ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಮಸ್ಕ್‌ ಔಟ್‌: ಲ್ಯಾರಿ ಈಗ ನಂ.1

| Published : Sep 11 2025, 12:04 AM IST

ವಿಶ್ವದ ನಂ.1 ಶ್ರೀಮಂತ ಪಟ್ಟದಿಂದ ಮಸ್ಕ್‌ ಔಟ್‌: ಲ್ಯಾರಿ ಈಗ ನಂ.1
Share this Article
  • FB
  • TW
  • Linkdin
  • Email

ಸಾರಾಂಶ

ಸುಮಾರು 1 ವರ್ಷಗಳ ಕಾಲ ವಿಶ್ವದ ಶ್ರೀಮಂತ ಎನಿಸಿಕೊಂಡಿದ್ದ ಎಲಾನ್‌ ಮಸ್ಕ್‌ ಈಗ ವಿಶ್ವದ ನಂ.2ಕ್ಕೆ ಕುಸಿದಿದ್ದಾರೆ. ಒರಾಕಲ್‌ ಕಂಪನಿ ಸಹಸಂಸ್ಥಾಪಕ ಲ್ಯಾರಿ ಎಲ್ಲಿಸ್ಸನ್‌ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ.

ವಾಷಿಂಗ್ಟನ್‌: ಸುಮಾರು 1 ವರ್ಷಗಳ ಕಾಲ ವಿಶ್ವದ ಶ್ರೀಮಂತ ಎನಿಸಿಕೊಂಡಿದ್ದ ಎಲಾನ್‌ ಮಸ್ಕ್‌ ಈಗ ವಿಶ್ವದ ನಂ.2ಕ್ಕೆ ಕುಸಿದಿದ್ದಾರೆ. ಒರಾಕಲ್‌ ಕಂಪನಿ ಸಹಸಂಸ್ಥಾಪಕ ಲ್ಯಾರಿ ಎಲ್ಲಿಸ್ಸನ್‌ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ.

ಲ್ಯಾರಿ ಅವರ ಆಸ್ತಿಯು ಸೋಮವಾರ ಬರೋಬ್ಬರಿ 101 ಬಿಲಿಯನ್‌ ಡಾಲರ್‌ ವೃದ್ಧಿಯಾಗಿ ಅಗ್ರಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇದರಿಂದಾಗಿ ಇವರ ಒಟ್ಟು ಆಸ್ತಿಯು 393 ಬಿಲಿಯನ್‌ ಡಾಲರ್‌ಗೆ (34 ಲಕ್ಷ ಕೋಟಿ ರು.) ಜಿಗಿದಿದೆ. ಎಲಾನ್‌ ಮಸ್ಕ್‌ 385 ಬಿಲಿಯನ್‌ ಡಾಲರ್‌ನಿಂದ (33 ಲಕ್ಷ ಕೋಟಿ ರು.)ನಿಂದ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ಕೆಲ ದಿನಗಳಿಂದ ಒರಾಕಲ್‌ನಲ್ಲಿನ ಕ್ಲೌಡ್‌ ಬೇಡಿಕೆಯು ಲ್ಯಾರಿ ಅವರ ಆಸ್ತಿ ಏರಿಕೆಗೆ ಕಾರಣವಾಗಿದೆ. ಮಂಗಳವಾರ ಇವರ ಆಸ್ತಿಯು ಶೇ.41ರಷ್ಟು ಏರಿಕೆಯಾಗಿತ್ತು.

==

₹20,000ಕ್ಕಿಂತ ಹೆಚ್ಚಿನ ನಗದು ಸಾಲಕ್ಕೆ ದಂಡ!

ಆದಾಯ ತೆರಿಗೆ ಇಲಾಖೆಯ ಹೊಸ ಕ್ರಮ

ನವದೆಹಲಿ: 20 ಸಾವಿರ ರು.ಗಿಂತ ಹೆಚ್ಚಿನ ನಗದನ್ನು ಸಾಲ ರೂಪದಲ್ಲಿ ಪಾವತಿ ಮಾಡಿದರೆ ಅಷ್ಟೇ ಪ್ರಮಾಣದ ದಂಡ ಬೀಳಲಿದೆ. ಹೌದು. ನೀವು ಓದಿದ್ದು ನಿಜ. ಈ ಬಗ್ಗೆ ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಬ್ರೌಷರ್‌ನಲ್ಲಿ ತಿಳಿಸಿದೆ.

ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 271ಡಿಡಿ, 269ಎಸ್‌ಎಸ್‌, 269ಎಸ್‌ಟಿ ಮತ್ತು 269ಟಿ ಅಡಿಯಲ್ಲಿ 20 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ನಗದು ವಹಿವಾಟಿನ ಮೇಲೆ ಅಷ್ಟೇ ಪ್ರಮಾನದ ದಂಡ ಬೀಳುವ ಸಾಧ್ಯತೆ ಇರುತ್ತದೆ.ಉದಾಹರಣೆಗೆ, ಓರ್ವ ವ್ಯಕ್ತಿ ತನ್ನ ಸ್ನೇಹಿತ/ಸಂಬಂಧಿಕನಿಗೆ 20,000 ರು. ನಗದು ಸಾಲ, ಕೊಡುಗೆ, ಅಡ್ವಾನ್ಸ್‌ ರೂಪದಲ್ಲಿ ಕೊಟ್ಟರೂ ಸಹ ದಂಡಕ್ಕೆ ಆಹ್ವಾನವಾಗುತ್ತದೆ. ಅದಕ್ಕಾಗಿ ಚೆಕ್‌, ಡಿಡಿ, ಡ್ರಾಫ್ಟ್‌, ಯುಪಿಐ, ಡಿಜಿಟಲ್ ಪೇಮೆಂಟ್‌ ಮೂಲಕ ಪಾವತಿ ಮಾಡಬಹುದಾಗಿದೆ. ಒಂದು ವೇಳೆ 20 ಸಾವಿರ ರು.ಗಿಂತ ಹೆಚ್ಚಿನ ಸಾಲವನ್ನು ನಗದು ರೂಪದಲ್ಲಿ ನೀಡಿದೆ ಸೆಕ್ಷನ್ 271D ಅಡಿಯಲ್ಲಿ ಇದರ ಮೇಲೆ ದಂಡ ವಿಧಿಸಲಾಗುತ್ತದೆ, ಇದು ಸಾಲದ ಮೊತ್ತಕ್ಕೆ ಸಮಾನವಾಗಿರುತ್ತದೆ. ಅಂದರೆ, 30 ಸಾವಿರ ನಗದು ನೀಡಿದರೆ, ಕೇವಲ 30 ಸಾವಿರ ದಂಡ ವಿಧಿಸಲಾಗುತ್ತದೆ.

==

ದೇಶದ ನಕ್ಸಲ್‌ ಸಂಘಟನೆಗೆ ಇನ್ನು ಕಮಾಂಡರ್‌ ದೇವಜಿ ಸಾರಥ್ಯ

ಪಿಟಿಐ ಹೈದರಾಬಾದ್‌ನಿಷೇಧಿತ ನಕ್ಸಲ್ ಸಂಘಟನೆ ಸಿಪಿಐ-ಮಾವೋವಾದಿ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮುಖ ಮಾವೋವಾದಿ ಕಮಾಂಡರ್‌ ದೇವಜಿಯನ್ನು ನೇಮಿಸಲಾಗಿದೆ ಎಂದು ಬುಧವಾರ ಪೊಲೀಸ್‌ ಮೂಲಗಳು ಹೇಳಿವೆ. ಇದರೊಂದಿಗೆ ದೇವಜಿ ದೇಶದ ನಕ್ಸಲ್ ಚಳವಳಿಯನ್ನು ಇನ್ನು ಮುನ್ನಡೆಸಲಿದ್ದಾನೆ.

ದೇಶವನ್ನು 2026ರೊಳಗೆ ನಕ್ಸಲ್‌ ಮುಕ್ತ ಮಾಡುವುದಾಗಿ ಕೇಂದ್ರ ಸರ್ಕಾರ ಹೇಳುತ್ತಿರುವ ನಡುವೆಯೇ ಈ ವಿದ್ಯಮಾನ ನಡೆದಿದೆ.ಈ ಹಿಂದೆ ಸಂಘಟನೆ ಪ್ರಧಾನ ಕಾರ್ಯದರ್ಶಿಯಾಗಿದ್ದ ನಂಬಲ ಕೇಶವ ರಾವ್ ಅಲಿಯಾಸ್‌ ಬಸವರಾಜು ಸಾವಿನ ನಂತರ ತೆಲಂಗಾಣ ಮೂಲದ 60 ವರ್ಷದ ತಿಪ್ಪಿರಿ ತ್ರಿಪಾಠಿ ಅಲಿಯಾಸ್‌ ದೇವಜಿ ನೇಮಕಾತಿಯನ್ನು ಈಚೆಗೆ ಬಸ್ತರ್‌ನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

