ಅಸ್ಸಾಂ: ಲುಂಗಿ, ಹೊದಿಕೆ ಬಳಸಿ ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದ 5 ವಿಚಾರಣಾಧೀನ ಕೈದಿಗಳು ಪರಾರಿ

| Published : Oct 13 2024, 01:03 AM IST / Updated: Oct 13 2024, 04:32 AM IST

ಅಸ್ಸಾಂ: ಲುಂಗಿ, ಹೊದಿಕೆ ಬಳಸಿ ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದ 5 ವಿಚಾರಣಾಧೀನ ಕೈದಿಗಳು ಪರಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದ 5 ವಿಚಾರಣಾಧೀನ ಕೈದಿಗಳು ಲುಂಗಿ ಹಾಗೂ ಹೊದಿಕೆಗಳನ್ನು ಬಳಸಿ ಅಸ್ಸಾಂನ ಮೋರಿಗಾಂವ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ಗುವಾಹಟಿ: ಪೋಕ್ಸೋ ಕಾಯ್ದೆಯಡಿ ಜೈಲು ಸೇರಿದ್ದ 5 ವಿಚಾರಣಾಧೀನ ಕೈದಿಗಳು ಲುಂಗಿ ಹಾಗೂ ಹೊದಿಕೆಗಳನ್ನು ಬಳಸಿ ಅಸ್ಸಾಂನ ಮೋರಿಗಾಂವ್ ಜಿಲ್ಲಾ ಕಾರಾಗೃಹದಿಂದ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.

ತಮ್ಮನ್ನು ಬಂಧಿಸಿಟ್ಟಿದ್ದ ಸೆಲ್‌ನ ಕಬ್ಬಿಣದ ಕಂಬಿಗಳನ್ನು ಮುರಿದ ಕೈದಿಗಳು ಜೈಲಧಿಕಾರಿಗಳ ಕಣ್ತಪ್ಪಿಸಿ, ತಾವು ಬಳಸುತ್ತಿದ್ದ ಪಂಚೆ, ಹೊದಿಕೆ, ಚಾದರಗಳ ಸಹಾಯದಿಂದ 20 ಅಡಿಯ ಗೋಡೆಯನ್ನು ಹಾರಿ ತಪ್ಪಿಸಿಕೊಂಡಿದ್ದಾರೆ. ಇವರನ್ನು ಸೈಫುದ್ದೀನ್‌, ಜೈರುಲ್‌ ಇಸ್ಲಾಂ, ನೂರ್‌ ಇಸ್ಲಾಂ, ಮಫಿದುಲ್‌ ಮತ್ತು ಅಬ್ದುಲ್‌ ರಶೀದ್‌ ಎಂದು ಗುರುತಿಸಲಾಗಿದೆ. ಈ ಘಟನೆ ಬೆಳಗಿನ ಜಾವ 1ರಿಂದ 2 ಗಂಟೆಯ ಸುಮಾರಿಗೆ ನಡೆದಿದೆ ಎಂದು ಮೋರಿಗಾಂವ್‌ನ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ತಪ್ಪಿಸಿಕೊಂಡವರ ಶೋಧಕ್ಕೆ ಸ್ಥಳೀಯ ಅಧಿಕಾರಿಗಳು ಪ್ರಯತ್ನಿಸುತ್ತಿದ್ದು, ಜಿಲ್ಲೆಯಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಅಂತೆಯೇ ಸೆರೆವಾಸಿಗಳು ರಚಿಸಿದ ಯೋಜನೆ ಹಾಗೂ ಅದನ್ನು ಜಾರಿಗೆ ತಂದ ರೀತಿಯನ್ನು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ.

ವಾನರ ಪಾತ್ರಧಾರಿ ಕೈದಿಗಳು ಏಣಿ ಹತ್ತಿ ಎಸ್ಕೇಪ್!

