ಸಾರಾಂಶ
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ ಬೆನ್ನಲ್ಲೇ ಎರಡು ದೇಶಗಳ ನಡುವಿನ ಕಾಶ್ಮೀರ ವಿವಾದ ಇತ್ಯರ್ಥಗೊಳಿಸುವ ಪರವಾಗಿ ಕೆಲಸ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಅಮೆರಿಕ ಮಧ್ಯಸ್ಥಿಕೆ ವಹಿಸಿದ ಬೆನ್ನಲ್ಲೇ ಎರಡು ದೇಶಗಳ ನಡುವಿನ ಕಾಶ್ಮೀರ ವಿವಾದ ಇತ್ಯರ್ಥಗೊಳಿಸುವ ಪರವಾಗಿ ಕೆಲಸ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅದರ ಬೆನ್ನಲ್ಲೇ ನಮ್ಮ ಸಮಸ್ಯೆ ಪರಿಹಾರಕ್ಕೆ ಟ್ರಂಪ್ ನಿರ್ಧಾರವನ್ನು ಸ್ವಾಗತಿಸುತ್ತೇವೆ ಎಂದು ಪಾಕಿಸ್ತಾನ ಹೇಳಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಘೋಷಿಸಿ ಒಂದು ದಿನದ ಬಳಿಕ ಎರಡು ದೇಶಗಳ ನಡುವಿನ ಕಾಶ್ಮೀರ ವಿವಾದದ ಬಗ್ಗೆ ಟ್ರೂತ್‌ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ ‘ ಸಾವಿರ ವರ್ಷಗಳಿಂದ ನಡೆಯುತ್ತಿರುವ ಕಾಶ್ಮೀರ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಎರಡೂ ದೇಶಗಳೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದಿದ್ದಾರೆ.
ಈ ಬೆನ್ನಲ್ಲೇ ಪಾಕಿಸ್ತಾನ ಟ್ರಂಪ್ ನಿರ್ಧಾರ ಸ್ವಾಗತಿಸಿದ್ದು, ‘ ದಕ್ಷಿಣ ಏಷ್ಯಾ ಮತ್ತು ಅದರಾಚಾಗೆ ಶಾಂತಿ ಮತ್ತು ಭದ್ರತೆಗೆ ಗಂಭೀರ ಪರಿಣಾಮಗಳನ್ನು ಬೀರುವ ದೀರ್ಘಕಾಲದ ಸಮಸ್ಯೆಯಾದ ಜಮ್ಮು ಕಾಶ್ಮೀರ ವಿವಾದ ಪರಿಹರಿಸುವ ಗುರಿಯನ್ನು ಹೊಂದಿರುವ ಪ್ರಯತ್ನಗಳನ್ನು ಬೆಂಬಲಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ವ್ಯಕ್ತಪಡಿಸಿದ ಇಚ್ಛೆಯನ್ನು ನಾವು ಪ್ರಶಂಸಿಸುತ್ತೇವೆ’ ಎಂದಿದೆ.
ಕದನ ವಿರಾಮಕ್ಕೆ ಶ್ಲಾಘನೆ :
ಇನ್ನು ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮವನ್ನು ಮತ್ತೊಮ್ಮೆ ಶ್ಲಾಘಿಸಿದ್ದಾರೆ. ಟ್ರೂತ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು , ‘ ಹಲವರ ಸಾವು ಮತ್ತು ವಿನಾಶಕ್ಕೆ ಕಾರಣವಾಗಬಹುದಾದ ಪ್ರಸ್ತುತ ಆಕ್ರಮಣ ನಿಲ್ಲಿಸುವ ಸಮಯ ಬಂದಿದೆ ಎಂದು ಸಂಪೂರ್ಣವಾಗಿ ಅರ್ಥೈಸಿಕೊಂಡ ಭಾರತ ಮತ್ತು ಪಾಕಿಸ್ತಾನದ ಬಲವಾದ ಮತ್ತು ಅಚಲವಾದ ಶಕ್ತಿಶಾಲಿ ನಾಯಕತ್ವದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ.ಇದರಿಂದ ಲಕ್ಷಾಂತರ ಮುಗ್ಧ ಜನರು ಸಾಯಬಹುದಿತ್ತು. ಆದರೆ ನೀವು ಐತಿಹಾಸಿಕ ಮತ್ತು ವಿರೋಚಿತ ನಿರ್ಧಾರ ತೆಗೆದುಕೊಳ್ಳಲು ಅಮೆರಿಕವು ನಿಮಗೆ ಸಹಾಯ ಮಾಡಲು ಸಾಧ್ಯವಾಯಿತು ಎಂದು ನನಗೆ ಹೆಮ್ಮೆ ಇದೆ’ ಎಂದಿದ್ದಾರೆ.
ಭಾರತ- ಪಾಕ್ ಜತೆ ವ್ಯಾಪಾರ ಹೆಚ್ಚಳ: ಟ್ರಂಪ್ ಭರವಸೆ
ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮ ಮಧ್ಯಸ್ಥಿಕೆ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎರಡೂ ದೇಶಗಳಿಗೆ ಹೊಸ ಭರವಸೆ ನೀಡಿದ್ದು, ಉಭಯ ದೇಶಗಳ ನಡುವೆ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸುವುದಾಗಿ ಹೇಳಿದ್ದಾರೆ. ಎರಡೂ ದೇಶಗಳ ನಡುವಿನ ಕದನ ವಿರಾಮ ಮತ್ತು ಕಾಶ್ಮೀರ ಸಮಸ್ಯೆ ಇತ್ಯರ್ಥದ ಬಗ್ಗೆ ಸಾಮಾಜಿಕ ಜಾಲತಾಣ ಖಾತೆ ಟ್ರೂತ್‌ನಲ್ಲಿ ಬರೆದುಕೊಂಡಿರುವ ಟ್ರಂಪ್ ಅದರಲ್ಲಿ ವ್ಯಾಪಾರ ಹೆಚ್ಚಳದ ಬಗ್ಗೆ ಪ್ರಸ್ತಾಪಿಸಿದ್ದು ‘ಚರ್ಚೆ ಆಗಿಲ್ಲದಿದ್ದರೂ, ಈ ಎರಡೂ ಮಹಾನ್ ರಾಷ್ಟ್ರಗಳೊಂದಿಗೆ ವ್ಯಾಪಾರವನ್ನು ಗಣನೀಯ ಹೆಚ್ಚಿಸಲಿದ್ದೇನೆ ’ ಎಂದಿದ್ದಾರೆ.