ಕರ್ನಾಟಕಕ್ಕೆ ಮತ್ತೆರಡು ರತ್ನ- ವಿಷ್ಣು, ಸರೋಜಾದೇವಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುಚ್ಚ ಪುರಸ್ಕಾರ- ಕುವೆಂಪುಗೆ ಮರಣೋತ್ತರ ಭಾರತ ರತ್ನಕ್ಕಾಗಿ ಕೇಂದ್ರಕ್ಕೆ ಶಿಫಾರಸು: ಸಂಪುಟ

| Published : Sep 12 2025, 12:06 AM IST

ಕರ್ನಾಟಕಕ್ಕೆ ಮತ್ತೆರಡು ರತ್ನ- ವಿಷ್ಣು, ಸರೋಜಾದೇವಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುಚ್ಚ ಪುರಸ್ಕಾರ- ಕುವೆಂಪುಗೆ ಮರಣೋತ್ತರ ಭಾರತ ರತ್ನಕ್ಕಾಗಿ ಕೇಂದ್ರಕ್ಕೆ ಶಿಫಾರಸು: ಸಂಪುಟ
Share this Article
  • FB
  • TW
  • Linkdin
  • Email

ಸಾರಾಂಶ

‘ಸಾಹಸ ಸಿಂಹ’ ಡಾ.ವಿಷ್ಣುವರ್ಧನ್‌ ಹಾಗೂ ಪಂಚಭಾಷಾ ತಾರೆ ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಕರ್ನಾಟಕ ರತ್ನ’ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ.

75ನೇ ಹುಟ್ಟುಹಬ್ಬಕ್ಕೆ

ಭರ್ಜರಿ ಉಡುಗೊರೆ

- 220 ಸಿನಿಮಾಗಳಲ್ಲಿ ನಟಿಸಿರುವ ಡಾ। ವಿಷ್ಣುವರ್ಧನ್‌ 75ನೇ ಹುಟ್ಟುಹಬ್ಬ ಸೆ.18ಕ್ಕೆ. ಅದಕ್ಕೆ ಒಂದು ವಾರ ಮೊದಲು ಭರ್ಜರಿ ಉಡುಗೊರೆ- 14 ಸಿನಿಮಾಗಳಲ್ಲಿ ದ್ವಿಪಾತ್ರಗಳಲ್ಲಿ ಅಭಿನಯಿಸಿದ ಏಕೈಕ ಚಿತ್ರನಟ ವಿಷ್ಣು. 2009ರ ಡಿ.30ರಂದು ಮೈಸೂರಿನಲ್ಲಿ ನಿಧನರಾಗಿದ್ದರು

- ಅವರಿಗೆ ಮರಣೋತ್ತರ ಕರ್ನಾಟಕ ರತ್ನ ನೀಡುವಂತೆ ಕುಟುಂಬ ವರ್ಗ ಹಾಗೂ ಅಭಿಮಾನಿಗಳಿಂದ ಸಾಕಷ್ಟು ಒತ್ತಾಯ ಕೇಳಿಬಂದಿತ್ತು

- ಕೆಲ ದಿನಗಳ ಹಿಂದಷ್ಟೇ ಪತ್ನಿ ಭಾರತಿ, ಅಳಿಯ ಅನಿರುದ್ಧ ಮತ್ತು ಕೆಲ ಚಿತ್ರ ನಟಿಯರು ಸಿಎಂ, ಡಿಸಿಎಂರನ್ನು ಭೇಟಿ ಮಾಡಿ ಮನವಿ ಮಾಡಿದ್ದರು

