ಕನ್ನಡಪ್ರಭ ವಾರ್ತೆ ಬೆಂಗಳೂರು

ನರೇಂದ್ರ ಮೋದಿ ಅವರು ಪ್ರಧಾನಿ ಆದ ಬಳಿ ಪದೇ ಪದೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ರೂಢಿ ಮಾಡಿಕೊಂಡಿದ್ದು, ಈ ಬಾರಿ ಸತತ ನಾಲ್ಕನೇ ದಿನ ಇಂಧನ ದರ ಏರಿಕೆ ಮಾಡಿ ದೇಶ ಮತ್ತು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಬೆಲೆ ಏರಿಕೆಯಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ. ಕೇಂದ್ರ ಸರ್ಕಾರದ ಕ್ರಮದಿಂದ ದೇಶದ ಜನರ ಜೀವನ ದುಸ್ತರವಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಗುಜರಾತ್‌ ಮಾದರಿ ಸರ್ಕಾರ ಬರುತ್ತದೆ, ಒಳ್ಳೆಯ ದಿನ (ಅಚ್ಛೇ ದಿನ) ಬರುತ್ತದೆ ಎಂದು ಹೇಳಿ ಈಗ ಜನರಿಗೆ ಟೋಪಿ ಹಾಕಿದ್ದಾರೆ. ಬೆಲೆ ಏರಿಕೆ ಮೂಲಕ ದೇಶ ಮತ್ತು ಜನಸಾಮಾನ್ಯರನ್ನು ಲೂಟಿ ಮಾಡುತ್ತಿದ್ದಾರೆ ಎಂದರು.

ಜನರ ಮೇಲಿನ ಹೊರೆ ಇಳಿಸಲು ಕೂಡಲೇ ಬೆಲೆ ಇಳಿಕೆಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಜನರಿಗೆ ನೀಡಿದ್ದ ಭರವಸೆ ಈಡೇರಿಸುವತ್ತ ಗಮನಹರಿಸಬೇಕು. ಇಲ್ಲದ ನೆಪ ಹೇಳಿ ಬೆಲೆ ಏರಿಕೆಯನ್ನು ಸಮರ್ಥಿಸುವುದನ್ನು ಬಿಡಬೇಕು ಎಂದು ಆಗ್ರಹಿಸಿದರು.

ಕಳೆದ 11 ದಿನಗಳಿಂದ 4 ಬಾರಿ ಪೆಟ್ರೋಲ್‌, ಡೀಸೆಲ್‌ ಮತ್ತು ಅಡುಗೆ ಅನಿಲ ದರ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ಬೆಲೆ 110.93 ರು.ಗೆ ಏರಿಕೆಯಾಗಿದೆ. ಡೀಸೆಲ್‌ ಬೆಲೆ 98.89 ರು.ಗೆ ತಲುಪಿದೆ. ಪ್ರಧಾನಿ ಮೋದಿ ದೇಶವನ್ನು ಲೂಟಿ ಮಾಡುತ್ತಿರುವುದು ಸಾಬೀತಾಗುತ್ತಿದೆ ಎಂದು ಹೇಳಿದರು.


ಮನಮೋಹನ್‌ ಸಿಂಗ್‌ ಪ್ರಧಾನಿಯಾಗಿದ್ದಾಗ 2014ರ ಮೇ ತಿಂಗಳಲ್ಲಿ ಪ್ರತಿ ಲೀ. ಪೆಟ್ರೋಲ್‌ಗೆ 71.41 ರು., ಡೀಸೆಲ್‌ ಬೆಲೆ 56.71 ರು.ಗಳಿತ್ತು. ಅದೇ ಅಡುಗೆ ಅನಿಲ ಬೆಲೆ 412 ರು.ಗಳಾಗಿದ್ದವು. ಈಗ ಅಡುಗೆ ಅನಿಲ ಬೆಲೆ 915 ರು.ಗೆ ಹೆಚ್ಚಳವಾಗಿದೆ. ಅಲ್ಲದೆ, ಮನಮೋಹನ್‌ ಸಿಂಗ್‌ ಅವಧಿಯಲ್ಲಿನ ಕಚ್ಚಾ ತೈಲದ ಬೆಲೆಗೆ ಹೋಲಿಸಿದರೆ ಪ್ರಸ್ತುತ ಬೆಲೆ ಕಡಿಮೆಯಿದೆ. ಈ ಹಿಂದೆ ಪ್ರಧಾನಿ ಮೋದಿ ಅವರು ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 65 ರಿಂದ 75 ಡಾಲರ್‌ಗಳಿದ್ದಾಗ ಅದರ ಲಾಭವನ್ನು ಜನರಿಗೆ ನೀಡಲಿಲ್ಲ. ಸದ್ಯ ಕಚ್ಚಾ ತೈಲದ ಬೆಲೆ 100 ಡಾಲರ್‌ ಮಿತಿಯೊಳಗಿದ್ದರೂ ಸತತ ನಾಲ್ಕು ಬಾರಿ ಬೆಲೆ ಏರಿಕೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ದರ ಏರಿಕೆಯಿಂದ ರಾಜ್ಯಕ್ಕೆ ಲಾಭ; ಅಶೋಕ್‌:

ಪೆಟ್ರೋಲ್‌ ದರ ಏರಿಕೆಯಿಂದ ವಾರ್ಷಿಕ ಆರು ಸಾವಿರ ಕೋಟಿ ರು. ಹೆಚ್ಚುವರಿ ಆದಾಯ ಗಳಿಸುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ವ್ಯಾಟ್‌ (ಮೌಲ್ಯವರ್ಧಿತ ತೆರಿಗೆ) ಕಡಿಮೆ ಮಾಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಕಿಡಿಕಾರಿದ್ದಾರೆ.ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಪೆಟ್ರೋಲ್‌ ದರ ಏರಿಕೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕಾರಣ ಮಾಡುತ್ತಿದ್ದಾರೆ. ಯುದ್ಧದಿಂದಾಗಿ ಪೆಟ್ರೋಲ್‌ ಬಳಕೆ ಕಡಿಮೆ ಮಾಡಲು ಬೇರೆ ದೇಶಗಳು ನಿರ್ಬಂಧ ಹಾಕಿದ್ದರೂ ಪ್ರಧಾನಿ ಮೋದಿ ಅಂತಹ ನಿರ್ಬಂಧ ಹಾಕಿಲ್ಲ. ಕರ್ನಾಟಕದಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 107.70 ರು. ಇದ್ದರೆ, ದೆಹಲಿಯಲ್ಲಿ 99.50 ರು., ಗುಜರಾತ್‌ನಲ್ಲಿ 99.10 ರು., ಉತ್ತರ ಪ್ರದೇಶದಲ್ಲಿ 99.50 ರು., ಹರ್ಯಾಣದಲ್ಲಿ 99.70 ರು. ದರವಿದೆ. ಅಂದರೆ ರಾಜ್ಯದಲ್ಲಿ ಮಾತ್ರ ದರ ಹೆಚ್ಚಿದೆ ಎಂದರು.ಕಾಂಗ್ರೆಸ್‌ ಸರ್ಕಾರ ಪೆಟ್ರೋಲ್‌ ಮೇಲಿನ ವ್ಯಾಟ್‌ ಹೆಚ್ಚಳ ಮಾಡಿದ್ದು, ಅದನ್ನು ಕಡಿಮೆ ಮಾಡದೆ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ದರ ಏರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಆದಾಯ ಬರುವುದಿಲ್ಲ. ರಾಜ್ಯ ಸರ್ಕಾರಕ್ಕೆ ಹೆಚ್ಚುವರಿಯಾಗಿ ವಾರ್ಷಿಕ 6 ಸಾವಿರ ಕೋಟಿ ರು. ಆದಾಯ ಬರಲಿದೆ. ಇದನ್ನು ಗ್ಯಾರಂಟಿಗೆ ಬಳಸುತ್ತಾರೆ ಎಂದು ಕಿಡಿಕಾರಿದರು.ಈಗ ಪ್ರತಿ ಲೀಟರ್‌ ಪೆಟ್ರೋಲ್‌ ಮಾರಾಟದಿಂದ ರಾಜ್ಯ ಸರ್ಕಾರಕ್ಕೆ 1.15 ರು. ಹೆಚ್ಚುವರಿ ಆದಾಯ ಬರುತ್ತಿದೆ. ಜನರಿಗೆ ಸಹಾಯ ಮಾಡಬೇಕೆಂಬ ಮನಸ್ಸಿದ್ದರೆ ರಾಜ್ಯ ಸರ್ಕಾರದ ಕಡೆಯಿಂದಲೇ ವ್ಯಾಟ್‌ ಇಳಿಕೆ ಮಾಡಬೇಕು. ಇಲ್ಲವಾದರೆ ಹೆಚ್ಚುವರಿ ಆದಾಯ ಪಡೆಯುತ್ತಿರುವ ಬಗ್ಗೆ ಜನರಿಗೆ ಹೇಳಬೇಕು. ದರ ಏರಿಕೆಯ ವಿರುದ್ಧ ಕಾಂಗ್ರೆಸ್‌ ಹೋರಾಟ ಮಾಡುವುದು ಎಂದರೆ ಅದು ಜನರಿಗೆ ಮಾಡುವ ವಂಚನೆ ಹಾಗೂ ಟೋಪಿ ಹಾಕುವುದಾಗಿದೆ ಎಂದು ಅಶೋಕ್ ಟೀಕಿಸಿದರು.