ಬದಲಾಗುತ್ತಿರುವ ಆಧುನಿಕ ಯುದ್ಧದ ಸವಾಲುಗಳನ್ನು ಪರಿಣಾಮಕಾರಿ ಎದುರಿಸಲು, ಚೀನಾ, ಪಾಕಿಸ್ತಾನದ ಕುಟಿಲ ಯುದ್ಧನೀತಿಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆಗೆ ಇದೀಗ ‘ಭೈರವ’ ಪಡೆಯೊಂದನ್ನು ಸಿದ್ಧಪಡಿಸಿದೆ.

ನವದೆಹಲಿ: ಬದಲಾಗುತ್ತಿರುವ ಆಧುನಿಕ ಯುದ್ಧದ ಸವಾಲುಗಳನ್ನು ಪರಿಣಾಮಕಾರಿ ಎದುರಿಸಲು, ಚೀನಾ, ಪಾಕಿಸ್ತಾನದ ಕುಟಿಲ ಯುದ್ಧನೀತಿಗಳನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆಗೆ ಇದೀಗ ‘ಭೈರವ’ ಪಡೆಯೊಂದನ್ನು ಸಿದ್ಧಪಡಿಸಿದೆ. ಒಂದು ಲಕ್ಷ ಯೋಧರನ್ನೊಳಗೊಂಡು ರಚಿಸಲಾಗಿರುವ ಈ ಹೊಸ ವಿಶೇಷ ಪಡೆ ಶತ್ರುಗಳ ಮೇಲೆ ತ್ವರಿತ ದಾಳಿ ಹಾಗೂ ಕ್ಲಿಷ್ಟಕರ ಕಾರ್ಯಾಚರಣೆ ವೇಳೆ ಸೇನೆಗೆ ಬೆನ್ನುಲುಬಾಗಿ ನಿಲ್ಲಲಿದೆ.

ಪದಾತಿದಳದಿಂದ ಆಯ್ಕೆಮಾಡಲಾದ ಯೋಧರಿಗೆ ಐದು ತಿಂಗಳ ಕಠಿಣ ತರಬೇತಿ ಬಳಿಕ ಈ ವಿಶೇಷ ಪಡೆ ರಚಿಸಲಾಗಿದೆ. ಯುದ್ಧ, ಸೇನಾ ಕಾರ್ಯಾಚರಣೆಗಳ ಸಂದರ್ಭದಲ್ಲಿ ಡ್ರೋನ್‌ಗಳನ್ನು ಬಳಸಿ ಪರಿಣಾಮಕಾರಿ ದಾಳಿ ನಡೆಸಲು ಈ ಪಡೆಗೆ ವಿಶೇಷ ತರಬೇತಿ ನೀಡಲಾಗಿದೆ. ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ಈ ಪಡೆಗಳನ್ನು ನಿಯೋಜಿಸಲು ಉದ್ದೇಶಲಾಗಿದೆ.

ಏನಿದು ಭೈರವಪಡೆ?

ಇದೊಂದು ವಿಶೇಷ ಲೈಟ್‌ ಕಮಾಂಡೋ ಪಡೆಯಾಗಿದೆ. ಪದಾತಿದಳದಿಂದ ಆಯ್ಕೆ ಮಾಡಲಾದ ಈ ಪಡೆಯ ಯೋಧರಿಗೆ ಆಧುನಿಕ ಯುದ್ಧದ ಕಠಿಣ ತರಬೇತಿ ನೀಡಲಾಗಿದೆ. ಶತ್ರುಗಳ ಮೇಲೆ ದಿಢೀರ್‌ ಹಾಗೂ ಭಾರೀ ಪ್ರಮಾಣದ ದಾಳಿಗೆ ಈ ಪಡೆ ರಚಿಸಲಾಗಿದೆ. ಈವರೆಗೆ 15 ಭೈರವ್ ಬಟಾಲಿಯನ್‌ಗಳನ್ನು ರಚಿಸಿ, ಗಡಿಯಲ್ಲಿ ನಿಯೋಜಿಸಲಾಗಿದ್ದು, ಈ ಸಂಖ್ಯೆಯನ್ನು 25ಕ್ಕೇರಿಸುವ ಗುರಿ ಸೇನೆಗಿದೆ. ಮುಖ್ಯವಾಗಿ ಪ್ಯಾರಾ ಸ್ಪೆಷನ್‌ ಫೋರ್ಸ್‌ ಮತ್ತು ಸಾಮಾನ್ಯ ಇನ್‌ಫ್ಯಾಂಟ್ರಿ ಬಟಾಲಿಯನ್‌ಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಈ ಪಡೆ ರಚಿಸಲಾಗಿದೆ.

ರಾಜಸ್ಥಾನದವರನ್ನೇ ಈ ಪಡೆಗೆ ಸದ್ಯ ಆಯ್ಕೆ

ಮರುಭೂಮಿಯಲ್ಲಿ ಸದ್ಯ ನಿಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ರಾಜಸ್ಥಾನದವರನ್ನೇ ಈ ಪಡೆಗೆ ಸದ್ಯ ಆಯ್ಕೆ ಮಾಡಲಾಗಿದೆ. ಸದ್ಯದ ಯುದ್ಧಗಳು ಹೈಬ್ರಿಡ್‌ ಸ್ವರೂಪದ್ದಾಗಿದ್ದು, ಅದಕ್ಕೆ ತಕ್ಕಂತೆ ಈ ಪಡೆಗಳನ್ನು ಸಜ್ಜುಗೊಳಿಸಲಾಗಿದೆ.