ಸೇನೆಗೆ ಉಗ್ರರ ನೆಲೆ ತೋರಿಸಿದ್ದು ಇಸ್ರೋ! - 10 ಉಪಗ್ರಹಗಳ ನಿಗಾ

| N/A | Published : May 12 2025, 05:23 AM IST

ISRO
ಸೇನೆಗೆ ಉಗ್ರರ ನೆಲೆ ತೋರಿಸಿದ್ದು ಇಸ್ರೋ! - 10 ಉಪಗ್ರಹಗಳ ನಿಗಾ
Share this Article
  • FB
  • TW
  • Linkdin
  • Email

ಸಾರಾಂಶ

ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿಯಲ್ಲಿ ಭಾರತೀಯ ಸೇನೆಯ ಮಹತ್ವದ ಜಯದಲ್ಲಿ ಬೆಂಗಳೂರಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡಾ ಮಹತ್ವದ ಪಾತ್ರ ವಹಿಸಿದೆ

ನವದೆಹಲಿ: ಪಹಲ್ಗಾಂ ನರಮೇಧದ ಬಳಿಕ ಪಾಕಿಸ್ತಾನದ ಮೇಲೆ ವೈಮಾನಿಕ ದಾಳಿಯಲ್ಲಿ ಭಾರತೀಯ ಸೇನೆಯ ಮಹತ್ವದ ಜಯದಲ್ಲಿ ಬೆಂಗಳೂರಲ್ಲಿ ಕೇಂದ್ರ ಕಚೇರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೂಡಾ ಮಹತ್ವದ ಪಾತ್ರ ವಹಿಸಿದೆ ಎಂಬ ಅಚ್ಚರಿಯ ವಿಷಯ ಬೆಳಕಿಗೆ ಬಂದಿದೆ. ಸೇನೆಯ ಪ್ರಮುಖ ಘಟಕ, ಉಗ್ರರ ಲಾಂಚ್‌ಪ್ಯಾಡ್‌ಗಳ ಬಗ್ಗೆ ನಿಖರ ಚಿತ್ರದ ಮೂಲಕ ಮಾಹಿತಿ ನೀಡಿದ್ದೇ ದೇಶದ ಅತ್ಯುನ್ನತ ಬಾಹ್ಯಾಕಾಶ ಸಂಸ್ಥೆ ಇಸ್ರೋ.

ದಾಳಿಗೂ ಮುನ್ನ, ದಾಳಿಯ ವೇಳೆ ಮತ್ತು ದಾಳಿಯ ಬಳಿಕ ದಿನದ 24 ಗಂಟೆಗಳ ಕಾಲವೂ ಸತತವಾಗಿ ಪಾಕಿಸ್ತಾನದ ಮೇಲೆ ನಿಗಾ ಇಟ್ಟು, ಭಾರತೀಯ ಸೇನೆಗೆ ಅತ್ಯಮೂಲ್ಯ ಮಾಹಿತಿಯನ್ನು ನೀಡಿದೆ.

ಆಗಸದಿಂದ ಕಣ್ಣು:

ಪಾಕ್‌ ಮೇಲೆ ದಾಳಿಗೆ ನಿರ್ಧರಿಸುತ್ತಲೇ ಭಾರತೀಯ ಸೇನೆ ಇಸ್ರೋದ ನೆರವು ಕೋರಿತ್ತು. ಅದರಂತೆ ಪಾಕಿಸ್ತಾನದ ಸೇನಾ ನೆಲೆಗಳು, ಉಗ್ರರ ನೆಲೆಗಳು, ಉಗ್ರರ ಲಾಂಚ್‌ಪ್ಯಾಡ್‌ಗಳ ಅತ್ಯಂತ ಸ್ಪಷ್ಟ ಫೋಟೋಗಳನ್ನು ಇಸ್ರೋ ಸೆರೆಹಿಡಿದು ಸೇನೆಗೆ ನೀಡಿತ್ತು. ಇದು ಸೇನೆಯು, ಯಾವ ಸ್ಥಳಗಳ ಮೇಲೆ ದಾಳಿ ಮಾಡಬೇಕೆಂದು ನಿರ್ಧರಿಸಿ ನಿಖರವಾಗಿ ಆ ಸ್ಥಳಗಳ ಮೇಲೆ ದಾಳಿ ನಡೆಸಲು ಅನುವು ಮಾಡಿಕೊಟ್ಟಿತು.

ಇಸ್ರೋದ ಉಪಗ್ರಹಗಳು 0.6 ಮೀ ನಿಂದ 0.35 ಮೀ. ರವರೆಗಿನ ಸ್ಪಷ್ಟತೆಯೊಂದಿಗೆ ಸೇನಾ ನೆಲೆ ಮತ್ತು ಭಯೋತ್ಪಾದಕ ಅಡಗುತಾಣದ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆ ಹಿಡಿದಿತ್ತು. ಅಲ್ಲದೆ ಮಿಲಿಟರಿ ನೆಲೆಗಳು, ಶಸ್ತ್ರಾಸ್ತ್ರ ಡಿಪೋಗಳು, ರಾಡಾರ್ ಕೇಂದ್ರಗಳು ಮತ್ತು ಪಾಕಿಸ್ತಾನಿ ಪಡೆಗಳ ಯುದ್ಧತಂತ್ರದ ಚಲನವಲನಗಳ ಮೇಲೆ ಕಣ್ಗಾವಲಿಟ್ಟಿತ್ತು. ಈ ಉಪಗ್ರಹಗಳು ಶತ್ರುಗಳ ಚಲನವಲನಗಳನ್ನು ಪತ್ತೆಹಚ್ಚುವ ಮೂಲಕ ಸೇನೆಗೆ ನಿಖರವಾದ ಗುಪ್ತಚರ ಮಾಹಿತಿಯನ್ನು ಒದಗಿಸಿ ಮಿಲಿಟರಿ ಕಾರ್ಯಾಚರಣೆಗಳಿಗೆ ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು .

ಇಸ್ರೋ ಸಂಗ್ರಹಿಸಿದ ಈ ಮಾಹಿತಿಗಳು ಭಾರತದ ಕಾರ್ಯಾಚರಣೆಯಲ್ಲಿ ಶತ್ರುಗಳನ್ನು ಎದುರಿಸಲು, ರಾಡಾರ್‌ ಹಿಮ್ಮೆಟ್ಟಿಸಲು ಮತ್ತು ಪಾಕಿಸ್ತಾನ ಉಡಾಯಿಸಿದ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ತಟಸ್ಥಗೊಳಿಸಲು ನೆರವಾದವು. ಮಾತ್ರವಲ್ಲದೇ ಇಸ್ರೋ ಉಪಗ್ರಹಗಳು ನೈಜ ಸಮಯದ ಚಿತ್ರಗಳು ಮತ್ತು ವಿಡಿಯೋ ತುಣುಕನ್ನು ಒದಗಿಸುವ ಮೂಲಕ ಗಡಿ ಪ್ರದೇಶದಲ್ಲಿ ಪಾಕ್‌ನ ಸಂಭಾವ್ಯ ದಾಳಿ ತಡೆಯಲು ಮತ್ತು ಭದ್ರತಾ ಸಂಸ್ಥೆಗಳು ತ್ವರಿತ ಕ್ರಮ ಕೈಗೊಳ್ಳಲು ಅನುಕೂಲ ಮಾಡಿಕೊಟ್ಟಿತ್ತು ಎಂದು ಮೂಲಗಳು ತಿಳಿಸಿವೆ.