ಬೆಂಗಳೂರಿನ ರಸ್ತೆಗಳ ಕಸ ಗುಡಿಸಲು ದಿನಕ್ಕೆ ₹ 24 ಲಕ್ಷ ವ್ಯಯಿಸಲು ಅನುಮತಿ

| N/A | Published : Nov 14 2025, 02:00 AM IST / Updated: Nov 14 2025, 04:40 AM IST

Bengaluru
ಬೆಂಗಳೂರಿನ ರಸ್ತೆಗಳ ಕಸ ಗುಡಿಸಲು ದಿನಕ್ಕೆ ₹ 24 ಲಕ್ಷ ವ್ಯಯಿಸಲು ಅನುಮತಿ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಮುಖ್ಯ ಮತ್ತು ಉಪ ಮುಖ್ಯರಸ್ತೆಗಳನ್ನು ಯಂತ್ರದ ಸಹಾಯದಿಂದ ಗುಡಿಸಲು 613.25 ಕೋಟಿ ರು. ವೆಚ್ಚದಲ್ಲಿ ಏಳು ವರ್ಷಗಳ ಅವಧಿಗೆ 59 ಯಾಂತ್ರಿಕ ಕಸಗುಡಿಸುವ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

  ಬೆಂಗಳೂರು :  ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಮುಖ್ಯ ಮತ್ತು ಉಪ ಮುಖ್ಯರಸ್ತೆಗಳನ್ನು ಯಂತ್ರದ ಸಹಾಯದಿಂದ ಗುಡಿಸಲು 613.25 ಕೋಟಿ ರು. ವೆಚ್ಚದಲ್ಲಿ ಏಳು ವರ್ಷಗಳ ಅವಧಿಗೆ 59 ಯಾಂತ್ರಿಕ ಕಸಗುಡಿಸುವ ಯಂತ್ರಗಳನ್ನು ಬಾಡಿಗೆ ಆಧಾರದ ಮೇಲೆ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಈ ಮೊತ್ತವನ್ನು ಏಳು ವರ್ಷಗಳ ಅವಧಿಗೆ ವಿಭಾಗ ಮಾಡಿದರೆ ಪ್ರತಿ ನಿತ್ಯ 1,688 ಕಿ.ಮೀ. ಉದ್ದದ ರಸ್ತೆಗಳಲ್ಲಿ ಕಸ ಗುಡಿಸಲು ಸರಾಸರಿ 24.33 ಲಕ್ಷ ರು.ಗಳಷ್ಟು ವೆಚ್ಚ ಅಂದಾಜಿಸಲಾಗಿದೆ.

ಐದು ಪಾಲಿಕೆಗಳ ವ್ಯಾಪ್ತಿಯಲ್ಲಿರುವ 1,688 ಕಿ.ಮೀ. ಉದ್ದದ ರಸ್ತೆಗಳಲ್ಲಿ 4,720 ಕಿ.ಮೀ.ಉದ್ದದಷ್ಟು (ಸ್ವೀಪಿಂಗ್‌ ಲೆಂತ್) ಕಸವನ್ನು ಈ ಮೆಕ್ಯಾನಿಕಲ್‌ ಸ್ವೀಪಿಂಗ್‌ ಯಂತ್ರಗಳು ಗುಡಿಸಲಿವೆ. ಪ್ರತಿ ನಿತ್ಯ ಪ್ರತಿ ಕಿ.ಮೀ. ರಸ್ತೆ ಗುಡಿಸಲು 894.53 ರು. ವೆಚ್ಚದಲ್ಲಿ ಯಂತ್ರವನ್ನು ಬಾಡಿಗೆಗೆ ಪಡೆಯಲು ನಿರ್ಧರಿಸಲಾಗಿದೆ.