--

ದಕ್ಷಿಣದ ಮೊದಲ ಲೇಡಿ

ಸೂಪರ್‌ಸ್ಟಾರ್‌ಗೆ ಗೌರವ

- ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಎಂದೇ ಜನಪ್ರಿಯರಾಗಿದ್ದ ಬಿ. ಸರೋಜಾ ದೇವಿ- 17ನೇ ವಯಸ್ಸಿಗೇ ಬಣ್ಣ ಹಚ್ಚಿ, ದಕ್ಷಿಣ ಭಾರತದ ನಾಲ್ಕೂ ಸೂಪರ್‌ಸ್ಟಾರ್‌ಗಳ ಸಿನಿಮಾದಲ್ಲಿ ನಟಿಸಿದ್ದರು- 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಪುನೀತ್‌ ನಟನೆಯ ‘ನಟಸಾರ್ವಭೌಮ’ ಕೊನೆಯ ಚಿತ್ರ- 2025ರ ಜು.14ರಂದು ನಿಧನರಾದರು. ಅವರ ಹೆಸರನ್ನು ಯಾವುದಾದರೂ ರಸ್ತೆಗೆ ಇಡುವಂತೆ ಬೇಡಿಕೆ ಬಂದಿತ್ತು

--

ವಿಷ್ಣು ಸ್ಮಾರಕಕ್ಕೆ ಜಾಗಪಡೆವ ಹಾದಿ ಸಲೀಸುಡಾ। ವಿಷ್ಣು ಅವರ ಅಂತ್ಯಕ್ರಿಯೆ ನಡೆದ ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋ ಆವರಣಲ್ಲಿ ಸ್ಮಾರಕ ನಿರ್ಮಾಣ ಮಾಡಲು 10 ಗುಂಟೆ ಜಾಗ ನೀಡುವಂತೆ ಅವರ ಪತ್ನಿ ಭಾರತಿ ಅವರು ಇತ್ತೀಚೆಗೆ ಸಿಎಂಗೆ ಮನವಿ ಮಾಡಿದ್ದರು. ಕರ್ನಾಟಕ ರತ್ನ ಘೋಷಿಸಿರುವುದರಿಂದ ಜಾಗ ಮಂಜೂರು ಸುಲಭವಾಗಲಿದೆ. ಪ್ರಶಸ್ತಿ ಪುರಸ್ಕೃತರಿಗೆ ಜಾಗ ನೀಡಲು ನಿಯಮಾವಳಿಗಳಲ್ಲೇ ಅವಕಾಶವಿದೆ.

--

ಕರ್ನಾಟಕರತ್ನ 11ಕ್ಕೇರಿಕೆ

1992ರಲ್ಲಿ ‘ಕರ್ನಾಟಕ ರತ್ನ’ ಪುರಸ್ಕಾರ ಪ್ರಾರಂಭಿಸಲಾಯಿತು. ಆ ವರ್ಷ ರಾಷ್ಟ್ರಕವಿ ಕವಿ ಕುವೆಂಪು, ವರ ನಟ ಡಾ। ರಾಜಕುಮಾರ್‌ ಅವರಿಗೆ ಪ್ರದಾನ ಮಾಡಲಾಯಿತು. ಈವರೆಗೆ 9 ಮಂದಿ ಈ ಪುರಸ್ಕಾರಕ್ಕೆ ಭಾಜನರಾಗಿದ್ದರು. 10ನೆಯವರಾಗಿ ವಿಷ್ಣು, 11ನೆಯವರಾಗಿ ಸರೋಜಾ ದೇವಿ ಅವರಿಗೆ ಆ ಪ್ರಶಸ್ತಿ ಈಗ ಲಭಿಸಿದೆ.

--

ಕನ್ನಡಪ್ರಭ ವಾರ್ತೆ ಬೆಂಗಳೂರು

‘ಸಾಹಸ ಸಿಂಹ’ ಡಾ.ವಿಷ್ಣುವರ್ಧನ್‌ ಹಾಗೂ ಪಂಚಭಾಷಾ ತಾರೆ ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ರಾಜ್ಯದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಕರ್ನಾಟಕ ರತ್ನ’ ನೀಡಲು ಗುರುವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನ ಮಾಡಿದೆ. ಇದೇ ವೇಳೆ ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರ ‘ಭಾರತ ರತ್ನ’ ಪ್ರಕಟಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲೂ ಸಂಪುಟ ಒಪ್ಪಿಗೆ ನೀಡಿದೆ.

