ಸಾರಾಂಶ
ನವದೆಹಲಿ : ನವದೆಹಲಿಯ ಕೆಂಪುಕೋಟೆ ಸನಿಹ ನಡೆದ ವಿಜಯದಶಮಿ ರಾಮಲೀಲಾ ಸಮಾರಂಭದಲ್ಲಿ ಶನಿವಾರ ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಕೈ ನಾಯಕಿ ಸೋನಿಯಾ ಗಾಂಧಿ ಬಿಲ್ವಿದ್ಯೆ ಪ್ರದರ್ಶಿಸಿ ರಾವಣ ದಹನ ನಡೆಸಿದರು.
ಬಿಲ್ಲು ಬಾಣ ಎರಡನ್ನೂ ಕೈಬಿಟ್ಟ ನಿತೀಶ್!
ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾವಣ ದಹನದ ವೇಳೆ ಬಿಲ್ಲು ಬಾಣ ಎರಡನ್ನೂ ಕೈಬಿಟ್ಟು, ಅವು ಕೆಳಗೆ ಬಿದ್ದ ಪ್ರಸಂಗ ಶನಿವಾರ ಸಂಜೆ ನಡೆಯಿತು. ಪಟನಾ ಗಾಂಧಿ ಮೈದಾನದಲ್ಲಿ ರಾವಣ ದಹನ ಸಮಾರಂಭ ನಡೆದ ವೇಳೆ ಗಣ್ಯರಿಗೆಲ್ಲ ರಾವಣ ದಹನಕ್ಕೆ ಬಿಲ್ಲು ಬಾಣ ನೀಡಲಾಗಿತ್ತು. ಆದರೆ ಎಲ್ಲರೂ ಸರಿಯಾಗಿ ಬಾಣವನ್ನಷ್ಟೇ ಬಿಟ್ಟರೆ, ಎಲ್ಲರಿಗಿಂತ ಮೊದಲೇ ಬಿಲ್ಲು-ಬಾಣ ಎರಡನ್ನೂ ಕೈಚೆಲ್ಲಿದರು. ಈ ವಿಡಿಯೋ ವೈರಲ್ ಆಗಿದೆ.
ಜಾಗತಿಕ ಹಸಿವು ಸೂಚ್ಯಂಕ: ಭಾರತಕ್ಕೆ 105ನೇ ಸ್ಥಾನ
ಲಂಡನ್: ಜಾಗತಿಕ ಹಸಿವಿನ ಪ್ರಮಾಣ ಅಳೆಯಲು ಬಳಸುವ ಅಪೌಷ್ಟಿಕತೆ ಮತ್ತು ಶಿಶುಗಳ ಸಾವಿನ ಅಂಕಿ ಅಂಶಗಳು ಭಾರತದಲ್ಲಿ ಗಂಭೀರ ಪರಿಸ್ಥಿತಿಯನ್ನು ಮುಂದಿಟ್ಟಿವೆ. ಇದರ ಸೂಚ್ಯಂಕದಲ್ಲಿ 127 ದೇಶಗಳ ಪೈಕಿ ಭಾರತ 105ನೇ ಸ್ಥಾನದಲ್ಲಿದೆ ಎಂದು ವರದಿಯೊಂದು ಎಚ್ಚರಿಸಿದೆ.ಐರ್ಲೆಂಡ್ ಮೂಲದ ‘ಕನ್ಸರ್ನ್ ವಲ್ಡ್‌ವೈಡ್’ ಮತ್ತು ಜರ್ಮನ್ ಮೂಲದ ‘ವೆಲ್ತ್‌ಹಂಗರ್‌ಲೈಫ್’ ಬಿಡುಗಡೆ ಮಾಡಿರುವ 2024ನೇ ಸಾಲಿನ ವರದಿ ಈ ಅಂಕಿ ಅಂಶಗಳನ್ನು ಮುಂದಿಟ್ಟಿದೆ.ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿದಂತೆ 42 ದೇಶಗಳು 27.3 ಅಂಕಗಳೊಂದಿಗೆ ಗಂಭೀರ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ. ವಿಶೇಷವೆಂದರೆ ನೇಪಾಳ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ದೇಶಗಳು ಭಾರತಕ್ಕಿಂತ ಉತ್ತಮವಾದ ‘ಮಧ್ಯಮ’ ವಿಭಾಗದಲ್ಲಿ ಸ್ಥಾನ ಪಡೆದುಕೊಂಡಿವೆ ಎಂದು ವರದಿ ಹೇಳಿದೆ.
ದೇಶದಲ್ಲಿ ಶೇ.14 ಅಪೌಷ್ಟಿಕತೆ:ಭಾರತದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ಶೇ.13.7ರಷ್ಟು ಜನರು ಅಪೌಷ್ಟಿಕತೆ ಹೊಂದಿದ್ದಾರೆ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನವರ ಪೈಕಿ ಶೇ.35.5ರಷ್ಟು ಮಕ್ಕಳು ಬೆಳವಣಿಗೆ ಕುಂಠಿತದ ಸಮಸ್ಯೆ ಹೊಂದಿದ್ದಾರೆ. ಶೇ.18.7ರಷ್ಟು ಮಕ್ಕಳು ದುರ್ಬಲರಾಗಿದ್ದಾರೆ, ಶೇ.2.9ರಷ್ಟು ಮಕ್ಕಳು ತಮ್ಮ 5ನೇ ಹುಟ್ಟುಹಬ್ಬಕ್ಕಿಂತ ಮೊದಲೇ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ಹೇಳಿದೆ.
ಇದೇ ವೇಳೆ ವಿಶ್ವದಲ್ಲಿ 73.3 ಕೋಟಿ ಜನರು ಅಗತ್ಯ ಪ್ರಮಾಣದ ಆಹಾರ ಲಭ್ಯವಾಗದೇ ನಿತ್ಯವೂ ಹಸಿವಿನ ಸಮಸ್ಯೆ ಎದುರಿಸುತ್ತಿದ್ದಾರೆ, 280 ಕೋಟಿ ಜನರು ಆರೋಗ್ಯಪೂರ್ಣವಾದ ಆಹಾರದಿಂದ ವಂಚಿತರಾಗುತ್ತಿದ್ದಾರೆ ಎಂದು ವರದಿ ಹೇಳಿದೆ.