ಕಸ ಗುಡಿಸಲು ನಿಗದಿ ಮಾಡಿರುವ ವೆಚ್ಚವನ್ನು ಪ್ರತಿ ವರ್ಷ ಶೇ.5ರಷ್ಟು ಹೆಚ್ಚಳ ಮಾಡಲು ಸಹ ಅನುಮೋದನೆ ನೀಡಿದ್ದು, ಪ್ರಸ್ತುತ ಏಳು ವರ್ಷಗಳ ಅವಧಿಗೆ 613.25 ಕೋಟಿ ರು. ನಿಗದಿ ಮಾಡಲಾಗಿದೆ. ಜಿಬಿಎಯು 781.08 ಕೋಟಿ ರು.ಗೆ ಪ್ರಸ್ತಾವನೆ ಸಲ್ಲಿಸಿದ್ದರೂ ವಿವಿಧ ಮಾನದಂಡಗಳ ಆಧರಿಸಿ ಅಂತಿಮವಾಗಿ 613.25 ಕೋಟಿ ರು.ಗೆ (ಜಿಎಸ್‌ಟಿ ಸೇರಿ) ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಟೆಂಡರ್‌ನಲ್ಲಿ ಭಾಗವಹಿಸುವವರು ಯಂತ್ರದ ನಿರ್ವಹಣೆ, ಸಿಬ್ಬಂದಿ ವೆಚ್ಚವನ್ನು ಅವರೇ ಭರಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.

ಪ್ರತಿ ನಿತ್ಯ ಸರಾಸರಿ 24.33 ಲಕ್ಷ ವೆಚ್ಚ:

ಇದನ್ನು ಏಳು ವರ್ಷಗಳ ಅವಧಿಗೆ ವಿಭಾಗ ಮಾಡಿದರೆ ಪ್ರತಿ ನಿತ್ಯ 1,688 ಕಿ.ಮೀ. ಉದ್ದದ ರಸ್ತೆಗಳಲ್ಲಿ ಕಸ ಗುಡಿಸಲು ಸರಾಸರಿ 24.33 ಲಕ್ಷ ರು. ವೆಚ್ಚ ಉಂಟಾಗುವ ಅಂದಾಜಿದೆ. ಪ್ರತಿ ವರ್ಷ ಬಾಡಿಗೆ ವೆಚ್ಚ ಶೇ.5ರಷ್ಟು ಹೆಚ್ಚಾಗಲಿರುವ ಹಿನ್ನೆಲೆಯಲ್ಲಿ ಏಳು ವರ್ಷಗಳಲ್ಲಿ ಒಂದೊಂದು ವರ್ಷದಲ್ಲಿ ಒಂದೊಂದು ರೀತಿಯ ಬಾಡಿಗೆ ಪಾವತಿಯಾಗಲಿದೆ.

ಉದಾ: ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಮೊದಲ ವರ್ಷ ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 16.25 ಕೋಟಿ ರು., ಪೂರ್ವ ಪಾಲಿಕೆ ವ್ಯಾಪ್ತಿಯಲ್ಲಿ 17.88 ಕೋಟಿ ರು., ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 22.76 ಕೋಟಿ ರು., ಬೆಂಗಳೂರು ಉತ್ತರ ಪಾಲಿಕೆಯಲ್ಲಿ 21.13 ಕೋಟಿ ರು., ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 17.88 ಕೋಟಿ ರು.ಗೆ ಪ್ರಸ್ತಾಪಿಸಿತ್ತು. 2ನೇ ವರ್ಷಕ್ಕೆ ಕ್ರಮವಾಗಿ 17.07 ಕೋಟಿ ರು., 18.78 ಕೋಟಿ ರು., 23.90 ಕೋಟಿ ರು., 22.19 ಕೋಟಿ ರು., 18.78 ಕೋಟಿ ರು.,ಗಳಾಗಲಿದೆ ಎಂದು ಜಿಬಿಎ ಪ್ರಸ್ತಾವನೆಯಲ್ಲಿ ತಿಳಿಸಿತ್ತು.

ಗ್ರೇಟರ್‌ ಬೆಂಗಳೂರು ಆಡಳಿತ ವಿಧೇಯಕ್ಕೆ ತಿದ್ದುಪಡಿ

ಗ್ರೇಟರ್ ಬೆಂಗಳೂರು ಆಡಳಿತ ಅಧಿನಿಯಮ- 2024ರ ವಿವಿಧ ಕಲಂಗಳಿಗೆ ತಿದ್ದುಪಡಿ ತರುವ ಉದ್ದೇಶದ ಗ್ರೇಟರ್ ಬೆಂಗಳೂರು ಆಡಳಿತ (ಎರಡನೇ ತಿದ್ದುಪಡಿ) ವಿಧೇಯಕ-2025ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಮುಂದಿನ ಅಧಿವೇಶನದಲ್ಲಿ ಮಂಡನೆಯಾಗಲಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಆರ್ಥಿಕ ಇಲಾಖೆ ಇವರನ್ನು ಪ್ರಾಧಿಕಾರದ ಸದಸ್ಯರ ಪಟ್ಟಿಗೆ ಸೇರಿಸುವುದು.

