ಭಾರತಕ್ಕೆ ಮತ್ತಷ್ಟು ಬ್ರಹ್ಮೋಸ್‌ ಬಲ

| N/A | Published : May 12 2025, 01:23 AM IST / Updated: May 12 2025, 04:27 AM IST

ಸಾರಾಂಶ

ಉತ್ತರಪ್ರದೇಶದ ಲಖನೌದಲ್ಲಿ ನಿರ್ಮಿಸಲಾಗಿರುವ ನೂತನ ಬ್ರಹ್ಮೋಸ್‌ ಕ್ಷಿಪಣಿ ಉತ್ಪಾದನೆ ಮತ್ತು ಜೋಡಣಾ ಘಟಕವನ್ನು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಭಾನುವಾರ ಉದ್ಘಾಟಿಸಿದರು. 

 ಲಖನೌ: ಉತ್ತರಪ್ರದೇಶದ ಲಖನೌದಲ್ಲಿ ನಿರ್ಮಿಸಲಾಗಿರುವ ನೂತನ ಬ್ರಹ್ಮೋಸ್‌ ಕ್ಷಿಪಣಿ ಉತ್ಪಾದನೆ ಮತ್ತು ಜೋಡಣಾ ಘಟಕವನ್ನು ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಭಾನುವಾರ ಉದ್ಘಾಟಿಸಿದರು. ಲಖನೌನ ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್‌ನಲ್ಲಿರುವ ಈ ಘಟಕವು ದೇಶರಕ್ಷಣೆಗೆ ಮತ್ತು ರಾಜ್ಯದ ಕೈಗಾರಿಕ ಬೆಳವಣಿಗೆಗೆ ಮತ್ತಷ್ಟು ಬಲ ತುಂಬಲಿದ.

300 ಕೋಟಿ ರು. ವೆಚ್ಚದ ಬ್ರಹ್ಮೋಸ್ ಏರೋಸ್ಪೇಸ್ ಘಟಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿರುವ ಸಿಂಗ್‌, ‘ಇಲ್ಲಿ ಕ್ಷಿಪಣಿಯನ್ನು ಉತ್ಪಾದಿಸುವುದಷ್ಟೇ ಅಲ್ಲ, ಪರೀಕ್ಷೆ, ಜೋಡಣೆಯನ್ನೂ ಮಾಡಲಾಗುತ್ತದೆ. ಆತ್ಮನಿರ್ಭರ ಭಾರತದ ಕಡೆಗಿನ ಪ್ರಮುಖ ಹೆಜ್ಜೆಯಾಗಿರುವ ಇದು, ಪ್ರಾದೇಶಿಕ ಕೈಗಾರಿಕಾ ಬೆಳವಣಿಗೆ ಉತ್ತೇಜನ ನೀಡುತ್ತದೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಉತ್ತರಪ್ರದೇಶ ಸರ್ಕಾರ, ‘ಈ ಘಟಕದಲ್ಲಿ, 290-400 ಕಿ.ಮೀ ರೇಂಜ್‌ನ 2.8 ಮ್ಯಾಕ್‌ ವೇಗದ ಸೂಪರ್‌ಸಾನಿಕ ಕ್ರೂಸ್‌ ಕ್ಷಿಪಣಿ ಉತ್ಪಾದಿಸಲಾಗುವುದು. ಘಟಕವು 80 ಹೆಕ್ಟೇರ್‌ ವಿಸ್ತೀರ್ಣದಲ್ಲಿ, 3.5 ವರ್ಷದಲ್ಲಿ ನಿರ್ಮಾಣವಾಗಿದೆ’ ಎಂದು ತಿಳಿಸಿದೆ. ಈ ಘಟಕವು ವಾರ್ಷಿಕ 100- 150 ಕ್ಷಿಪಣಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ

ಏನಿದು ಬ್ರಹ್ಮೋಸ್‌?:

ಬ್ರಹ್ಮೋಸ್‌ ಕ್ಷಿಪಣಿಯನ್ನು ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸಿವೆ. ಭಾರತದ ಬ್ರಹ್ಮಪುತ್ರ ಮತ್ತು ರಷ್ಯಾದ ಮಾಸ್ಕೋವಾ ನದಿಗಳ ಹೆಸರನ್ನು ಸೇರಿಸಿ ಈ ಕ್ಷಿಪಣಿಗೆ ‘ಬ್ರಹ್ಮೋಸ್‌’ ಎಂದು ಹೆಸರಿಡಲಾಗಿದೆ.

