ಕೆ. ಶಿವಕುಮಾರ್, ಡಿಸಿಎಂ
