ಗಂಗಾವತಿ: ಮೂರು ದಿನ ಕಳೆದರೂ ಪತ್ತೆಯಾಗದ ನೀರು ಪಾಲಾದ ಮಗು

| Published : Sep 30 2025, 12:00 AM IST

ಗಂಗಾವತಿ: ಮೂರು ದಿನ ಕಳೆದರೂ ಪತ್ತೆಯಾಗದ ನೀರು ಪಾಲಾದ ಮಗು
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ನಗರದ ಗೌಸಿಯಾ ಕಾಲನಿಯಲ್ಲಿ ಹರಿಯುವ ದುರ್ಗಮ್ಮನ ಹಳ್ಳದಲ್ಲಿ 4 ವರ್ಷದ ಮಗು ನೀರು ಪಾಲಾಗಿ ಮೂರು ದಿನ ಕಳೆದರೂ ಪತ್ತೆಯಾಗದ ಕಾರಣ ಪಾಲಕರ ಶೋಕ ಮಡುಗಟ್ಟಿದೆ.

ಗಂಗಾವತಿ: ನಗರದ ಗೌಸಿಯಾ ಕಾಲನಿಯಲ್ಲಿ ಹರಿಯುವ ದುರ್ಗಮ್ಮನ ಹಳ್ಳದಲ್ಲಿ 4 ವರ್ಷದ ಮಗು ನೀರು ಪಾಲಾಗಿ ಮೂರು ದಿನ ಕಳೆದರೂ ಪತ್ತೆಯಾಗದ ಕಾರಣ ಪಾಲಕರ ಶೋಕ ಮಡುಗಟ್ಟಿದೆ.

ಮೂರು ದಿನಗಳ ಹಿಂದೆ 7ನೇ ವಾರ್ಡ್‌ನ ಮೆಹೆಬೂಬ್‌ ನಗರದ ಸಲೀಂಸಾಬ್ ಎನ್ನುವವರ ಪುತ್ರ ಮಹ್ಮದ್ ಅಜಾನ್ (4) ಮನೆಯ ಹತ್ತಿವಿರುವ ದುರ್ಗಮ್ಮ ಹಳ್ಳದಲ್ಲಿ ಬಿದ್ದು ನೀರು ಪಾಲಾಗಿದ್ದಾನೆ. ಹಳ್ಳಕ್ಕೆ ನಗರಸಭೆಯವರು ಸೇತುವೆ ನಿರ್ಮಿಸಿದ್ದರೂ ತಡೆಗೋಡೆ ನಿರ್ಮಿಸದೆ ಇರುವುದು ದುರಂತಕ್ಕೆ ಕಾರಣ ಎಂದು ಪಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಳ್ಳದ ಸೇತುವೆ ಮೇಲೆ ಆಟವಾಡುತ್ತಾ ಹೋಗುತ್ತಿದ್ದಾಗ ಸೇತುವೆಯಿಂದ ಬಿದ್ದು ನೀರಿನಲ್ಲಿ ಮುಳುಗಿದ್ದಾನೆ. ನಗರದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದರಿಂದ ಹಳ್ಳಕ್ಕೆ ಹೆಚ್ಚಿನ ಪ್ರಮಾಣ ನೀರು ಹರಿಯುತ್ತಲಿವೆ. ನೀರಿನ ರಭಸಕ್ಕೆ ಮಗು ನಾಪತ್ತೆಯಾಗಿರಬಹುದು ಎಂದು ಶಂಕಿಸಲಾಗಿದೆ.

ಆಕ್ರಂದನ: ಮಹ್ಮದ್ ಅಜಾನ್ ಪತ್ತೆಯಾಗದ ಕಾರಣ ಪಾಲಕರು ಮತ್ತು ಸಂಬಂಧಿಗಳ ಆಕ್ರಂದನ ಮಡುಗಟ್ಟಿದೆ. ತಂದೆ ಸಲೀಂ ಸಾಬ್, ತಾಯಿ ಸಲೀಮಾ ಬೇಗಂ ಮಗು ಮತ್ತೆ ಮನೆಗೆ ಬರಬಹುದು ಎಂಬ ಆಸೆ ಇಟ್ಟುಕೊಂಡಿದ್ದರು.

ಪತ್ತೆಗಾಗಿ ಕಾರ್ಯಾಚರಣೆ: ಮಗುವಿನ ಪತ್ತೆಗಾಗಿ ತಾಲೂಕು ಆಡಳಿತ ಮತ್ತು ನಗರಸಭೆ ಕಾರ್ಯಾಚರಣೆ ನಡೆಸಿದೆ. ಜಿಂದಾಲ್‌ನಿಂದ ಸಿಬ್ಬಂದಿ, ಅಗ್ನಿಶಾಮಕ ತಂಡ 7 ಸಿಬ್ಬಂದಿ, ಆನೆಗೊಂದಿಯಿಂದ ತೆಪ್ಪಗಳನ್ನು ತರಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಮಗುವಿನ ಪಾಲಕರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಒತ್ತಾಯಿಸಿದ್ದಾರೆ. ಹಳ್ಳಕ್ಕೆ ತಡೆಗೋಡೆ ನಿರ್ಮಿಸಬೇಕು ಎಂದು ಒತ್ತಾಯಿಸಿದ್ದಾರೆ. ಜಿಡಿಎಸ್‌ನ ರಾಜುನಾಯಕ ಭೇಟಿ ನೀಡಿ ಪಾಲಕರಿಗೆ ಸಾಂತ್ವನ ಹೇಳಿದ್ದಾರೆ.