ರಾಜ್ಯಾದ್ಯಂತ ಡಾ.ವಿಷ್ಣುವರ್ಧನ್‌ ಅಭಿಮಾನಿಗಳಿಂದ ಕರ್ನಾಟಕ ಪ್ರಶಸ್ತಿ ನೀಡುವಂತೆ ಆಗ್ರಹ ಕೇಳಿ ಬಂದಿತ್ತು. ಡಾ.ವಿಷ್ಣುವರ್ಧನ್‌ ಅಳಿಯ ಹಾಗೂ ನಿರ್ದೇಶಕ ಅನಿರುದ್ಧ ಅವರು ಜು.18 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ 225ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಡಾ.ವಿಷ್ಣುವರ್ಧನ್‍ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು.

ಜತೆಗೆ ಸೆಪ್ಟೆಂಬರ್‌ ಮೊದಲ ವಾರದಲ್ಲಿ ವಿಷ್ಣುವರ್ಧನ್ ಪತ್ನಿ ಭಾರತಿ ಹಾಗೂ ಅಳಿಯ ಅನಿರುದ್ಧ ಅವರು ಮುಖ್ಯಮಂತ್ರಿಗಳನ್ನು ಖುದ್ದಾಗಿ ಭೇಟಿ ಮಾಡಿ ಮರಣೋತ್ತರ ಕರ್ನಾಟಕ ರತ್ನ ಘೋಷಿಸುವಂತೆ ಹಾಗೂ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಾಣಕ್ಕೆ ಕನಿಷ್ಠ 10 ಗುಂಟೆ ಜಾಗ ನೀಡುವಂತೆ ಮನವಿ ಮಾಡಿದ್ದರು.

ಇದೇ ವೇಳೆ ಸ್ಯಾಂಡಲ್‌ವುಡ್‌ ಹಿರಿಯ ನಟಿಯರಾದ ಜಯಮಾಲಾ, ಶೃತಿ ಹಾಗೂ ಮಾಳವಿಕಾ ಅವಿನಾಶ್ ಅವರು ಕೂಡ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಷ್ಣುವರ್ಧನ್‌ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಅವರ ಸ್ಮಾರಕಕ್ಕಾಗಿ ಮನವಿ ಸಲ್ಲಿಸಿದರು. ಜತೆಗೆ ನಟಿ ಬಿ. ಸರೋಜಾದೇವಿ ಅವರ ಹೆಸರನ್ನು ಅವರ ನಿವಾಸವಿರುವ ಮಲ್ಲೇಶ್ವರ ರಸ್ತೆಗೆ ನಾಮಕರಣ ಮಾಡುವಂತೆ ಮನವಿ ಪತ್ರ ಸಲ್ಲಿಸಿದ್ದರು.

ಅಭಿಮಾನಿಗಳಿಗೆ ಸಂತಸದ ಸುದ್ದಿ:

ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರ ಆಗ್ರಹಕ್ಕೆ ಮಣಿದಿರುವ ರಾಜ್ಯ ಸರ್ಕಾರ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಿದೆ. ಸೆ.18ಕ್ಕೆ ವಿಷ್ಣುವರ್ಧನ್‌ ಅವರ 75ನೇ ವರ್ಷದ ಜಯಂತ್ಯುತ್ಸವ ಆಚರಣೆಯ ಖುಷಿಯಲ್ಲಿರುವ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿ ನೀಡಿದೆ. ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್‌ ಅವರು ಡಾ.ವಿಷ್ಣುವರ್ಧನ್‌ ಹಾಗೂ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಈ ಮೊದಲು 9 ಮಂದಿಗೆ ಕರ್ನಾಟಕ ರತ್ನ:

1992ರಿಂದ ನೀಡುತ್ತಿರುವ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಗೆ ಈವರೆಗೆ 9 ಮಂದಿ ಭಾಜನರಾಗಿದ್ದರು. ಈಗ ಹತ್ತನೆಯವರಾಗಿ ಸಾಹಸ ಸಿಂಹ ನಟ ದಿ. ಡಾ.ವಿಷ್ಣುವರ್ಧನ್ ಅವರಿಗೆ ಹಾಗೂ 11ನೆಯವರಾಗಿ ದಿ.ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ ನೀಡಲಾಗುತ್ತಿದೆ. ಕರ್ನಾಟಕ ರತ್ನ ಪುರಸ್ಕಾರವನ್ನು ಮೊದಲ ಬಾರಿಗೆ ರಾಷ್ಟ್ರಕವಿ ಕುವೆಂಪು ಅವರಿಗೆ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆ ಪರಿಗಣಿಸಿ ನೀಡಲಾಗಿತ್ತು. ಅದೇ ವರ್ಷ ವರನಟ ಡಾ.ರಾಜ್‌ ಕುಮಾರ್‌ ಅವರಿಗೆ ಸಿನಿಮಾ ರಂಗದಲ್ಲಿ ನೀಡಿದ ಗಣನೀಯ ಕೊಡುಗೆಗಾಗಿ ಈ ಪುರಸ್ಕಾರ ನೀಡಲಾಗಿತ್ತು.

ಬಳಿಕ ಮುಂದಿನ 7 ವರ್ಷಗಳ ಕಾಲ ಯಾವುದೇ ಗಣ್ಯರಿಗೂ ಕರ್ನಾಟಕ ರತ್ನ ಪುರಸ್ಕಾರ ನೀಡಿರಲಿಲ್ಲ. 1999ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್‌. ನಿಜಲಿಂಗಪ್ಪ ಅವರಿಗೆ ನೀಡಲಾಗಿತ್ತು.

ಕರ್ನಾಟಕ ರತ್ನ ಪುರಸ್ಕೃತರ ಪಟ್ಟಿ:

ಹೆಸರು- ಕ್ಷೇತ್ರ- ವರ್ಷಕುವೆಂಪು - ಸಾಹಿತ್ಯ - 1992ಡಾ. ರಾಜ್‌ಕುಮಾರ್‌ - ಚಲನಚಿತ್ರ - 1992ಎಸ್‌.ನಿಜಲಿಂಗಪ್ಪ - ರಾಜಕೀಯ - 1999ಸಿ.ಎನ್‌.ಆರ್.ರಾವ್ - ವಿಜ್ಞಾನ - 2000ಭೀಮಸೇನ ಜೋಶಿ - ಸಂಗೀತ - 2004ಶ್ರೀ ಶಿವಕುಮಾರ ಸ್ವಾಮೀಜಿ - ಸಾಮಾಜಿಕ ಸೇವೆ - 2007ದೇ. ಜವರೇಗೌಡ - ಸಾಹಿತ್ಯ -2008ಡಿ. ವೀರೇಂದ್ರ ಹೆಗ್ಗಡೆ - ಸಾಮಾಜಿಕ ಸೇವೆ - 2009.ದಿ. ಪುನೀತ್ ರಾಜ್‌ಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021ದಿ. ಡಾ.ವಿಷ್ಣುವರ್ಧನ್ - ಸಿನಿಮಾ - 2025ದಿ. ಬಿ.ಸರೋಜಾದೇವಿ- ಸಿನಿಮಾ - 2025-ಬಾಕ್ಸ್-ಡಾ.ವಿಷ್ಣುವರ್ಧನ್‌ ಸ್ಮಾರಕಕ್ಕೆ ಜಾಗ?ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟ ಸಭೆಯಿಂದಲೇ ಭಾರತಿ ವಿಷ್ಣುವರ್ಧನ್‌ ಅವರಿಗೆ ಕರೆ ಮಾಡಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸುತ್ತಿರುವ ಕುರಿತು ಮಾಹಿತಿ ನೀಡಿದರು. ಇನ್ನು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಸ್ಮಾರಕ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಜಾಗ ಒದಗಿಸಲು ಕರ್ನಾಟಕ ರತ್ನ ಪ್ರಶಸ್ತಿ ನಿಯಮಾವಳಿಗಳಲ್ಲೇ ಅವಕಾಶ ಇದೆ. ಹೀಗಾಗಿ ಅಭಿಮಾನ್‌ ಸ್ಟುಡಿಯೋದಲ್ಲಿ ಸ್ಮಾರಕಕ್ಕಾಗಿ 10 ಗುಂಟೆ ಜಾಗ ನೀಡುವಂತೆ ಡಾ.ಭಾರತಿ ವಿಷ್ಣುವರ್ಧನ್‌ ಅವರು ಮಾಡಿರುವ ಮನವಿಗೂ ಸರ್ಕಾರ ಸ್ಪಂದಿಸಲಿದೆ. ಈ ಬಗ್ಗೆ ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಅಂಜುಮ್‌ ಪರ್ವೇಜ್‌ ಅವರೊಂದಿಗೆ ಮುಖ್ಯಮಂತ್ರಿಗಳು ಈಗಾಗಲೇ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

---ದಕ್ಷಿಣ ಭಾರತದ ಮೊದಲ ಮಹಿಳಾ

ಸೂಪರ್‌ಸ್ಟಾರ್‌ ಬಿ. ಸರೋಜಾದೇವಿಹುಟ್ಟಿದ್ದು 1938ರ ಜ.7ರಂದು. ಊರು ಬೆಂಗಳೂರು. ಪೊಲೀಸ್ ಅಧಿಕಾರಿಯಾಗಿದ್ದ ಭೈರಪ್ಪ ಮತ್ತು ರುದ್ರಮ್ಮ ದಂಪತಿಯ ನಾಲ್ಕನೇ ಸುಪುತ್ರಿ. 17ನೇ ವಯಸ್ಸಿನಲ್ಲಿಯೇ ಬಣ್ಣ ಹಚ್ಚಿದ ಸಾಧಕಿ. ಮೊದಲು ಬಣ್ಣ ಹಚ್ಚಿದ ಚಿತ್ರ ‘ಶ್ರೀರಾಮಪೂಜ’. ಮೊದಲು ಬಿಡುಗಡೆಯಾಗಿದ್ದು ‘ಮಹಾಕವಿ ಕಾಳಿದಾಸ’. 1957ರಲ್ಲಿ ‘ಪಾಂಡುರಂಗ ಮಹಾತ್ಯಂ’ ಮೂಲಕ ತೆಲುಗಿಗೂ, 1958ರಲ್ಲಿ ಎಂಜಿಆರ್‌ಗೆ ನಾಯಕರಾಗಿ ನಟಿಸಿದ್ದ ‘ನಾಡೋಡಿ ಮನ್ನನ್’ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು. ನಾಲ್ಕು ಭಾಷೆಯ ಸೂಪರ್‌ಸ್ಟಾರ್‌ಗಳ ಜೊತೆ ನಟಿಸಿ ‘ಅಭಿನಯ ಸರಸ್ವತಿ’ ಎಂದು ಕರೆಸಿಕೊಂಡರು. ದಕ್ಷಿಣ ಭಾರತದ ಮೊದಲ ಮಹಿಳಾ ಸೂಪರ್‌ಸ್ಟಾರ್‌ ಎಂಬ ಅಭಿದಾನಕ್ಕೂ ಭಾಜನರಾಗಿದ್ದರು. ಚತುರ್ಭಾಷಾ ತಾರೆ ಅನ್ನಿಸಿಕೊಂಡಿದ್ದ ಅವರು 200 ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಅವರ ಅಭಿನಯದ ಕೊನೆಯ ಸಿನಿಮಾ ಪುನೀತ್ ರಾಜ್‌ಕುಮಾರ್ ನಟನೆಯ ‘ನಟ ಸಾರ್ವಭೌಮ’. ಚಿತ್ರರಂಗಕ್ಕೆ ನೀಡಿದ ಅಪಾರ ಕೊಡುಗೆಗಾಗಿ ಅ‍ವರಿಗೆ ಪದ್ಮಭೂಷಣ, ಪದ್ಮಶ್ರೀ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಡಾ. ರಾಜ್‌ಕುಮಾರ್ ಪ್ರಶಸ್ತಿ, ಆಂಧ್ರ ಪ್ರದೇಶ ಸರ್ಕಾರದ ಎನ್.ಟಿ.ಆರ್. ರಾಷ್ಟ್ರೀಯ ಪ್ರಶಸ್ತಿ, ತಮಿಳುನಾಡು ಸರ್ಕಾರದ ಕಲೈಮಾಮಣಿ ಪ್ರಶಸ್ತಿ ದೊರೆತಿದೆ. ಇವರು 2025ರ ಜುಲೈ 14ರಂದು ನಿಧನರಾದರು.