ಲೋಕಸಭೆ, ರಾಜ್ಯಸಭೆ, ರಾಜ್ಯವಿಧಾನ ಸಭೆ ಮತ್ತು ರಾಜ್ಯ ವಿಧಾನ ಪರಿಷತ್‌ ಸದಸ್ಯರನ್ನು ಪ್ರಾಧಿಕಾರದ ಸದಸ್ಯರನ್ನಾಗಿ ನೇಮಕ ಮಾಡುವ ಬಗ್ಗೆ ಹೆಚ್ಚಿನ ಸ್ಪಷ್ಟನೆ ತರುವ ಉದ್ದೇಶದಿಂದ ಕಲಂ 09ರ ಉಪ ಕಲಂ 05 ಅನ್ನು ಬದಲಾಯಿಸಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದ್ದಾರೆ.

ಸಂಪುಟ ಉಪಸಮಿತಿ ವರದಿ ಸಲ್ಲಿಕೆ ವಿಳಂಬಕ್ಕೆ ಸಿಎಂ ಗರಂ

ಬೆಂಗಳೂರು: ಬಿಜೆಪಿ ಅವಧಿಯ ಕೋವಿಡ್ ಹಗರಣ ಕುರಿತು ಜಸ್ಟಿಸ್‌ ಮೈಕಲ್‌ ಡಿ ಕುನ್ಹಾ ಆಯೋಗದ ವರದಿಯಲ್ಲಿ ಪ್ರಸ್ತಾಪಿಸಿರುವ ಬಹುಕೋಟಿ ಅವ್ಯವಹಾರ ಕುರಿತು ವರದಿ ಸಲ್ಲಿಸಲು ರಚಿಸಿದ್ದ ಸಚಿವ ಸಂಪುಟ ಉಪ ಸಮಿತಿ ಸೇರಿ ಮೂರು ಸಂಪುಟ ಉಪಸಮಿತಿಗಳ ವಿಳಂಬ ಧೋರಣೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಜತೆಗೆ, ಆರು ತಿಂಗಳಿಗೂ ಹೆಚ್ಚು ಕಾಲದಿಂದ ಯಾವುದೇ ವರದಿ ನೀಡದ ಮೂರು ಸಚಿವ ಸಂಪುಟ ಉಪಸಮಿತಿಗಳು ತಕ್ಷಣ ವರದಿ ನೀಡಬೇಕು ಎಂದು ಸೂಚನೆ ನೀಡಿದ್ದಾರೆ

- 7 ವರ್ಷ ಅವಧಿಗೆ ₹613 ಕೋಟಿ ವೆಚ್ಚ । 59 ಯಾಂತ್ರಿಕ ಕಸ ಗುಡಿಸುವ ಯಂತ್ರ ಬಾಡಿಗೆಗೆ

- 1 ಕಿ.ಮೀ. ಕಸ ಗುಡಿಸಿದರೆ ₹900 ಬಾಡಿಗೆ ಪಾವತಿ । ಸಚಿವ ಸಂಪುಟ ಸಭೆ ಅನುಮೋದನೆ

- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ರಸ್ತೆಗಳನ್ನು ಯಂತ್ರದ ಸಹಾಯದಿಂದ ಗುಡಿಸಲು ಯೋಜನೆ

- ಏಳು ವರ್ಷಗಳ ಅವಧಿಗೆ 59 ಕಸಗುಡಿಸುವ ಯಂತ್ರಗಳನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಅನುಮತಿ

- ಇದಕ್ಕಾಗಿ ಏಳೂ ವರ್ಷ ಅವಧಿಗೆ 613 ಕೋಟಿ ರು. ಪಾವತಿಸಲು ಸಚಿವ ಸಂಪುಟ ಸಭೆ ಅನುಮೋದನೆ

- ಆ ಮೊತ್ತವನ್ನು ಏಳು ವರ್ಷ ಅವಧಿಗೆ ವಿಭಾಗ ಮಾಡಿದರೆ ಪ್ರತಿ ದಿನಕ್ಕೆ 24.33 ಲಕ್ಷ ರು.ಗಳಷ್ಟು ವೆಚ್ಚ

Read more Articles on