ಕೆಮಿಕಲ್‌ ಬಾಂಬ್‌ ಉಗ್ರರ ಬಂಧನ - ದಾಳಿ ಸಂಚು ರೂಪಿಸಿದ್ದ 3 ಉಗ್ರರು

| N/A | Published : Nov 10 2025, 01:15 AM IST / Updated: Nov 10 2025, 04:02 AM IST

Terrorist

ಸಾರಾಂಶ

ಕೆಮಿಕಲ್‌ ಬಾಂಬ್‌ ಬಳಸಿ ದೇಶಾದ್ಯಂತ ಸಮೂಹ ವಿನಾಶಕ್ಕೆ ಸಂಚು ರೂಪಿಸಿದ್ದ 3 ಉಗ್ರರನ್ನು ಗುಜರಾತ್‌ನ ಉಗ್ರನಿಗ್ರಹ ಪಡೆಯು (ಎಟಿಎಸ್‌) ಬಂಧಿಸಿದ್ದು, ಅವರಿಂದ ಮಾರಕಾಸ್ತ್ರ ವಶಪಡಿಸಿಕೊಂಡಿದೆ.

 ಗಾಂಧಿನಗರ: ಕೆಮಿಕಲ್‌ ಬಾಂಬ್‌ ಬಳಸಿ ದೇಶಾದ್ಯಂತ ಸಮೂಹ ವಿನಾಶಕ್ಕೆ ಸಂಚು ರೂಪಿಸಿದ್ದ 3 ಉಗ್ರರನ್ನು ಗುಜರಾತ್‌ನ ಉಗ್ರನಿಗ್ರಹ ಪಡೆಯು (ಎಟಿಎಸ್‌) ಬಂಧಿಸಿದ್ದು, ಅವರಿಂದ ಮಾರಕಾಸ್ತ್ರ ವಶಪಡಿಸಿಕೊಂಡಿದೆ.

ಇದರೊಂದಿಗೆ ದೇಶವ್ಯಾಪಿ ನಡೆಯುಬಹುದಾಗಿದ್ದ ಬಹುದೊಡ್ಡ ಉಗ್ರ ಕೃತ್ಯವೊಂದನ್ನು ಯಶಸ್ವಿಯಾಗಿ ತಡೆದಿದೆ. ಬಂಧಿತರು ಐಸಿಸ್‌ನ ಉಪವಿಭಾಗವಾಗಿರುವ ಇಸ್ಲಾಮಿಕ್‌ ಸ್ಟೇಟ್‌ ಖೊರಾಸನ್‌ ಪ್ರಾವಿನ್ಸ್‌ (ಐಎಸ್‌ಕೆಪಿ) ಜತೆ ನಂಟು ಹೊಂದಿದ್ದು ಕಂಡುಬಂದಿದೆ.

ಚೀನಾ ವೈದ್ಯ:

ಬಂಧಿತರಲ್ಲಿ ಒಬ್ಬನಾದ ಹೈದರಾಬಾದ್‌ ಮೂಲದ ಅಹ್ಮದ್‌ ಮೊಹಿಯುದ್ದಿನ್‌ ಸೈಯದ್‌, ಚೀನಾದಿಂದ ಎಂಬಿಬಿಎಸ್‌ ಪದವಿ ಪಡೆದಿದ್ದ. ಆತ, ತನ್ನ ವೈದ್ಯ ಜ್ಞಾನವನ್ನು ಬಳಸಿಕೊಂಡು ರೈಸಿನ್‌ ಎಂಬ ವಿಷ ತಯಾರಿಸಿದ್ದ. ಇನ್ನಿಬ್ಬರನ್ನು ಉತ್ತರಪ್ರದೇಶದ ಆಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಮೊಹಮ್ಮದ್ ಸಲೀಂ ಎಂದು ಗುರುತಿಸಲಾಗಿದೆ. ಇವರಿಬ್ಬರು ಲಖನೌ, ದೆಹಲಿ. ಅಹಮದಾಬಾದ್‌ನಲ್ಲಿ ತಿರುಗಾಡಿ ಹಲವು ಸ್ಥಳಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದರು. ಇವರೆಲ್ಲ ಶಸ್ತ್ರಾಸ್ತ್ರ ವಿನಿಮಯಕ್ಕಾಗಿ ಉತ್ತರಪ್ರದೇಶದಿಂದ ಗುಜರಾತ್‌ಗೆ ಬಂದಿದ್ದರು ಎನ್ನಲಾಗಿದೆ.

‘ಡಾ। ಸೈಯದ್‌ ದೊಡ್ಡ ಉಗ್ರದಾಳಿಗೆ ಸಂಚು ರೂಪಿಸಿದ್ದು, ಇದಕ್ಕಾಗಿ ಸ್ಥಳೀಯರನ್ನು ನೇಮಿಸಿಕೊಳ್ಳುತ್ತಿದ್ದರು ಮತ್ತು ಹಣ ಸಂಗ್ರಹಿಸುತ್ತಿದ್ದರು. ಇವರಿಗೆ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನ ಗಡಿಯಿಂದ ಡ್ರೋನ್‌ಗಳ ಮೂಲಕ ಕಳಿಸಲಾಗುತ್ತಿತ್ತು’ ಎಂದು ಎಟಿಎಸ್‌ನ ಪೊಲೀಸ್ ಉಪ ಮಹಾನಿರೀಕ್ಷಕ ಸುನಿಲ್‌ ಜೋಶಿ ಹೇಳಿದ್ದಾರೆ. ಬಂಧಿತರಿಂದ 2 ಗ್ಲೋಕ್‌ ಪಿಸ್ತೂಲು, ಬೆರೆಟ್ಟಾ ಪಿಸ್ತೂಲು, 30 ಸಿಡಿಮದ್ದು, 4 ಲೀಟರ್‌ ಹರಳೆಣ್ಣೆ, 3 ಮೊಬೈಲ್‌, 2 ಲ್ಯಾಪ್‌ಟಾಪ್‌ ವಶಕ್ಕೆ ಪಡೆಯಲಾಗಿದೆ.

ಏನಿದು ರೈಸಿನ್‌?:

ರೈಸಿನ್‌ ಪುಡಿಯು ಹರಳೆಣ್ಣೆ ಬೀಜದಿಂದ ಸಿಗುವ ವಿಷಕಾರಿ ಉಪವಸ್ತು. ಇದನ್ನು ಸಮೂಹ ಹತ್ಯಾಕಾಂಡ ನಡೆಸಲು ಸಮಾಜಘಾತಕ ಶಕ್ತಿಗಳು ಬಳಸುತ್ತವೆ. ಈ ಪುಡಿಯನ್ನು ನೀರಿನ ಮೂಲಗಳಿಗೆ ಭಾರೀ ಪ್ರಮಾಣದಲ್ಲಿ ಬೆರೆಸಿದರೆ, ಅದನ್ನು ಸೇವಿಸಿದವರು ಸಾವನ್ನಪ್ಪುತ್ತಾರೆ. ಆದರೆ ಹೀಗೆ ಮಾಡುವುದು ಸುಲಭವಿಲ್ಲ. ಈ ಪುಡಿ ಗಾಳಿಯ ಮೂಲಕ ಶ್ವಾಶಕೋಶವನ್ನು ಪ್ರವೇಶಿಸಿದರೂ ಜನ ಸಾವನ್ನಪ್ಪುವ ಸಾಧ್ಯತೆಯಿದೆ.

Read more Articles on