ಸಾರಾಂಶ
ಅಡಗಿರುವ ಇನ್ನಷ್ಟು ಉಗ್ರರನ್ನು ಹೊಡೆಯಬೇಕು ಎಂದು ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ತಂದೆ ಚನ್ನವೀರಪ್ಪ ಹೇಳಿದರು.
ಬೆಂಗಳೂರು : ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ಮೂಲಕ ಭಾರತ ಸರ್ಕಾರ ಉತ್ತಮ ಕ್ರಮ ಕೈಗೊಂಡಿದೆ. ಇದೇ ರೀತಿ ಅಡಗಿರುವ ಇನ್ನಷ್ಟು ಉಗ್ರರನ್ನು ಹೊಡೆಯಬೇಕು ಎಂದು ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಬೆಂಗಳೂರಿನ ಮತ್ತಿಕೆರೆಯ ಭರತ್ ಭೂಷಣ್ ಅವರ ತಂದೆ ಚನ್ನವೀರಪ್ಪ ಹೇಳಿದರು.
ಬುಧವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಳ್ಳೆಯ ಕ್ರಮ ತೆಗೆದುಕೊಂಡಿದೆ. ಉಗ್ರರನ್ನು ಬೇಟೆಯಾಡುವ ಕಾರ್ಯಾಚರಣೆಗೆ ಇಟ್ಟ ಆಪರೇಷನ್ ಸಿಂದೂರ ಎನ್ನುವ ಹೆಸರು ಕೂಡ ತುಂಬಾ ಸೂಕ್ತವಾಗಿದೆ. ಅಡಗಿದ್ದ ಹಲವು ಭಯೋತ್ಪಾದಕರನ್ನು ಹೊಡೆದಿದ್ದಾರೆ. ಇನ್ನೂ ಉಳಿದುಕೊಂಡಿರುವವರನ್ನೂ ಹೊಡೆಯಬೇಕು. ಈ ಕೆಲಸ ಮುಂಚೆಯೇ ಆಗಿದ್ದರೆ 26 ಮಂದಿ ಜೀವ ಉಳಿಯುತ್ತಿತ್ತು ಎಂದರು.
ಭರತ್ ಭೂಷಣ್ ಅವರ ಸಹೋದರ ಪ್ರೀತಂ ಮಾತನಾಡಿ, ‘ನನ್ನ ತಮ್ಮ ಭರತ್ ಭೂಷಣ್ ಅಂತೂ ವಾಪಸ್ ಬರುವುದಿಲ್ಲ. ಮುಂದಿನ ಹಂತಗಳಲ್ಲಾದರೂ ಭಾರತ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಭರವಸೆ ಇದೆ. ಭರತ್‌ನ ಮೂರುವರೆ ವರ್ಷದ ಮಗ ಹವೀಶ್‌ಗೆ ಇದರ ಬಗ್ಗೆ ಪರಿವೆಯೇ ಇಲ್ಲ. ಅಪ್ಪ ಯಾವಾಗ ಬರುತ್ತಾರೆ ಎಂದು ಪ್ರಶ್ನಿಸುತ್ತಾನೆ’ ಎಂದು ಭಾವುಕರಾದರು.