ಮಂಗಳನ ಅಂಗಳದಲ್ಲಿ ಜೀವದ ಕುರುಹು ಪತ್ತೆ!

| Published : Sep 11 2025, 12:04 AM IST

ಮಂಗಳನ ಅಂಗಳದಲ್ಲಿ ಜೀವದ ಕುರುಹು ಪತ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಭೂಮಿಗೆ ಸಮೀಪವಿರುವ ಹಾಗೂ ಹಲವು ಕೌತುಕಗಳ ಗೂಡಾಗಿರುವ ಮಂಗಳನ ಅಂಗಳದಲ್ಲಿ ಜೀವಿಗಳಿದ್ದವು ಎಂಬುದನ್ನು ಸಾಬೀತುಪಡಿಸಲು ಕೆಲ ಕುರುಹುಗಳು ದೊರೆತಿವೆ. 2021ರಲ್ಲಿ ಮಂಗಳನ ಮಡಿಲಿಗೆ ಇಳಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ಪರ್ಸೀವಿಯರೆನ್ಸ್‌ ರೋವರ್‌ ಈ ಮಹತ್ವದ ಸಂಗತಿಯನ್ನು ಬೆಳಕಿಗೆಳೆದಿದೆ.

ಅಮೆರಿಕದ ಪರ್ಸೀವಿಯರೆನ್ಸ್‌ ರೋವರ್‌ನಿಂದ ಬೆಳಕಿಗೆಕುಳಿಯಿಂದ ಸಂಗ್ರಹಿಸಿದ ಬಂಡೆ ತುಂಡಿನ ಅಧ್ಯಯನ

ನವದೆಹಲಿ: ಭೂಮಿಗೆ ಸಮೀಪವಿರುವ ಹಾಗೂ ಹಲವು ಕೌತುಕಗಳ ಗೂಡಾಗಿರುವ ಮಂಗಳನ ಅಂಗಳದಲ್ಲಿ ಜೀವಿಗಳಿದ್ದವು ಎಂಬುದನ್ನು ಸಾಬೀತುಪಡಿಸಲು ಕೆಲ ಕುರುಹುಗಳು ದೊರೆತಿವೆ. 2021ರಲ್ಲಿ ಮಂಗಳನ ಮಡಿಲಿಗೆ ಇಳಿದ ಅಮೆರಿಕದ ಬಾಹ್ಯಾಕಾಶ ಸಂಸ್ಥೆ(ನಾಸಾ)ಯ ಪರ್ಸೀವಿಯರೆನ್ಸ್‌ ರೋವರ್‌ ಈ ಮಹತ್ವದ ಸಂಗತಿಯನ್ನು ಬೆಳಕಿಗೆಳೆದಿದೆ.

ಈ ರೋವರ್‌ ