ಸಾರಾಂಶ
ಫರೀದಾಬಾದ್: ಕೆಂಪು ಕೋಟೆ ಬಳಿಯ ಸ್ಫೋಟದ ಸಂಚಿನಲ್ಲಿ ಅಲ್-ಫಲಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದವರು ಭಾಗವಾಗಿಯಾಗಿದ್ದು ಪತ್ತೆಯಾದ ಬೆನ್ನಲ್ಲೇ, ವಿವಿಯಿಂದ ಉಗ್ರರಿಗೆ ಧನಸಹಾಯ ಆಗಿರಬಹುದೇ ಎಂಬ ಅನುಮಾನದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ.) ವಿವಿಗೆ ಶೋಕಾಸ್ ನೋಟಿಸ್ ಹೊರಡಿಸಿದೆ. ಈ ಮೂಲಕ, ತನಿಖೆಗೆ ಎನ್‌ಐಎ ಬಳಿಕ ಇ.ಡಿ. ಕೂಡಾ ಪ್ರವೇಶಿಸಿದಂತಾಗಿದೆ.
ವಿವಿಯಲ್ಲೇ ಉಗ್ರದಾಳಿಯ ಸಂಚು ರೂಪಿಸಿ, ಅಲ್ಲಿನ ಪ್ರಯೋಗಾಲಯದಿಂದಲೇ ಸ್ಫೋಟಕಕ್ಕೆ ಬೇಕಾದ ವಸ್ತುಗಳನ್ನು ಬಳಸಲಾಗಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ, ಸಂಸ್ಥೆಯ ಮೂಲಕ ರವಾನೆಯಾದ ಹಣ ಮತ್ತು ಈಗಾಗಲೇ ತನಿಖೆಗೆ ಒಳಪಟ್ಟಿರುವ ವ್ಯಕ್ತಿಗಳನ್ನು ಒಳಗೊಂಡ ಅನುಮಾನಾಸ್ಪದ ವಿನಿಮಯದ ಬಗ್ಗೆ ಇ.ಡಿ. ಅಧಿಕಾರಿಗಳು ತನಿಖೆ ನಡೆಸಲಿದ್ದಾರೆ.
ಎಐಯುನಿಂದ ಅಲ್ ಫಲಾಹ್ ವಿವಿ ಸದಸ್ಯತ್ವ ರದ್ದು
ನವದೆಹಲಿ: ಟೆರರ್ ಡಾಕ್ಟರ್ಸ್‌ಗಳ ಹಬ್ ಆಗಿ ಕುಖ್ಯಾತಿ ಪಡೆದಿರುವ ಫರೀದಾಬಾದ್‌ನ ಅಲ್ ಫಲಾಹ್ ವಿವಿಗೆ ಮತ್ತೊಂದು ಆಘಾತ ಎದುರಾಗಿದ್ದು, ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ( ಎಐಯು) ಸಂಸ್ಥೆಯ ಸದಸ್ಯತ್ವವನ್ನೇ ರದ್ದುಗೊಳಿಸಿದೆ.ಕೆಂಪುಕೋಟೆ ದುರಂತದ ಬಳಿಕ ವಿವಿ ವಿರುದ್ಧ ತನಿಖೆ ಚುರುಕುಗೊಂಡಿದೆ. ಈ ಬೆನ್ನಲ್ಲೇ ಎಐಯು ಅಲ್ ಫಲಾಹ್ ವಿಶ್ವವಿದ್ಯಾನಿಲಯವು ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಕಾರಣ ನೀಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದೆ.ಈ ಪ್ರಕಾರ ಅಲ್ ಫಲಾಹ್ ಮುಂದಿನ ದಿನಗಳಲ್ಲಿ ತನ್ನ ಯಾವುದೇ ಚಟುವಟಿಕೆಯಲ್ಲಿ ಎಐಯು ಹೆಸರು ಅಥವಾ ಲೋಗೋವನ್ನು ಬಳಸಕೂಡದು ಎಂದು ಸೂಚನೆ ನೀಡಿದೆ.
ಮಾನ್ಯತೆ ಕುರಿತು ಸುಳ್ಳು ಮಾಹಿತಿ: ವಿವಿಗೆ ನ್ಯಾಕ್ ನೋಟಿಸ್
ನವದೆಹಲಿ: ಟೆರರ್ ಡಾಕ್ಟರ್ಸ್‌ಗಳಿಗೆ ಉದ್ಯೋಗ ನೀಡಿದ್ದ ಫರೀದಾಬಾದ್ ಅಲ್ ಫಲಾಹ್ ವಿವಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ವೆಬ್‌ಸೈಟ್‌ನಲ್ಲಿ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಮಾನ್ಯತೆ ಪಡೆದಿರುವ ಸುಳ್ಳು ಮಾಹಿತಿ ಪ್ರಕಟಿಸಿದ್ದಕ್ಕಾಗಿ ನ್ಯಾಕ್ ನೋಟಿಸ್ ಜಾರಿ ಮಾಡಿದೆ. ಕಾಲೇಜು, ವಿವಿ ಸೇರಿದಂತೆ ಉನ್ನತ ಸಂಸ್ಥೆಗಳಿಗೆ ಮಾನ್ಯತೆ ನೀಡುವ ಸರ್ಕಾರದ ಸ್ವಾಯತ್ತ ಸಂಸ್ಥೆ ನ್ಯಾಕ್ ಅಲ್ ಫಲಾಹ್ ವಿವಿಗೆ ಯಾವುದೇ ಮಾನ್ಯತೆ ನೀಡಿಲ್ಲ. ಹೀಗಿದ್ದರೂ ವಿವಿ ವೆಬ್‌ಸೈಟ್‌ನಲ್ಲಿ ತಪ್ಪು ಮಾಹಿತಿ ಉಲ್ಲೇಖಿಸಿದೆ. ಹೀಗಾಗಿ ನೋಟಿಸ್ ಜಾರಿಯಾಗಿದ್ದು, ‘ಅಲ್ ಫಲಾಹ್ ವಿವಿ ಯಾವುದೇ ಮಾನ್ಯತೆಯನ್ನು ಹೊಂದಿಲ್ಲ. ಅರ್ಜಿಯೂ ಸಲ್ಲಿಸಿಲ್ಲ. ಕ್ಯಾಂಪಸ್‌ನಲ್ಲಿ ಮೂರು ಕಾಲೇಜುಗಳನ್ನು ನಡೆಸುತ್ತಿದೆ. ಆದರೆ ಸುಳ್ಳು ಮಾಹಿತಿಯನ್ನು ನೀಡಿ ಸಾರ್ವಜನಿಕರ ದಾರಿ ತಪ್ಪಿಸುತ್ತಿದೆ. ಕಾನೂನು ಕ್ರಮ ಏಕೆ ಕೈಗೊಳ್ಳಬಾರದು’ ಎಂದು ಪ್ರಶ್ನಿಸಿದೆ.
ವಿವಿ ಸ್ಥಾಪಕನೂ ವಂಚಕ: 7.5 ಕೋಟಿ ವಂಚಿಸಿ, 3 ವರ್ಷ ಸೆರೆಮನೆ ವಾಸ
ನವದೆಹಲಿ: ಫರೀದಾಬಾದ್‌ನ ಅಲ್ ಫಲಾಹ ವಿವಿ ಸ್ಥಾಪಕ ಜಾವೇದ್ ಅಹ್ಮದ್ ಸಿದ್ದಿಕಿ ಕೂಡ ವಂಚಕ ಎನ್ನುವ ಸಂಗತಿ ಹೊರಬಿದ್ದಿದೆ. ವಿವಿಗೆ ಸಂಬಂಧಿತ 9 ಕಂಪನಿಗಳ ವ್ಯವಸ್ಥಾಪಕರಾಗಿರುವ ಸಿದ್ದಿಕಿ ಹಳೆ ಪ್ರಕರಣವೊಂದರಲ್ಲಿ ಜನರಿಂದ 7.5 ಕೋಟಿ ರು.ಹಣ ಠೇವಣಿ ಸಂಗ್ರಹಿಸಿ ಬಳಿಕ ಜನರಿಗೆ ವಂಚಿಸಿದ ಆರೋಪ ಎದುರಿಸುತ್ತಿದ್ದರು. ಈ ಪ್ರಕರಣದಲ್ಲಿ ಆತ 3 ರ್ಷ ಜೈಲು ಶಿಕ್ಷೆಗೆ ಕೂಡಾ ಗುರಿಯಾಗಿದ್ದ. 2001ರಲ್ಲಿ ಆತನನ್ನು ಪೊಲೀಸರು ಬಂಧಿಸಿದ್ದರು. ಆ ಬಳಿಕ ಮೂರು ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿ ಜನರಿಗೆ ಹಣವನ್ನು ಮರಳಿ ನೀಡುವುದಕ್ಕೆ ಒಪ್ಪಿದ ಬಳಿಕ 2004ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))