ಸಾರಾಂಶ
ನವದೆಹಲಿ: ಜೀವ ವಿಮೆ, ಆರೋಗ್ಯ ವಿಮೆ, ಮರು ವಿಮೆ ಮೇಲೆ ವಿಧಿಸಲಾಗುತ್ತಿರುವ ಶೇ.18ರಷ್ಟು ಜಿಎಸ್ಟಿ ಕಡಿತ ಮಾಡಬೇಕು ಎಂಬ ಬೇಡಿಕೆಗೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ, ಸಕಾರಾತ್ಮಕವಾಗಿ ಸ್ಪಂದಿಸಿದೆ. ಈ ಬಗ್ಗೆ ಅಧ್ಯಯನಕ್ಕೆ ಸಚಿವರ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಗಿದ್ದು, ಅಕ್ಟೋಬರ್ ಮಾಸಾಂತ್ಯಕ್ಕೆ ವರದಿ ಸಲ್ಲಿಸಲಿದೆ. ಅದರ ವರದಿ ಆಧರಿಸಿ ನವೆಂಬರ್‌ನಲ್ಲಿ ನಡೆವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸಭೆ ಬಳಿಕ, ಅದರ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯ ಪ್ರಕಟಿಸಿದರು.ಸಭೆಯಲ್ಲಿ ಒಮ್ಮತ:
ಮಂಡಳಿಯ ಸಭೆಯಲ್ಲಿ ವಿಮೆ ಮೇಲಿನ ತೆರಿಗೆ ಕಡಿತ ಕುರಿತ ಬೇಡಿಕೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಈ ವೇಳೆ ಸಭೆ, ತೆರಿಗೆ ಕಡಿತದ ಕುರಿತು ಒಮ್ಮತಕ್ಕೆ ಬಂತು. ಆದರೆ ಎಷ್ಟು ತೆರಿಗೆ ಕಡಿತ ಮಾಡಬೇಕು, ಅದರ ವಿಧಿ ವಿಧಾನಗಳು ಏನು ಎಂಬುದರ ಬಗ್ಗೆ ಸಚಿವರ ಸಮಿತಿ ವರದಿ ಆಧರಿಸಿ ನವೆಂಬರ್‌ನಲ್ಲಿ ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಿರ್ಧರಿಸಲಾಯಿತು.ಜಿಎಸ್ಟಿ ಜಾರಿಗೂ ಮುನ್ನ ವಿಮೆ ಮೇಲೆ ಶೇ.15ರಷ್ಟು ತೆರಿಗೆ ಇತ್ತು. ಜಿಎಸ್ಟಿ ಜಾರಿ ಬಳಿಕ ಅದು ಶೇ.18ಕ್ಕೆ ಹೆಚ್ಚಿತ್ತು.
ವಿಮೆ ಮೇಲೆ ಭಾರೀ ತೆರಿಗೆ ಹಾಕುವುದು, ಜೀವನದ ಅನಿಶ್ಚತೆ ಮೇಲೆ ತೆರಿಗೆ ಹಾಕಿದಂತೆ. ಹೀಗಾಗಿ ಅದನ್ನು ರದ್ದು ಮಾಡಬೇಕು ಎಂದು ಕೇಂದ್ರ ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದು ಒತ್ತಾಯಿಸಿದ್ದರು. ಇದಕ್ಕೆ ವಿಪಕ್ಷಗಳು ಕೂಡ ಧ್ವನಿಗೂಡಿಸಿದ್ಡವು.==
ಕ್ಯಾನ್ಸರ್ ಔಷಧಿ ಮೇಲಿನ ಜಿಎಸ್‌ಟಿ ಶೇ.12ರಿಂದ 5 ಕ್ಕಿಳಿಕೆನವದೆಹಲಿ: ಕ್ಯಾನ್ಸರ್ ಔಷಧಗಳ ಮೇಲಿನ ಜಿಎಸ್ಟಿಯನ್ನು ಶೇ.12ರಿಂದ 5ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ಇದೇ ವೇಳೆ, ಕೇದಾರದಂಥ ಯಾತ್ರಾ ಸ್ಥಳಗಳ ಹೆಲಿಕಾಪ್ಟರ್ ಸೇವೆಯ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ ಶೇ.5ಕ್ಕೆ ಹಾಗೂ ಕುರುಕಲು ತಿಂಡಿಗಳ ಮೇಲಿನ ಜಿಎಸ್ಟಿಯನ್ನು ಶೇ.18ರಿಂದ 12ಕ್ಕೆ ಇಳಿಸಲು ಸಭೆ ತೀರ್ಮಾನಿಸಿದೆ. ಇನ್ನು ಸರ್ಕಾರದ ಮಾನ್ಯತೆ ಪಡೆದ ವಿವಿ ಹಾಗೂ ಶಿಕ್ಷಣ ಸಂಸ್ಥೆಗಳನ್ನೂ ಜಿಎಸ್‌ಟಿ ವ್ಯಾಪ್ತಿಯನ್ನು ಹೊರಗಿಡಲಾಗುತ್ತದೆ.