‘ಸಿಪಿಐ ಇತ್ತೀಚೆಗೆ ಸಭೆ ನಡೆಸಿ ನಮ್ಮ ನಾಯಕನನ್ನು ನಕ್ಸಲರು ಆಯ್ಕೆ ಮಾಡಿದ್ದಾರೆ. ಇದು ಮಾವೋವಾದಿಗಳ ಕಾರ್ಯತಂತ್ರದ ಒಂದು ಭಾಗ’ ಎಂದು ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.ದೇವ್ಜಿ ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಸ್ಥಾಪಕ ಆಗಿದ್ದು ತನ್ನ ಮೇಲೆಪೊಂದು ಕೋಟಿ ರು. ಬಹುಮಾನ ಹೊಂದಿದ್ದಾನೆ.

==

ಅಳ್ತಿದ್ದ 15 ದಿನದ ಕೂಸನ್ನು ಫ್ರಿಡ್ಜ್‌ನಲ್ಲಿಟ್ಟ ಕ್ರೂರಿ ತಾಯಿ

ಲಖನೌ: ಮಗುವಿನ ಎಡಬಿಡದ ಅಳುವಿನಿಂದ ಬೇಸತ್ತ ತಾಯಿಯೊಬ್ಬಳು 15 ದಿನದ ಕೂಸನ್ನು ಪ್ರಿಡ್ಜ್‌ನಲ್ಲಿ ಇಟ್ಟ ಮನಕಲಕುವ ಘಟನೆ ಉತ್ತರಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದಿದೆ. ಕಂದನ ಅಳು ಕೇಳಿ ಅಜ್ಜಿ ಅದನ್ನು ರಕ್ಷಿಸಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.ಕರುಳ ಕುಡಿಯೊಂದಿಗೆ ಇಂತಹ ಕೃತ್ಯ ಎಸಗಿದ್ದೇಕೆ ಎಂದು ಕೇಳಿದಾಗ ತಾಯಿ, ‘ಅದು ಅತ್ತು ನನ್ನ ನಿದ್ದೆ ಹಾಳು ಮಾಡುತ್ತಿತ್ತು. ಹಾಗಾಗಿ ಬೇಸತ್ತು ಫ್ರಿಡ್ಜ್‌ನಲ್ಲಿಟ್ಟೆ’ ಎಂದಿದ್ದಾರೆ. ಮನೋವೈದ್ಯರ ಬಳಿ ಕರೆದೊಯ್ದಾಗ, ಆಕೆ ಹೆರಿಗೆ ಬಳಿಕದ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದು ತಿಳಿದುಬಂದಿದೆ.

==

ಜಿಎಸ್ಟಿ ಕಡಿತ: ಸ್ಕೋಡಾ, ಫೋಕ್ಸ್‌ವ್ಯಾಗನ್‌ ಕಾರು ಇನ್ನು ಅಗ್ಗ

ಪಿಟಿಐ ನವದೆಹಲಿಜಿಎಸ್ಟಿ ಸ್ತರ ಪರಿಷ್ಕರಣೆಯ ಪರಿಣಾಮ ಮತ್ತಷ್ಟು ಕಾರು ಕಂಪನಿಗಳು ತಮ್ಮ ವಾಹನಗಳ ಬೆಲೆಯನ್ನು ಕಡಿತ ಘೋಷಣೆ ಮಾಡಿವೆ. ಫೋಕ್ಸ್‌ವ್ಯಾಗನ್‌ ಮತ್ತು ಸ್ಕೋಡಾ ಕಂಪನಿಗಳು ತಮ್ಮ ಕಾರುಗಳ ಬೆಲೆಯನ್ನು ಸೆ.22ರಿಂದ ಇಳಿಸುವುದಾಗಿ ಹೇಳಿವೆ.

