ಲಾಲ್ ಚೌಕ್‌ನಲ್ಲಿ ನಡೆಯಲು ಭಯವಾಗುತ್ತಿತ್ತು: ಮಾಜಿ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ

| Published : Sep 11 2024, 01:03 AM IST / Updated: Sep 11 2024, 05:41 AM IST

ಸಾರಾಂಶ

ಮಾಜಿ ಕೇಂದ್ರ ಗೃಹ ಸಚಿವ ಸುಶಿಲ್ ಕುಮಾರ್ ಶಿಂಧೆ ಅವರು ತಮ್ಮ ಅಧಿಕಾರಾವಧಿಯಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ನಡೆದಾಡಲು ಭಯವಾಗುತ್ತಿತ್ತು ಎಂದು ಹೇಳಿದ್ದಾರೆ. ಉಗ್ರರ ದಾಳಿಯ ಭೀತಿಯಿಂದಾಗಿ ಈ ಭಯ ಕಾಡುತ್ತಿತ್ತು ಎಂದು ಅವರು ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.

ನವದೆಹಲಿ: ಮಾಜಿ ಕೇಂದ್ರ ಗೃಹ ಸಚಿವ, ಕಾಂಗ್ರೆಸ್‌ ನಾಯಕ ಸುಶಿಲ್‌ ಕುಮಾರ್‌ ಶಿಂಧೆ ಅವರು ತಾವು ಕೇಂದ್ರ ಗೃಹ ಸಚಿವನಾಗಿದ್ದಾಗ ‘ಜಮ್ಮು ಕಾಶ್ಮೀರದ ಶ್ರೀನಗರದ ಲಾಲ್‌ ಚೌಕ್‌ನಲ್ಲಿ ನಡೆದಾಡಲು ಭಯವಾಗಿತ್ತು. ಉಗ್ರರು ದಾಳಿ ಮಾಡುವ ಆತಂಕವಿತ್ತು’ ಎಂದು ಹೇಳಿದ್ದಾರೆ.

ತಮ್ಮ ಜೀವನ ಚರಿತ್ರೆ ‘ಫೈವ್‌ ಡೆಕೇಡ್ಸ್‌ ಇನ್‌ ಪಾಲಿಟಿಕ್ಸ್‌’ ಪುಸ್ತಕ ಬಿಡುಗಡೆಯಲ್ಲಿ ಮಾತನಾಡಿದ ಅವರು, ನಾನು ಸಚಿವನಾಗಿದ್ದಾಗ ಅದೇ ಸಂದರ್ಭದಲ್ಲಿ ಶಿಕ್ಷಣ ತಜ್ಞ ವಿಜಯ್‌ ದಾರ್‌ ಶ್ರೀನಗರದ ಲಾಲ್‌ ಚೌಕ್‌ ಬಳಿ ಭಾಷಣ ಮಾಡುವಂತೆ ಹೇಳಿದ್ದರು. ಉಗ್ರರ ಉಪಟಳ ಹೆಚ್ಚಿದ್ದ ಕಾರಣ ಎಲ್ಲೆಂದರಲ್ಲಿ ನಡೆದಾಡದಂತೆ ಎಚ್ಚರಿಕೆ ನೀಡಿದ್ದರು. ಅಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ನನಗೆ ವಿಪರೀತ ಭಯವಾಗಿತ್ತು. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳಲು ಆಗುತ್ತಿರಲಿಲ್ಲ’ ಎಂದರು.

ಬಿಜೆಪಿ ವ್ಯಂಗ್ಯ:

ಕಾಂಗ್ರೆಸ್‌ನ ಹಿರಿಯ ನಾಯಕ ಶಿಂಧೆ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ,‘ಮಾಜಿ ಗೃಹ ಸಚಿವರ ಹೇಳಿಕೆಯು ಕಾಂಗ್ರೆಸ್ ಬಂಡವಾಳವನ್ನು ಎಳೆಎಳೆಯಾಗಿ ಬಿಡಿಸಿದೆ. ಕಾಂಗ್ರೆಸ್‌ ತನ್ನ 10 ವರ್ಷದ ಅವಧಿಯಲ್ಲಿ ಜಮ್ಮು ಕಾಶ್ಮೀರವನ್ನು ಹೇಗೆ ಇಟ್ಟುಕೊಂಡಿತ್ತು ಎಂದು ಇದರಲ್ಲಿ ತಿಳಿಯುತ್ತದೆ’ ಎಂದು ಟಾಂಗ್‌ ನೀಡಿದೆ.