--

220 ಸಿನಿಮಾಗಳಲ್ಲಿ ನಟಿಸಿದ್ದ

ಸಾಹಸ ಸಿಂಹ ವಿಷ್ಣುವರ್ಧನ್‌ಮೂಲ ಹೆಸರು ಸಂಪತ್‌ ಕುಮಾರ್‌. ಚಿತ್ರರಂಗ ಕೊಟ್ಟ ಹೆಸರು ಡಾ. ವಿಷ್ಣುವರ್ಧನ್‌. ಪುಟ್ಟಣ್ಣ ಕಣಗಾಲ್‌ ನಿರ್ದೇಶನದ ‘ನಾಗರಹಾವು’ ಚಿತ್ರದ ರಾಮಾಚಾರಿ ಪಾತ್ರದ ಮೂಲಕ ಮನೆಮಾತಾದ ನಟ ಕನ್ನಡ ಚಿತ್ರರಂಗದ ‘ಸಾಹಸಸಿಂಹ’ನಾಗಿ ಮೆರೆದರು.ಕಿಲಾಡಿ ಕಿಟ್ಟು, ಸಾಹಸಸಿಂಹ , ಜಿಮ್ಮಿಗಲ್ಲು, ಕರ್ಣ, ಮಲಯ ಮಾರುತ, ಮುತ್ತಿನ ಹಾರ, ಸಂಘರ್ಷ, ನಿಷ್ಕರ್ಷ, ಹಾಲುಂಡ ತವರು, ಸಹೋದರರ ಸವಾಲ್‌, ಕಿಟ್ಟು ಪುಟ್ಟು, ಯಜಮಾನ, ಆಪ್ತಮಿತ್ರ, ಆಪ್ತ ರಕ್ಷಕ ವಿಷ್ಣುವರ್ಧನ್‌ ನಟನೆಯ ಪ್ರಮುಖ ಸಿನಿಮಾಗಳು. ಸುಮಾರು 14 ಸಿನಿಮಾಗಳಲ್ಲಿ ದ್ವಿಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಅತೀಹೆಚ್ಚು ದ್ವಿಪಾತ್ರದಲ್ಲಿ ಕಾಣಿಸಿಕೊಂಡ ನಟ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಭಾಷೆಗಳಲ್ಲಿ 220ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ಚಿತ್ರಗಳಿಗೆ ಹಿನ್ನೆಲೆ ಗಾಯನವನ್ನೂ ಮಾಡಿದ್ದಾರೆ. ಪತ್ನಿ ಭಾರತಿ ವಿಷ್ಣುವರ್ಧನ್‌ ಹಾಗೂ ವಿಷ್ಣುವರ್ಧನ್‌ ಜೋಡಿ ಅನೇಕ ಸಿನಿಮಾದಲ್ಲಿ ಜೊತೆಗೆ ನಟಿಸಿದ್ದು, ಈ ಜೋಡಿ ಬಹಳ ಜನಪ್ರಿಯವಾಗಿತ್ತು. ಸಿನಿಮಾ ಕ್ಷೇತ್ರದಲ್ಲಿನ ಇವರ ಕೊಡುಗೆಗಾಗಿ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್‌ ಪದವಿ ನೀಡಿ ಗೌರವಿಸಿದೆ. 2009ರ ಡಿಸೆಂಬರ್ 30ರಂದು ಅವರು ವಿಧಿವಶರಾದರು.