2028ಕ್ಕೆ ಅದಾನಿ, 2033ಕ್ಕೆ ಅಂಬಾನಿ 1 ಲಕ್ಷ ಕೋಟಿ ಡಾಲರ್‌ ಒಡೆಯರು!

| Published : Sep 10 2024, 01:42 AM IST

2028ಕ್ಕೆ ಅದಾನಿ, 2033ಕ್ಕೆ ಅಂಬಾನಿ 1 ಲಕ್ಷ ಕೋಟಿ ಡಾಲರ್‌ ಒಡೆಯರು!
Share this Article
  • FB
  • TW
  • Linkdin
  • Email

ಸಾರಾಂಶ

: ಜಗತ್ತಿನ ನಂ.1 ಶ್ರೀಮಂತರಾಗಿರುವ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ 2027ಕ್ಕೆ ಜಗತ್ತಿನ ಮೊದಲ ಟ್ರಿಲಿಯನೇರ್‌ ಆಗಲಿದ್ದಾರೆ

ನವದೆಹಲಿ: ಜಗತ್ತಿನ ನಂ.1 ಶ್ರೀಮಂತರಾಗಿರುವ ಅಮೆರಿಕದ ಉದ್ಯಮಿ ಎಲಾನ್‌ ಮಸ್ಕ್‌ 2027ಕ್ಕೆ ಜಗತ್ತಿನ ಮೊದಲ ಟ್ರಿಲಿಯನೇರ್‌ ಆಗಲಿದ್ದಾರೆ. ಅಂದರೆ ಅವರ ಸಂಪತ್ತು 1 ಲಕ್ಷ ಕೋಟಿ ಡಾಲರ್‌ (84 ಲಕ್ಷ ಕೋಟಿ ರು.) ಆಗಲಿದೆ. ಕುತೂಹಲಕರ ಸಂಗತಿಯೆಂದರೆ, ಭಾರತದ ಉದ್ಯಮಿ ಗೌತಮ್‌ ಅದಾನಿ ಈ ಪಟ್ಟಿಗೆ ಸೇರಲಿರುವ ಎರಡನೇ ವ್ಯಕ್ತಿಯಾಗಲಿದ್ದರೆ, ಇನ್ನೊಬ್ಬ ಉದ್ಯಮಿ ಮುಕೇಶ್ ಅಂಬಾನಿ 2033ಕ್ಕೆ ಈ ಪಟ್ಟಿ ಸೇರಲಿದ್ದಾರೆ.

ಇನ್ಫೋರ್ಮಾ ಕನೆಕ್ಟ್‌ ಅಕಾಡೆಮಿ ಎಂಬ ಸಂಸ್ಥೆ ಕಲೆಹಾಕಿರುವ ಅಂಕಿಅಂಶಗಳ ಪ್ರಕಾರ, ಟೆಸ್ಲಾ, ಸ್ಪೇಸೆಕ್ಸ್‌, ಎಕ್ಸ್‌ ಕಂಪನಿಯ ಮಾಲಿಕ ಎಲಾನ್‌ ಮಸ್ಕ್‌ ಅವರ ಆಸ್ತಿ ಪ್ರತಿವರ್ಷ ಶೇ.110ರಷ್ಟು ಬೆಳೆಯುತ್ತಿದೆ. ಇದೇ ವೇಗ ಕಾಯ್ದುಕೊಂಡರೆ ಅವರು 2027ಕ್ಕೆ 1 ಲಕ್ಷ ಕೋಟಿ ಡಾಲರ್‌ ಸಂಪತ್ತು ಹೊಂದುವ ಜಗತ್ತಿನ ಮೊದಲ ವ್ಯಕ್ತಿಯಾಗಲಿದ್ದಾರೆ. ಹಾಲಿ ಮಸ್ಕ್‌ 19.65 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ.

ಇನ್ನು, ಅದಾನಿ ಗ್ರೂಪ್‌ನ ಗೌತಮ್‌ ಅದಾನಿಯವರ ಆಸ್ತಿ ಪ್ರತಿವರ್ಷ ಸರಾಸರಿ ಶೇ.123ರಷ್ಟು ಬೆಳೆಯುತ್ತಿದೆ. ಇದೇ ವೇಗ ಕಾಯ್ದುಕೊಂಡರೆ ಅವರು 2028ಕ್ಕೆ ಟ್ರಿಲಿಯನೇರ್‌ ಆಗಲಿದ್ದು, ಜಗತ್ತಿನ 2ನೇ ಲಕ್ಷ ಕೋಟ್ಯಧಿಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಅದಾನಿ ಅವರ ಹಾಲಿ ಆಸ್ತಿ 8.3 ಲಕ್ಷ ಕೋಟಿ ರು.ನಷ್ಟಿದೆ.

ಇನ್ನು ಮುಕೇಶ್‌ ಅಂಬಾನಿ 2033ರಲ್ಲಿ ಲಕ್ಷ ಕೋಟ್ಯಧಿಪತಿಯಾಗಿ ಹೊರಹೊಮ್ಮಲಿದ್ದಾರೆ. ಜೊತೆಗೆ 2035ಕ್ಕೆ ರಿಲಯನ್ಸ್‌ ಇಂಡಸ್ಟ್ರೀಸ್‌ ಇದೇ ಸಾಧನೆ ಮಾಡಲಿದೆ ಎಂದು ವರದಿ ಹೇಳಿದೆ. ಮುಕೇಶ್‌ ಅಂಬಾನಿ ಹಾಲಿ 9.43 ಲಕ್ಷ ಕೋಟಿ ರು. ಆಸ್ತಿ ಹೊಂದಿದ್ದಾರೆ.

ಈವರೆಗೆ ಜಗತ್ತಿನಲ್ಲಿ 8 ಕಂಪನಿಗಳು ಮಾತ್ರ ಇಷ್ಟು ಆಸ್ತಿ ಸಂಪಾದಿಸಿವೆ. ಯಾವುದೇ ಒಬ್ಬ ವ್ಯಕ್ತಿ ಇಷ್ಟು ಸಂಪತ್ತು ಸಂಪಾದಿಸಿಲ್ಲ. ಮೈಕ್ರೋಸಾಫ್ಟ್‌, ಆ್ಯಪಲ್‌, ನಿವಿಡಿಯಾ, ಆಲ್ಫಾಬೆಟ್‌, ಅಮೆಜಾನ್‌, ಸೌದಿ ಅರಾಮ್ಕೋ, ಮೆಟಾ ಹಾಗೂ ಬರ್ಕ್‌ಶೈರ್‌ ಹಾತ್‌ವೇ ಕಂಪನಿಗಳು 1 ಲಕ್ಷ ಕೋಟಿ ಡಾಲರ್‌ ಆಸ್ತಿ ಹೊಂದಿವೆ.