ಫೋಕ್ಸ್‌ವ್ಯಾಗನ್‌ ಕಂಪನಿ ತನ್ನ ಎಸ್‌ಯುವಿ ಟಿಗೌನ್‌ ಬೆಲೆಯನ್ನು 3,26,900 ರು., ಎಸ್‌ಯುವಿ ಟೈಗುನ್‌ 68,400 ರು., ಮತ್ತು ಸೆಡನ್‌ ವಿರ್ಟಸ್‌ ಕಾರಿನ ಬೆಲೆಯನ್ನು 66,900 ರು. ಇಳಿಸುವುದಾಗಿ ಘೋಷಿಸಿವೆ.ಸ್ಕೋಡಾ ಕಂಪನಿ ಕೊಡಿಯಾಕ್‌ ಎಸ್‌ಯುವಿ 3,28,267 ರು.,ಎಸ್‌ಯುವಿ ಕೈಲಾಕ್‌ 1,19,295 ರು., ಎಸ್‌ಯುವಿ ಕುಶಾಕ್‌ 65,828 ರು. ಮತ್ತು ಸೆಡನ್‌ ಸ್ಲಾವಿಯಾ ಕಾರಿನ ಬೆಲೆಯನ್ನು 63,207 ರು. ಇಳಿಸಿ ಜಿಎಸ್ಟಿ ಲಾಭವನ್ನು ಜನರಿಗೆ ನೀಡುವುದಾಗಿ ಘೋಷಿಸಿವೆ.

ಈ ಹಿಂದೆ ಟಾಟಾ, ಮಹೀಂದ್ರಾ, ಔಡಿ, ಕಿಯಾ, ಎಂಜಿ ಕಾರುಗಳು ಬೆಲೆ ಇಳಿಕೆ ಘೋಷಿಸಿದ್ದವು.

==

ಸುಳ್ಳುಸುದ್ದಿ ಹರಡುವಿಕೆ ತಡೆಗೆ ಇನ್ನಷ್ಟು ಕಠಿಣ ಕ್ರಮ: ಶಿಫಾರಸು

ನವದೆಹಲಿ: ಅನಿಯಂತ್ರಿತವಾಗಿ ಹಬ್ಬುತ್ತಿರುವ ಸುಳ್ಳುಸುದ್ದಿಗಳ ಹಾವಳಿಯನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಸಂಸದ ನಿಶಿಕಾಂತ್‌ ದುಬೆ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ. ಜತೆಗೆ ಎಲ್ಲಾ ಮಾಧ್ಯಮಗಳಲ್ಲಿ ಸುದ್ದಿಗಳ ಸತ್ಯ ಪರಿಶೀಲನೆಯನ್ನು ಕಡ್ಡಾಯಗೊಳಿಸಬೇಕು ಎಂದು ಸೂಚಿಸಲಾಗಿದೆ.ಮಂಗಳವಾರ ಅಂಗೀಕರಿಸಲಾದ ಕರಡು ವರದಿಯಲ್ಲಿ, ದೇಶದ ಎಲ್ಲಾ ಮುದ್ರಿತ, ಡಿಜಿಟಲ್‌, ಎಲೆಕ್ಟ್ರಾನಿಕ್‌ ಮಾಧ್ಯಮಗಳಲ್ಲಿ ಸತ್ಯ ಪರಿಶೀಲನೆ ಕಾರ್ಯವಿಧಾನ ಮತ್ತು ಆಂತರಿಕ ಓಂಬುಡ್ಸ್‌ಮನ್‌ ಅನ್ನು ಮಾಹಿತಿ ಮತ್ತು ಪ್ರಸಾರ ಇಲಾಖೆ ಕಡ್ಡಾಯಗೊಳಿಸಬೇಕು ಹಾಗೂ ಸುಳ್ಳು ಸುದ್ದಿ ಸೃಷ್ಟಿಸುವವರು ಮತ್ತು ಹರಡುವವರ ಮೇಲಿನ ದಂಡವನ್ನು ಹೆಚ್ಚು ಮಾಡಬೇಕು ಎಂಬ ಬೇಡಿಕೆಯಿದೆ. ಜತೆಗೆ, ಈ ಪ್ರಕ್ರಿಯೆಯಲ್ಲಿ ಜನರ ವಾಕ್‌ ಸ್ವಾತಂತ್ರ್ಯವನ್ನೂ ಖಚಿತಪಡಿಸಬೇಕು ಎಂದು ಸೂಚಿಸಲಾಗಿದೆ. ಇದಕ್ಕೆ ಪಕ್ಷಾತೀತ ಬೆಂಬಲ ವ್ಯಕ್ತವಾಗಿದೆ.ಇದು ಮುಂದಿನ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಅಂಗೀಕಾರವಾಗುವ ನಿರೀಕ್ಷೆಯಿದೆ.