ಸಾರಾಂಶ
ಭೋಪಾಲ್: 4ನೇ ಮಗುವಿನ ಜನನದ ಸುದ್ದಿ ಸರ್ಕಾರದ ಕಿವಿಗೆ ಬಿದ್ದರೆ ಸರ್ಕಾರಿ ಉದ್ಯೋಗ ಹೋಗುತ್ತದೆ ಎಂದು ಆತಂಕಕ್ಕೆ ಒಳಗಾಗಿದ್ದ ಜೋಡಿಯೊಂದು ನವಜಾತ ಶಿಶುವನ್ನು ಕಾಡಿನಲ್ಲಿ ಎಸೆದುಬಂದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಅಚ್ಚರಿಯ ವಿಷಯವೆಂದರೆ 3 ದಿನಗಳ ಕಾಲ ಬಿಸಿಲು, ಚಳಿ, ಹುಳುಗಳ ಕಡಿತಕ್ಕೆ ತುತ್ತಾಗಿದ್ದರೂ ಮಗು ಬದುಕುಳಿದಿದೆ. ಸದ್ಯ ಮಗು ಆಸ್ಪತ್ರೆಯಲ್ಲಿ ಚೇತರಿಕೆ ಹಂತದಲ್ಲಿದೆ. ಇನ್ನೊಂದೆಡೆ ಮಗುವನ್ನು ಈ ದುಸ್ಥಿತಿಗೆ ತಳ್ಳಿದ ಪೋಷಕರು ಹತ್ಯೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗುವ ಭೀತಿ ಎದುರಾಗಿದೆ.
ಏನಿದು ಪ್ರಕರಣ?:
ಬಬ್ಲು (38) ಎಂಬಾತನ ಪತ್ನಿ ರಾಜ್‌ಕುಮಾರಿ (28) ಇತ್ತೀಚೆಗೆ ನಾಲ್ಕನೇ ಮಗುವಿಗೆ ಜನ್ಮ ನೀಡಿದ್ದಳು. ಮಧ್ಯಪ್ರದೇಶ ಸರ್ಕಾರದ ನಿಯಮಗಳ ಅನ್ವಯ ಸರ್ಕಾರಿ ಉದ್ಯೋಗಿಗಳು 2ಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವಂತಿಲ್ಲ. ಹಾಗೇನಾದರೂ ಮಾಡಿದರೆ ಉದ್ಯೋಗದಿಂದ ತೆಗೆದು ಹಾಕಲಾಗುತ್ತದೆ.
ಆದರೆ ಬಬ್ಲು ಮತ್ತು ರಾಜ್‌ಕುಮಾರಿ ದಂಪತಿಗೆ ಈಗಾಗಲೇ 11ರ ಮಗಳು, 7 ಮತ್ತು 4 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಮೂರನೇ ಮಗುವಿನ ವಿಷಯ ಯಾರ ಗಮನಕ್ಕೂ ಬರದಂತೆ ದಂಪತಿ ನೋಡಿಕೊಂಡಿದ್ದರು. ಆದರೆ 4ನೇ ಮಗು ವಿಷಯ ಗೊತ್ತಾದರೆ ಬಬ್ಲುವಿನ ಸರ್ಕಾರಿ ಶಿಕ್ಷಕ ಹುದ್ದೆಗೆ ಸಂಚಕಾರ ಬರಬಹುದು ಎಂಬ ಆತಂಕ ಇಬ್ಬರಲ್ಲೂ ಕಾಡಿತ್ತು. ಹೀಗಾಗಿ 4ನೇ ಮಗು ಹುಟ್ಟಿದ ದಿನವೇ ದಂಪತಿ, ಅದನ್ನು ಬೈಕ್‌ನಲ್ಲಿ ಕೊಂಡೊಯ್ದು ಕಾಡಿನಲ್ಲಿ ಬಿಟ್ಟುಬಂದಿದ್ದರು.
ಇದಾದ ಮೂರು ದಿನಗಳ ಬಳಿಕ ಕಲ್ಲಿನ ಕೆಳಗಡೆ ಬಿಸಿಲು, ರಾತ್ರಿ ವೇಳೆ, ಹುಳುಗಳ ಕಡಿತದಲ್ಲೇ ಮಗು ಕಾಲಕಳೆದಿದೆ. ಬಳಿಕ 4ನೇ ದಿನ ವಾಕಿಂಗ್‌ಗೆ ಹೋದ ವ್ಯಕ್ತಿಗಳಿಗೆ ಮಗುವಿನ ಅಳುವಿನ ಸುದ್ದಿಕೇಳಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಬಬ್ಲು ದಂಪತಿ ಮೇಲೆ ಮೊದಲಿಗೆ ಮಗುವನ್ನು ಅನಾಥ ಮಾಡಿದ ಕೇಸು ದಾಖಲಾಗಿತ್ತು. ಆದರೆ ಇದೀಗ ಇಬ್ಬರ ಮೇಲೂ ಕೊಲೆ ಕೇಸು ದಾಖಲಿಸುವ ಸಾಧ್ಯತೆ ಇದೆ.