ಹರಿದ್ವಾರ: ದಸರಾ ನಿಮಿತ್ತ ರಾಮಲೀಲಾ ನಾಟಕ ನಡೆದಾಗ ಅದರಲ್ಲಿ ವಾನರ ಪಾತ್ರಧಾರಿಗಳಾದ ಇಬ್ಬರು ಕೊಲೆ ಕೇಸಿನ ದೋಷಿಗಳು, ವೇದಿಕೆಯಿಂದ ನಿಧಾನವಾಗಿ ದೂರ ಆಗಿ ಸಮೀಪದಲ್ಲಿದ್ದ ಏಣಿ ಹತ್ತಿ ಜೈಲಿನಿಂದ ಓಡಿಹೋದ ಘಟನೆ ಹರಿದ್ವಾರ ಜಿಲ್ಲಾ ಜೈಲಿನಲ್ಲಿ ನಡೆದಿದೆ. ಪೊಲೀಸರು ರಾಮಲೀಲಾ ನೋಡುತ್ತ ಮೈಮರೆತಾಗ ಈ ಘಟನೆ ನಡೆದಿದೆ.

ತಿರುಪತಿ ಬ್ರಹ್ಮರಥೋತ್ಸವದಲ್ಲಿ 30 ಲಕ್ಷ ಲಡ್ಡು ಮಾರಾಟ

ತಿರುಪತಿ: ತಿರುಪತಿ ದೇವಸ್ಥಾನದಲ್ಲಿ ಲಡ್ಡು ಕಲಬೆರಕೆ ವಿವಾದದ ನಡುವೆಯೂ, ದೇಗುಲದಲ್ಲಿ ನಡೆದ ವಾರ್ಷಿಕ ಬ್ರಹ್ಮೋರಥೋತ್ಸವದಲ್ಲಿ ಈ ಬಾರಿ ಭಕ್ತರು 30 ಲಕ್ಷ ಲಡ್ಡು ಪ್ರಸಾದವನ್ನು ಖರೀದಿ ಮಾಡಿದ್ದಾರೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಟಿಟಿಡಿ ತಿಳಿಸಿದೆ.ದೇವಸ್ಥಾನದಲ್ಲಿ ಅ.4ರಿಂದ ಆರಂಭಗೊಂಡ ಬ್ರಹ್ಮರಥೋತ್ಸವ ಶನಿವಾರ ಅಂತ್ಯಗೊಂಡಿತ್ತು. ಸುಮಾರು 15 ಲಕ್ಷ ಜನರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಭಕ್ತರು 8 ದಿನಗಳ ಅವಧಿಯಲ್ಲಿ ಸುಮಾರು 30ಲಕ್ಷ ಲಡ್ಡು ಪ್ರಸಾದ ಖರೀದಿ ಮಾಡಿದ್ದರು. ಕಳ ದ ವರ್ಷದ ಬ್ರಹ್ಮರಥೋತ್ಸವದಲ್ಲಿಯೂ ಇಷ್ಟೇ ಪ್ರಮಾಣದ ಲಡ್ಡು ಮಾರಾಟವಾಗಿತ್ತು. ದೇವಸ್ಥಾನದಲ್ಲಿ ಲಡ್ಡು ಪ್ರಸಾದದ ಕಲಬೆರಕೆ ವಿವಾದ ನಡುವೆಯೂ ಲಡ್ಡು ಮಾರಾಟದಲ್ಲಿ ಇಳಿಕೆ ಕಂಡು ಬಂದಿಲ್ಲ.

