ಅಮೆರಿಕದ ಕೊಲಂಬಿಯಾದಲ್ಲಿ ನಿಕಿತಾ ಗೋದಿಶಾಲಾ (27) ಎಂಬ ಮಹಿಳೆ ಶವ ಪತ್ತೆಯಾಗಿದೆ. ಈ ನಡುವೆ ಈಕೆಯ ಮಾಜಿ ಪ್ರಿಯರ ಅರ್ಜುನ್‌ ಶರ್ಮಾ, ಜ.2ರಂದು ಕಡೆಯ ಬಾರಿ ನಾನು ನಿಖಿತಾಳನ್ನು ಆಕೆಯ ಮೇರಿಲ್ಯಾಂಡ್‌ ಅಪಾರ್ಟ್‌ಮೆಂಟ್‌ನಲ್ಲಿ ನೋಡಿದ್ದೆ.

ಲಾಸ್‌ ವೇಗಸ್‌/ನ್ಯೂಯಾರ್ಕ್‌: ಅಮೆರಿಕದ ಕೊಲಂಬಿಯಾದಲ್ಲಿ ನಿಕಿತಾ ಗೋದಿಶಾಲಾ (27) ಎಂಬ ಮಹಿಳೆ ಶವ ಪತ್ತೆಯಾಗಿದೆ. ಈ ನಡುವೆ ಈಕೆಯ ಮಾಜಿ ಪ್ರಿಯರ ಅರ್ಜುನ್‌ ಶರ್ಮಾ, ಜ.2ರಂದು ಕಡೆಯ ಬಾರಿ ನಾನು ನಿಖಿತಾಳನ್ನು ಆಕೆಯ ಮೇರಿಲ್ಯಾಂಡ್‌ ಅಪಾರ್ಟ್‌ಮೆಂಟ್‌ನಲ್ಲಿ ನೋಡಿದ್ದೆ. ಬಳಿಕ ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಆಕೆಯ ಮನೆ ತಪಾಸಣೆ ನಡೆಸಿದಾಗ ಅಲ್ಲಿ ಆಕೆಯ ಶವ ಪತ್ತೆಯಾಗಿದೆ. ದೇಹದ ಮೇಲೆ ಇರಿತದ ಗುರುತುಗಳು ಕೂಡಾ ಪತ್ತೆಯಾಗಿದೆ. ಈ ನಡುವೆ ಆತ ಅದೇ ದಿನ ಭಾರತಕ್ಕೆ ಪರಾರಿಯಾಗಿರುವ ಕಾರಣ ಆತನೇ ಹತ್ಯೆ ಮಾಡಿರುವ ಶಂಕೆ ಇದೆ ಎಂದು ಪೊಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

 ಕರ್ನಾಟಕದ ಲಾರಿ ಪಲ್ಟಿ: 700 ಬಾಟಲ್‌ ಬಿಯರ್‌ ರಸ್ತೆಪಾಲು

ಕಲ್ಲಿಕೋಟೆ: ಕರ್ನಾಟಕದಿಂದ ಕೇರಳಕ್ಕೆ ಬಿಯರ್‌ ಸಾಗಿಸುತ್ತಿದ್ದ ಲಾರಿಯೊಂದು ಓವರ್‌ ಲೋಡ್‌ನಿಂದ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಅಪಘಾತದಲ್ಲಿ ಚಾಲಕ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ವಯನಾಡು ಜಿಲ್ಲೆಯ ಅಖಿಲ್ ಕೃಷ್ಣನ್ (30) ಎಂದು ಗುರುತಿಸಲಾಗಿದೆ. ಎರ್ನಾಕುಲಂ ಕಡೆಗೆ ಹೋಗುತ್ತಿದ್ದ ಲಾರಿಯನ್ನು ಚಾಲಕ ನಿರ್ಲಕ್ಷ್ಯದಿಂದ ಚಲಾಯಿಸುತ್ತಿದ್ದನು. ಈ ವೇಳೆ ಎದುರಿಗೆ ಬಂದ ತೆಲಂಗಾಣ ನೋಂದಣಿ ಸಂಖ್ಯೆ ಹೊಂದಿದ್ದ ಕಾರಿಗೆ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಪಲ್ಟಿಯಾಗಿದ್ದು, 700ಕ್ಕೂ ಹೆಚ್ಚು ಬಿಯರ್‌ ಬಾಟಲಿ ರಸ್ತೆಪಾಲಾಗಿದೆ. 

ಹಾಥ್ರಸ್‌ ಗ್ಯಾಂಗ್‌ ರೇಪ್‌: ಮಾನನಷ್ಟ ಕೇಸಲ್ಲಿ ರಾಹುಲ್‌ಗೆ ನೋಟಿಸ್‌

ಹಾಥ್ರಸ್‌: 2020ರ ಹಾಥ್ರಸ್‌ ದಲಿತ ಯುವತಿಯ ಗ್ಯಾಂಗ್‌ರೇಪ್‌, ಕೊಲೆ ಪ್ರಕರಣದಿಂದ ಖುಲಾಸೆ ವ್ಯಕ್ತಿಗಳ ಕುರಿತ ಹೇಳಿಕೆ ಸಂಬಂಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಸ್ಥಳೀಯ ನ್ಯಾಯಾಲಯ ನೋಟಿಸ್‌ ಜಾರಿ ಮಾಡಿದೆ. 2024ರಲ್ಲಿ ರಾಹುಲ್‌ ಗಾಂಧಿ, ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ ವೇಳೆ, ‘ಗ್ಯಾಂಗ್‌ರೇಪ್‌ ಸಂತ್ರಸ್ಥೆಯ ಕುಟುಂಬ ಮನೆಯಲ್ಲಿ ಭಯದಲ್ಲಿದ್ದರೆ, ಆರೋಪಿಗಳು ರಾರಾಜಿಸುತ್ತಿದ್ದಾರೆ’ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕೇಸಲ್ಲಿ ಖುಲಾಸೆ ಆದ ಮೂವರು ರಾಹುಲ್‌ ವಿರುದ್ಧ ಮಾನನಷ್ಟ ಕೇಸು ದಾಖಲಿಸಿದ್ದರು. ಅಲ್ಲದೆ ತಲಾ 50 ಲಕ್ಷ ರು. ಪರಿಹಾರಕ್ಕೆ ಕೋರಿದ್ದಾರೆ. ಈ ಸಂಬಂಧ ತಕರಾರುಗಳಿದ್ದರೆ ಸಲ್ಲಿಸುವಂತೆ ನ್ಯಾಯಾಲಯವು ನೋಟಿಸ್‌ ನೀಡಿದೆ.

ಥಾಯ್ಲೆಂಡ್‌ನಲ್ಲಿ ಸೆಕ್ಸ್‌ ಮಾಡಿ ಪರಾರಿ ಯತ್ನ: ಭಾರತೀಯಗೆ ಗೂಸ

ಬ್ಯಾಂಕಾಕ್‌: ಮೋಜುಮಸ್ತಿಗೆ ಖ್ಯಾತಿ ಹೊಂದಿರುವ ಥಾಯ್ಲೆಂಡ್‌ನಲ್ಲಿ ಸೆಕ್ಸ್‌ ಸೇವೆ ಪಡೆದು, ಹಣ ಕೊಡದೆ ಪರಾರಿಯಾಗಲು ಯತ್ನಿಸಿದ ಭಾರತೀಯ ವ್ಯಕ್ತಿಗೆ ಅಲ್ಲಿನ ತೃತೀಯ ಲಿಂಗಿಗಳು ಥಳಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಥಳಿತದ ವಿಡಿಯೋ ವೈರಲ್‌ ಆಗಿದೆ. ರಾಜ್‌ ಜಸುಜಾ (52), ಡಿ.27ರಂದು ಥಾಯ್ಲೆಂಡ್‌ಗೆ ಹೋಗಿ, ಅಲ್ಲಿನ ವೇಶ್ಯಾವಾಟಿಕೆ ಗ್ರಹಕ್ಕೆ ತೆರಳಿದ್ದರು. ಬಳಿಕ ಹಣ ಕೊಡದೆ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ 3-4 ಜನ ತೃತೀಯ ಲಿಂಗಿಗಳು ರಾಜ್‌ನನನ್ನು ತಡೆದು, ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಪೊಲೀಸರು ರಾಜ್‌ನನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿದ್ದಾರೆ. 

ನನಗೆ 6 ಮಕ್ಕಳು, ನಿಮ್ಮ ತಡೆದವರು ಯಾರು: ನವನೀತ್‌ಗೆ ಒವೈಸಿ

ನವದೆಹಲಿ: ಹಿಂದೂಗಳು 3-4 ಮಕ್ಕಳು ಹೊಂದಬೇಕು ಎಂಬ ಬಿಜೆಪಿ ಮಾಜಿ ಸಂಸದೆ ನವ್‌ನೀತಾ ರಾಣಾ ಹೇಳಿಕೆಗೆ ತಿರುಗೇಟು ನೀಡಿರುವ ಎಂಐಎಂ ಸಂಸದ ಅಸಾದುದ್ದೀನ್‌ ಒವೈಸಿ, ‘ನಾನು 6 ಮಕ್ಕಳನ್ನು ಹೊಂದಿರುವೆ. ನೀವೂ 4 ಮಕ್ಕಳು ಮಾಡಿಕೊಳ್ಳಿ. ನಿಮ್ಮನ್ನು ಯಾರು ತಡೆದರು? ಎಂದು ಪ್ರಶ್ನಿಸಿದ್ದಾರೆ. ಕಳೆದ ತಿಂಗಳು ನವನೀತಾ ಅವರು, ಮುಸ್ಲಿಮರು ಹಿಂದುಸ್ತಾನವನ್ನು ಪಾಕಿಸ್ತಾನವಾಗಿ ಪರಿವರ್ತಿಸುತ್ತಿದ್ದಾರೆ. ಹೀಗಾಗಿ ಹಿಂದೂಗಳು ಕನಿಷ್ಠ 3-4 ಮಕ್ಕಳನ್ನು ಹೆರಬೇಕು’ ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಒವೈಸಿ ‘ನನಗೆ 6 ಮಕ್ಕಳಿದ್ದಾರೆ. ನೀವು 4 ಮಕ್ಕಳನ್ನು ಹೊಂದುವುದರಿಂದ ನಿಮ್ಮನ್ನು ಯಾರು ತಡೆಯುತ್ತಿದ್ದಾರೆ. ನೀವೂ ಮಕ್ಕಳು ಮಾಡಿಕೊಳ್ಳಿ’ ಎಂದು ತಿರುಗೇಟು ನೀಡಿದ್ದಾರೆ.