ಕೆ.ಸಿ.ಜನರಲ್‌ ಆಸ್ಪತ್ರೇಲಿ ತಾಯಿ-ಮಗು ಹೈಟೆಕ್‌ ಘಟಕ

| Published : Sep 12 2025, 01:00 AM IST

ಕೆ.ಸಿ.ಜನರಲ್‌ ಆಸ್ಪತ್ರೇಲಿ ತಾಯಿ-ಮಗು ಹೈಟೆಕ್‌ ಘಟಕ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ತಾಯಿ-ಮಗು ಆಸ್ಪತ್ರೆ ನಿರ್ಮಾಣ ಕಾಮಗಾರಿ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಲ್ಲೇಶ್ವರದ ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ನೂತನವಾಗಿ 200 ಹಾಸಿಗೆ ಸಾಮರ್ಥ್ಯದ ತಾಯಿ-ಮಗು ಆಸ್ಪತ್ರೆ ತಲೆ ಎತ್ತುತ್ತಿದ್ದು, ಒಂದೂವರೆ ವರ್ಷದಲ್ಲಿ ಕಾಮಗಾರಿ ಮುಗಿದು ಸೇವೆಗೆ ಲಭ್ಯವಾಗಲಿದೆ.

ತಾಯಿ ಹಾಗೂ ನವಜಾತ ಶಿಶು ಚಿಕಿತ್ಸೆಗೆ ಹೆಸರಾದ ವಾಣಿವಿಲಾಸ ಆಸ್ಪತ್ರೆಯಲ್ಲಿ ತಿಂಗಳಿಗೆ 1500 ರಷ್ಟು ಹೆರಿಗೆಗಳು ಆಗುತ್ತಿವೆ. ಈ ಆಸ್ಪತ್ರೆ ಮೇಲೆ ಬೀಳುತ್ತಿರುವ ಹೆಚ್ಚಿನ ಒತ್ತಡ ನಿವಾರಿಸಲು ಕೆಲ ವರ್ಷಗಳಿಂದ ಕೆ.ಸಿ. ಜನರಲ್‌ ಆಸ್ಪತ್ರೆಗೆ ಶಿಫಾರಸಿನ ಮೇಲೆ ಪ್ರಕರಣಗಳನ್ನು ವರ್ಗಾಯಿಸಲಾಗುತ್ತಿದೆ. ಹೀಗೆ ಬರುವ ಪ್ರಕರಣಗಳನ್ನು ನಿರ್ವಹಿಸಲು ಕೆ.ಸಿ. ಜನರಲ್‌ ಆಸ್ಪತ್ರೆಯಲ್ಲಿ ಸದ್ಯ 100 ಹಾಸಿಗೆಯನ್ನು ತಾಯಿ - ಮಗು ಚಿಕಿತ್ಸಗೆ ಮೀಸಲಿಡಲಾಗಿದೆ. ಆದರೆ, ಹೆಚ್ಚಿನ ಜನ ಚಿಕಿತ್ಸೆಗೆ ಬರುವ ಕಾರಣ ಹೊಸ ತಾಯಿ - ಮಗು ಆಸ್ಪತ್ರೆ ನಿರ್ಮಿಸಲಾಗುತ್ತಿದೆ.

ಸದ್ಯ 66.78 ಕೋಟಿ ಮೊತ್ತದಲ್ಲಿ ಈ ಆಸ್ಪತ್ರೆ ಕಟ್ಟಡ ಸೇರಿ ಭೋದಕ ವಿಭಾಗ, ಘನತ್ಯಾಜ್ಯ ನಿರ್ವಹಣಾ ಸೇರಿ ಮತ್ತಿತರ ಕಟ್ಟಡಗಳು ಒಟ್ಟಾರೆ ₹ 150 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆ. ಆಸ್ಪತ್ರೆ ಕಟ್ಟಡ ಈಗಾಗಲೇ ಅರ್ಧಕ್ಕಿಂತ ಹೆಚ್ಚು ಪ್ರಮಾಣದ ಕಾಮಗಾರಿ ಮುಗಿಯಬೇಕಿತ್ತು. ಆದರೆ, ಕಟ್ಟಡದ ನಿರ್ಮಾಣ ಜಾಗದಲ್ಲಿದ್ದ ಕೋವಿಡ್‌ ಅವಧಿಯಲ್ಲಿ ನಿರ್ಮಿಸಿದ್ದ ತುರ್ತು ಆಸ್ಪತ್ರೆ ತೆರವು, ಮರಗಳ ಸ್ಥಳಾಂತರ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಾಣ ಆರಂಭ ವಿಳಂಬವಾಗಿದೆ.

2027ರ ಹೊತ್ತಿಗೆ ಕಾಮಗಾರಿ ಮುಗಿಯಲಿದ್ದು, ಸದ್ಯ ಬೇಸ್‌ಮೆಂಟ್‌ನ ರೂಫ್‌ಟಾಪ್‌ ಕೆಲಸ ನಡೆಯುತ್ತಿದೆ. ನಾಲ್ಕು ಮಹಡಿಯ ಕಟ್ಟಡ ಇದಾಗಿರಲಿದ್ದು, 2131 ಚಮೀ ಅಡಿಪಾಯ ವಿಸ್ತೀರ್ಣ, 12834 ಚ.ಮೀ ವಿಸ್ತೀರ್ಣ ಹೊಂದಿರಲಿದೆ. ಇಲ್ಲಿ ಎರಡು ಬ್ಲಾಕ್‌ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಕನ್ನಡಪ್ರಭಕ್ಕೆ ಕಟ್ಟಡ ನಿರ್ಮಾಣದ ಉಸ್ತುವಾರಿ ಎಂಜಿನಿಯರ್ ತಿಳಿಸಿದರು.

ಮಲ್ಲೇಶ್ವರದಲ್ಲಿರುವ ಕೆ.ಸಿ.ಜನರಲ್‌ ಆಸ್ಪತ್ರೆ ಒಟ್ಟು 13.5 ಎಕರೆ ವಿಸ್ತೀರ್ಣ ಹೊಂದಿದೆ. ರೋಗಿಗಳ ದಟ್ಟಣೆ ಹಾಗೂ ತಾಯಿ-ಮಗು ಸಂಕೀರ್ಣ ಪ್ರಕರಣಗಳ ನಿರ್ವಹಣೆಗೆ ಈಗಿರುವ ವ್ಯವಸ್ಥೆ ಸಾಕಾಗುತ್ತಿಲ್ಲ. ಹೀಗಾಗಿ, ಮುಂದಿನ ಒಂದೂವರೆ ವರ್ಷದಲ್ಲಿ ಹೈಟೆಕ್‌ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವಾಣಿವಿಲಾಸ ಆಸ್ಪತ್ರೆ ಮೇಲೆ ಒತ್ತಡವೂ ಕಡಿಮೆಯಾಗಲಿದೆ ಎಂದು ಕೆ.ಸಿ. ಜನರಲ್‌ ಆಸ್ಪತ್ರೆ ವೈದ್ಯರು ತಿಳಿಸಿದರು.

50 ಹಾಸಿಗೆಗಳ ಟ್ರಾಮಾಕೇರ್‌ ಸೆಂಟರ್‌

ತಾಯಿ ಮಗು ಆಸ್ಪತ್ರೆ ಜತೆಗೆ ಆವರಣದಲ್ಲಿ ₹ 35 ಕೋಟಿ ವೆಚ್ಚದಲ್ಲಿ 50 ಹಾಸಿಗೆಗಳ ಟ್ರಾಮಾಕೇರ್‌ ಸೆಂಟರ್‌ ನಿರ್ಮಾಣವಾಗುತ್ತಿದೆ. ಇದರ ನಿರ್ಮಾಣದ ಬಳಿಕ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕವನ್ನು ಟ್ರಾಮಾಕೇರ್‌ ಸೆಂಟರ್‌ಗೆ ಸ್ಥಳಾಂತರಿಸಲಾಗುವುದು. ಜತೆಗೆ ಆಸ್ಪತ್ರೆಯಲ್ಲಿ 790 ಚದರ ಮೀಟರ್‌ ವಿಸ್ತೀರ್ಣದಲ್ಲಿ ₹ 4.28 ಕೋಟಿ ವೆಚ್ಚದಲ್ಲಿ ಶವಾಗಾರ ಕೊಠಡಿಯೂ ನಿರ್ಮಾಣವಾಗುತ್ತಿದೆ. 230 ಚದರ ಮೀಟರ್‌ ವಿಸ್ತೀರ್ಣದಲ್ಲಿ ₹ 1.77 ಕೋಟಿ ವೆಚ್ಚದಲ್ಲಿ ಅಡುಗೆ ಮನೆ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದರು.

ಒಂದೂವರೆ ವರ್ಷದಲ್ಲಿ ನೂತನ ತಾಯಿ-ಮಗು ಆಸ್ಪತ್ರೆ ಮುಗಿಯಲಿದೆ. ಇದರಿಂದ ಈ ಭಾಗದ ಹೆಚ್ಚಿನವರಿಗೆ ಅನುಕೂಲ ಆಗಲಿದೆ.

-ಮೋಹನ್‌ ರಾಜಣ್ಣ, ವೈದ್ಯಕೀಯ ಅಧೀಕ್ಷಕ ಕೆ.ಸಿ. ಜನರಲ್ ಆಸ್ಪತ್ರೆ

ವಿವಿಧ ಕಾಮಗಾರಿ:

ಬೋಧಕ ವಿಭಾಗ ಕಟ್ಟಡ ನಿರ್ಮಾಣ - ₹ 38.28 ಕೋಟಿ

ಶವಾಗಾರ ಕೊಠಡಿ - ₹ 4.28 ಕೋಟಿ

ಅಗ್ನಿಶಾಮಕ ವ್ಯವಸ್ಥೆ - ₹ 4.80 ಕೋಟಿ

ಲಾಂಡ್ರಿ - ₹ 2 ಕೋಟಿ

ಜೈವಿಕ ವೈದ್ಯಕೀಯ ತ್ಯಾಜ್ಯ ಘಟಕ - ₹ 38 ಲಕ್ಷ

ಹಳೆ ಕಟ್ಟಡ ದುರಸ್ತಿ ₹ 9.98 ಕೋಟಿ