ಅವೈಜ್ಞಾನಿಕ ಕಸ ವಿಲೇವಾರಿ ಘಟಕದಿಂದ ಸಮಸ್ಯೆ

| Published : Nov 10 2025, 12:15 AM IST

ಸಾರಾಂಶ

ತಾಲೂಕಿನ ಚೇಳೂರು ಗ್ರಾಮ ಪಂಚಾಯಿತಿ ವತಿಯಿಂದ ಎಣ್ಣೆ ಕಟ್ಟೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಕಸವಿಲೇವಾರಿ ಘಟಕದಿಂದಾಗಿ ಜಮೀನಿಗೆ ಓಡಾಡಲು ತುಂಬಾ ತೊಂದರೆಯಾಗಿದೆ ಎಂದು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ಚೇಳೂರು ಗ್ರಾಮ ಪಂಚಾಯಿತಿ ವತಿಯಿಂದ ಎಣ್ಣೆ ಕಟ್ಟೆ ಗ್ರಾಮದ ಹೊರವಲಯದಲ್ಲಿ ನಿರ್ಮಾಣಗೊಂಡಿರುವ ಕಸವಿಲೇವಾರಿ ಘಟಕದಿಂದಾಗಿ ಜಮೀನಿಗೆ ಓಡಾಡಲು ತುಂಬಾ ತೊಂದರೆಯಾಗಿದೆ ಎಂದು ಗ್ರಾಮದ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿರುವ ಗ್ರಾಮಸ್ಥರು ಹಾಗೂ ಆ ದಾರಿಯನ್ನು ಬಳಸುವ ರೈತರು ಕಸ ವಿಲೇವಾರಿ ಘಟಕ ಅವೈಜ್ಞಾನಿಕವಾಗಿದ್ದು, ಹಸಿ ಕಸ ಮತ್ತು ಒಣ ಕಸ ಎಂದು ಬೇರ್ಪಡಿಸದೆ ರೈತರ ಜಮೀನ ಅಕ್ಕ ಪಕ್ಕ ಎಲ್ಲಂದರೆ ಅಲ್ಲಿ ಕಸ ಸುರಿದು ಗ್ರಾಮಸ್ಥರು ರೈತರು ನಮ್ಮ ಜಮೀನಿಗೆ ಓಡಾಡಲು ತುಂಬಾ ತೊಂದರೆಯಾಗಿದೆ. ಪಂಚಾಯತಿ ಅವರು ಕಸವನ್ನು ಎಲ್ಲೆಂದರಲ್ಲಿ ಸುರಿಯುವುದರಿಂದ ಕಸದ ತ್ಯಾಜ್ಯ ಮತ್ತು ಪ್ಲಾಸ್ಟಿಕ್ ಗಾಳಿ ಬೀಸಿ ಜಮೀನಿಗೆ ಬರುತ್ತಿದೆ. ನಾವು ದಿನ ನಿತ್ಯ ಇದೇ ಜಾಗದಲ್ಲಿ ನಮ್ಮ ತೋಟಗಳಿಗೆ ಓಡಾಡುತ್ತೇವೆ. ನಮ್ಮ ಹಸು ದನ ಕರುಗಳನ್ನು ತೋಟಕ್ಕೆ ಹೋಡೆದುಕೊಂಡು ಹೋಗುವಾಗ ನಮ್ಮ ಪಶು ಕರುಗಳ ಮೇಲೆ ದಾಳಿ ಮಾಡಿವೆ ಎಂದು ದೂರಿದರು.

ಗ್ರಾಮ ಪಂಚಾಯಿತಿ ಸದಸ್ಯ ಧನಂಜಯ್ ಮಾತನಾಡಿ ಸಾಕಷ್ಟು ಬಾರಿ ಪಂಚಾಯಿತಿ ಸಭೆಗಳಲ್ಲಿ ಕಸ ವಿಲೇವಾರಿ ಘಟಕದ ಬಗ್ಗೆ ಹಾಗೂ ಇದರ ಸುತ್ತಲೂ ಕಾಂಪೌಂಡ್ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದರೂ, ಕೇವಲ ಭರವಸೆಯನ್ನು ನೀಡುತ್ತಿದ್ದಾರೆ ಹೊರತು ಯಾರು ಸಹ ಗಮನಹರಿಸುತ್ತಿಲ್ಲ. ಇದೇ ಜಾಗದಲ್ಲಿ ಗ್ರಾಮಕ್ಕೆ ಕುಡಿಯುವ ನೀರು ಒದಗಿಸುವ ಓವರ್ ಟ್ಯಾಂಕ್ ಇದ್ದು ಇಲ್ಲಿ ಕೊಳಿತ ತ್ಯಾಜ್ಯ ಟ್ಯಾಂಕಿನ ಒಳಗೆ ಬೀಳುತ್ತಿದ್ದು, ಅದೇ ನೀರನ್ನು ಗ್ರಾಮಸ್ಥರು ಕುಡಿಯುವಂತಾಗಿದೆ . ಇದೇ ರೀತಿ ಮುಂದುವರೆದರೆ ಗ್ರಾಮಸ್ಥರು ಪ್ರತಿಭಟನೆ ನೆಡಸ ಬೇಕಾಗುತ್ತದೆ ಎಂದರು.