17ಕ್ಕೆ ಮೋದಿ ಜನ್ಮದಿನ: ಬಿಜೆಪಿಯಿಂದ ‘ಸೇವಾ ಪಾಕ್ಷಿಕ’ ಅಭಿಯಾನ

| Published : Sep 12 2025, 12:06 AM IST

ಸಾರಾಂಶ

ಇದೇ ಸೆ.17ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ 75ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಈ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಂಡಿದೆ.

-ಸೆ.17ರಿಂದ ಅ.2ರವರೆಗೆ ಕಾರ್ಯಕ್ರಮ ಆಯೋಜನೆ-‘ಸ್ವದೇಶಿ’ ಮತ್ತು ‘ಆತ್ಮನಿರ್ಭರ ಭಾರತ’ಕ್ಕೆ ಪ್ರಾಮುಖ್ಯ

ಪಿಟಿಐ ನವದೆಹಲಿ

ಇದೇ ಸೆ.17ಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ 75ನೇ ಜನ್ಮದಿನ ಆಚರಿಸಿಕೊಳ್ಳಲಿದ್ದಾರೆ. ಈ ಪ್ರಯುಕ್ತ ಬಿಜೆಪಿ ದೇಶಾದ್ಯಂತ ಸೇವಾ ಪಾಕ್ಷಿಕ ಅಭಿಯಾನ ಹಮ್ಮಿಕೊಂಡಿದೆ.

ಇದು ಸೆ.17ರಿಂದ ಗಾಂಧಿ ಜಯಂತಿ ದಿನವಾದ ಅ.2ರವರೆಗೆ ನಡೆಯಲಿದ್ದು, ‘ಸ್ವದೇಶಿ’ ಮತ್ತು ‘ಆತ್ಮನಿರ್ಭರ ಭಾರತ’ ಪರಿಕಲ್ಪನೆ ಅಡಿಯಲ್ಲಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್‌ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಸುನೀಲ್‌ ಬನ್ಸಲ್‌ ತಿಳಿಸಿದ್ದಾರೆ. ಅಭಿಯಾನ ಸೆ.25ರಂದು ಪಕ್ಷದ ಹಿರಿಯ ನೇತಾರ ಪಂ. ದೀನ್ ದಯಾಳ್ ಉಪಾಧ್ಯಾಯ ಮತ್ತು ಅ.2ರಂದು ಮಹಾತ್ಮ ಗಾಂಧಿ, ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಸಹ ಒಳಗೊಂಡಿರುತ್ತದೆ. ‘ಆತ್ಮನಿರ್ಭರ ಭಾರತ, ವಿಕಸಿತ ಭಾರತ’ ಅಭಿಯಾನವು ಉಪಾಧ್ಯಾಯ ಅವರ ಜನ್ಮದಿನದಂದು ಪ್ರಾರಂಭವಾಗಿ ಡಿ.25ರಂದು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದವರೆ ನಡೆಯಲಿದೆ. ದೇಶೀಯ ಉತ್ಪನ್ನಗಳನ್ನು ಉತ್ತೇಜಿಸಲು ಪ್ರದರ್ಶನಗಳು ಮತ್ತು ಮೇಳಗಳು ನಡೆಯಲಿವೆ.

ಯುವ ಮೋರ್ಚಾ ಸೆ.21ರಿಂದ ದೇಶದ 75 ನಗರಗಳಲ್ಲಿ ‘ಮೋದಿ ವಿಕಾಸ್‌ ಮ್ಯಾರಥಾನ್‌’ ಅಡಿಯಲ್ಲಿ ಮೋದಿಯವರ ಸಾಧನೆಗಳನ್ನು ತಿಳಿಸುವ ಕಾರ್ಯಕ್ರಮಗಳನ್ನು ನಡೆಸಲಿದೆ. 75ಕ್ಕೂ ಅಧಿಕ ನಗರಗಳಲ್ಲಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗುವುದು. ಗಿಡ ನೆಡುವುದು, ರಕ್ತದಾನ, ಆರೋಗ್ಯ ತಪಾಸಣಾ ಶಿಬಿರ, ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಪ್ರತಿ ಜಿಲ್ಲೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರೊಂದಿಗೆ ಸಂವಾದ ಏರ್ಪಡಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.