ಬ್ರಹ್ಮೋಸ್‌ ಕ್ಷಿಪಣಿ ಬಲವನ್ನುಪಾಕಿಗಳ ಬಳಿ ಕೇಳಿ: ಯೋಗಿ

ಲಖನೌ: ‘ಬ್ರಹ್ಮೋಸ್‌ ಬಲದ ಬಗ್ಗೆ ತಿಳಿದುಕೊಳ್ಳಬೇಕಿದ್ದರೆ, ಪಾಕಿಸ್ತಾನಿಗಳ ಹತ್ತಿರ ಕೇಳಿ’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌, ಸ್ವದೇಶಿ ಕ್ಷಿಪಣಿಯ ಸಾಮರ್ಥ್ಯದ ಗುಣಗಾನ ಮಾಡುತ್ತಾ ಪಾಕಿಸ್ತಾನದ ಕಾಲೆಳೆದಿದ್ದಾರೆ.ಬ್ರಹ್ಮೋಸ್‌ ಉತ್ಪಾದನಾ ಘಟಕದ ಉದ್ಘಾಟನೆಯಲ್ಲಿ ಮಾತನಾಡಿದ ಯೋಗಿ, ‘ಆಪರೇಷನ್ ಸಿಂದೂರದಲ್ಲಿ ಬ್ರಹ್ಮೋಸ್ ಕ್ಷಿಪಣಿಯ ಶೌರ್ಯದ ಒಂದು ಝಲಕ್‌ ನೋಡಿದೆವು. 

ಇದು ಸಾಲದಿದ್ದರೆ, ಅದರಿಂದ ಪೆಟ್ಟು ತಿಂದಿರುವ ಪಾಕಿಸ್ತಾನದ ಬಳಿ ಹೋಗಿ ಅದರ ಶಕ್ತಿಯ ಬಗ್ಗೆ ಕೇಳಿನೋಡಿ’ ಎಂದರು.ಇದೇ ವೇಳೆ ಭಯೋತ್ಪಾದನೆಯ ವಿರುದ್ಧ ಹರಿಹಾಯುತ್ತಾ, ‘ಉಗ್ರವಾದವು ನೆಟ್ಟಗೆ ಮಾಡಲಾಗದ ನಾಯಿ ಬಾಲ. ಅದಕ್ಕೆ ಪ್ರೀತಿಯ ಭಾಷೆ ಅರ್ಥ ಆಗದು. ಆದ್ದರಿಂದ ಅದೇ ಭಾಷೆಯಲ್ಲಿ ಉತ್ತರಿಸಬೇಕು. ಇದನ್ನು ಸಾಧಿಸಲು ಇಡೀ ದೇಶ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಡಿಯಲ್ಲಿ ಒಂದಾಗಬೇಕು. ಈಗಾಗಲೇ ಭಾರತ ಆಪರೇಷನ್‌ ಸಿಂದೂರದಿಂದ ಜಗತ್ತಿಗೇ ಈ ಸಂದೇಶ ಸಾರಿದೆ’ ಎಂದರು.

ಭಾರತ-ಪಾಕ್‌ ಉದ್ವಿಗ್ನ ಸ್ಥಿತಿ ಚರ್ಚೆಗೆ ಸರ್ವಪಕ್ಷ ಸಭೆ: ಕಾಂಗ್ರೆಸ್‌ ಒತ್ತಾಯ

ನವದೆಹಲಿ: ಜಮ್ಮು-ಕಾಶ್ಮೀರದ ಪಹಲ್ಗಾಮ್ ದಾಳಿ ನಂತರ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಏರ್ಪಟ್ಟಿರುವ ಉದ್ವಿಗ್ನ ಸ್ಥಿತಿಯ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಮತ್ತು ಆಪರೇಷನ್‌ ಸಿಂದೂರ, ಭಾರತ, ಪಾಕ್‌ ನಡುವಿನ ಕದನ ವಿರಾಮ ಕುರಿತು ವಿಸ್ತೃತ ಚರ್ಚೆಗೆ ಸಂಸತ್ತಿನ ವಿಶೇಷ ಅಧಿವೇಶನ ಕರೆಯುವಂತೆ ಕಾಂಗ್ರೆಸ್‌ ಒತ್ತಾಯಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ಭಾರತ, ಪಾಕಿಸ್ತಾನ ನಡುವಿನ ಸಂಧಾನಕ್ಕೆ ಮೂರನೇ ವ್ಯಕ್ತಿಗೆ ಕೇಂದ್ರ ಸರ್ಕಾರ ಆಮಂತ್ರಿಸಿದೆಯೇ. ಈ ಬಗ್ಗೆ ರಾಜತಾಂತ್ರಿಕ ಮಾರ್ಗಗಳು ಮುಕ್ತವಾಗಿಯೇ? ಮುಂತಾದ ಅನೇಕ ಪ್ರಶ್ನೆಗಳನ್ನು ಕೇಳಿದ್ದಾರೆ. ಭಾರತ, ಪಾಕ್‌ ನಡುವೆ ಕದನ ವಿರಾಮ ಘೋಷಣೆ ಬೆನ್ನಲ್ಲೆ ಜೈರಾಮ್‌ ಹೀಗೆ ಹೇಳಿದ್ದಾರೆ.