ವೆನಿಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕದ ಆಕ್ರಮಣ ಖಂಡಿಸಿ, ಅಧ್ಯಕ್ಷ ಮಡುರೋ ಹಾಗೂ‌ ಅವರ ಪತ್ನಿಯ ಬಿಡುಗಡೆಗಾಗಿ ಆಗ್ರಹಿಸಿ ಎಸ್ಎಫ್ಐ, ಡಿವೈಎಫ್ಐ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಗಾಂಧಿ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು.

ಹಾವೇರಿ: ವೆನಿಜುವೆಲಾ ದೇಶದ ಮೇಲೆ ಸಾಮ್ರಾಜ್ಯಶಾಹಿ ಅಮೆರಿಕದ ಆಕ್ರಮಣ ಖಂಡಿಸಿ, ಅಧ್ಯಕ್ಷ ಮಡುರೋ ಹಾಗೂ‌ ಅವರ ಪತ್ನಿಯ ಬಿಡುಗಡೆಗಾಗಿ ಆಗ್ರಹಿಸಿ ಎಸ್ಎಫ್ಐ, ಡಿವೈಎಫ್ಐ ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಗರದ ಗಾಂಧಿ ಸರ್ಕಲ್‌ನಲ್ಲಿರುವ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಯಿತು.ಈ ಸಂದರ್ಭದಲ್ಲಿ ಡಿವೈಎಫ್ಐ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ಸಾರ್ವಭೌಮ ರಾಷ್ಟ್ರವಾದ ವೆನೆಜುವೆಲಾ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನವು ನಡೆಸಿರುವ ಘೋರ ಸೇನಾ ಆಕ್ರಮಣವನ್ನು ಡಿವೈಎಫ್ಐ ಪ್ರಬಲವಾಗಿ ಖಂಡಿಸುತ್ತದೆ. ವೆನೆಜುವೆಲಾದ ಕ್ಯಾರಕಾಸ್ ಮತ್ತು ಇತರ ಪ್ರದೇಶಗಳಲ್ಲಿ ನಾಗರಿಕ ಮತ್ತು ಮಿಲಿಟರಿ ಸ್ಥಳಗಳ ಮೇಲೆ ಅಮೆರಿಕ ನಡೆಸಿರುವ ಬಾಂಬ್ ದಾಳಿಯು ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ಚಾರ್ಟರ್ ಹಾಗೂ ಸಾರ್ವಭೌಮತ್ವ ಮತ್ತು ಹಸ್ತಕ್ಷೇಪ ಮಾಡದಿರುವ ಮೂಲಭೂತ ತತ್ವಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಭಾರತದ ಯುವಕರು ವೆನೆಜುವೆಲಾದ ಜನರು ಮತ್ತು ಸಾಮ್ರಾಜ್ಯಶಾಹಿಯನ್ನು ವಿರೋಧಿಸುವ ಎಲ್ಲ ರಾಷ್ಟ್ರಗಳೊಂದಿಗೆ ಒಗ್ಗಟ್ಟಿನಿಂದ ನಿಂತಿದ್ದಾರೆ. ಸಾಮ್ರಾಜ್ಯಶಾಹಿ ಯುದ್ಧಗಳ ವಿರುದ್ಧ ಒಂದಾಗಲು ಮತ್ತು ಶಾಂತಿ, ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯವನ್ನು ರಕ್ಷಿಸಲು ಪ್ರಪಂಚದಾದ್ಯಂತದ ಪ್ರಜಾಪ್ರಭುತ್ವ, ಪ್ರಗತಿಪರ ಮತ್ತು ಶಾಂತಿ-ಪ್ರೀತಿಯ ಶಕ್ತಿಗಳಿಗೆ ಎಸ್ಎಫ್ಐ-ಡಿವೈಎಫ್ಐ ಕರೆ ನೀಡುತ್ತವೆ ಎಂದರು.ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಸಾಮ್ರಾಜ್ಯಶಾಹಿ ಮಿಲಿಟರಿ ಹಸ್ತಕ್ಷೇಪದಿಂದ ಮುಕ್ತವಾಗಿ ಲ್ಯಾಟಿನ್ ಅಮೆರಿಕವನ್ನು ಶಾಂತಿಯ ವಲಯವೆಂದು ಘೋಷಿಸಬೇಕು. ಯುಎಸ್ ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು, ಕೆರಿಬಿಯನ್ ಪ್ರದೇಶದಿಂದ ಎಲ್ಲ ಯುಎಸ್ ಮಿಲಿಟರಿ ಉಪಸ್ಥಿತಿಯನ್ನು ಹಿಂತೆಗೆದುಕೊಳ್ಳಲು ಎಸ್ಎಫ್ಐ-ಡಿವೈಎಫ್ಐ ಆಗ್ರಹಿಸುತ್ತವೆ. ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಗೈಯ್ಯುತ್ತಿರುವ ಯುಎಸ್ ಸರ್ಕಾರದ ದುರ್ವರ್ತನೆಯನ್ನು ಬಲವಾಗಿ ವಿರೋಧಿಸುತ್ತವೆ ಎಂದರು.ಪ್ರತಿಭಟನೆಯಲ್ಲಿ ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ, ಬಹುಜನ ಚಳವಳಿ ಮುಖಂಡ ಎಂ.ಕೆ. ಮಕಬುಲ್, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷ ಸೆಟ್ಟಿ ವಿಭೂತಿ ನಾಯಕ್, ಅಂಗವಿಕಲ‌ ಸಂಘಟನೆ ಮುಖುಂಡರಾದ ಮಂಜುನಾಥ ಕಮ್ಮಾರ, ಬಸನಗೌಡ ಪಾಟೀಲ, ಎಸ್ಎಫ್ಐ ಡಿವೈಎಫ್ಐ ಮುಖಂಡರಾದ ಅರುಣ ನಾಗಾವತ್, ಚೈತ್ರಾ ಕೊರವರ, ಜೀವನಸಿಂಗ್ ರಜಪೂತ, ಧನುಷ್ ದೊಡಮನಿ, ಸೌಮ್ಯಾ ಕ್ಯಾತನ್ ಇತರರು ಇದ್ದರು.