ಹಿಜ್ಬುಲ್ಲಾಗೆ ಪೇಜರ್‌ ಕೊಡಿಸಿದ್ದು ಇರಾನ್‌ ಕಂಪನಿ

ಇರಾನಿನ ಕಂಪನಿಯೊಂದು ಹಿಜ್ಬುಲ್ಲಾ ಉಗ್ರರ ಪರವಾಗಿ ಪೇಜರ್‌ಗಳನ್ನು ಖರೀದಿತ್ತು ಎಂಬ ಸ್ಫೋಟಕ ವಿಷಯವನ್ನು ಇರಾನ್‌ ಸೇನೆಯ ಮಾಜಿ ಅಧಿಕಾರಿಯೊಬ್ಬರು ಹೇಳಿದ್ದಾರೆ.ಟೀವಿ ಚಾನೆಲ್‌ಗೆ ಸಂದರ್ಶನ ನೀಡಿದ ಆ ಅಧಿಕಾರಿ, ‘ಹಿಜ್ಬುಲ್ಲಾಗೆ 3,000 ರಿಂದ 4,000 ಹೊಸ ಪೇಜರ್‌ಗಳ ಅಗತ್ಯವಿತ್ತು. ಇಷ್ಟೊಂದು ಪೇಜರ್‌ಗಳನ್ನು ತನ್ನ ಹೆಸರಲ್ಲಿ ಖರೀದಿ ಆದರೆ ಅನುಮಾನ ಬರುತ್ತದೆ ಎಂದ ಹಿಜ್ಬುಲ್ಲಾ ಇರಾನ್‌ ಕಂಪನಿಯೊಂದಕ್ಕೆ ನಿಮ್ಮ ಹೆಸರಲ್ಲಿ ಖರೀದಿಸಿ ನಮಗೆ ಕೊಡಿ ಎಂದು ಇರಾನ್ ಕೇಳಿತ್ತು. ಆಗ ಇರಾನ್‌ ಕಂಪನಿಯು ಪೇಜರ್‌ಗಳನ್ನು ಉತ್ಪಾದಿಸುವ ಪ್ರಸಿದ್ಧ ತೈವಾನೀಸ್ ಬ್ರ್ಯಾಂಡ್‌ನೊಂದಿಗೆ ಮಾತುಕತೆ ನಡೆಸಿ 5 ಸಾವಿರ ಪೇಜರ್‌ ಖರೀದಿಸಿಕೊಟ್ಟಿತು’ ಎಂದು ಹೇಳಿದ್ದಾರೆ.ಆದರೆ ತಾನು ಖರೀದಿಸಿಕೊಟ್ಟಿಲ್ಲ ಎಂದು ಇರಾನಿ ಕಂಪನಿ ಈ ಬಗ್ಗೆ ಸ್ಪಷ್ಟಪಡಿಸಿದೆ.

ಕಳೆದ ತಿಂಗಳು ಇಸ್ರೇಲ್‌ ನಡೆಸಿದ ಪೇಜರ್‌ ಸ್ಫೋಟಕ್ಕೆ ಹತ್ತಾರು ಜನ ಬಲಿಯಾಗಿ ಸಾವಿರಾರು ಹಿಜ್ಬುಲ್ಲಾಗಳಿಗೆ ಗಾಯವಾಗಿತ್ತು.

ಇರಾನ್‌ ವಿಮಾನಗಳಲ್ಲಿ ಪೇಜರ್‌, ವಾಕಿಟಾಕಿಗೆ ನಿರ್ಬಂಧ

ಟೆಹ್ರಾನ್‌: ಇರಾನ್‌ನಲ್ಲಿನ ವಿಮಾನಗಳಲ್ಲಿ ವಾಕಿಟಾಕಿ, ಪೇಜರ್‌ಗಳನ್ನು ತರದಂತೆ ಪ್ರಯಾಣಿಕರಿಗೆ ನಿರ್ಬಂಧ ಹೇರಲಾಗಿದೆ. ಮೊಬೈಲ್‌ ಫೋನ್‌ಗೆ ಮಾತ್ರ ಅವಕಾಶ ನೀಡಲಾಗಿದೆ.ಕಳೆದ ತಿಂಗಳು ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಉಗ್ರರು ಬಳಸುತ್ತಿದ್ದ ಪೇಜರ್ ಸ್ಫೋಟಗೊಂಡಿದ್ದವು. ಬಳಿಕ ದುಬೈ ಮೂಲದ ಎಮಿರೇಟ್ಸ್‌ ವಿಮಾನಯಾನ ಸಂಸ್ಥೆ, ಪೇಜರ್ ಮತ್ತು ವಾಕಿಟಾಕಿಗಳನ್ನು ತರಕೂಡದು ಎಂಬ ನಿಯಮವನ್ನು ಜಾರಿಗೆ ತಂದಿತ್ತು. ಈ ಬೆನ್ನಲ್ಲೇ ಇರಾನ್ ಸರ್ಕಾರ ಕೂಡ ಈ ಆದೇಶ ಹೊರಡಿಸಿದೆ.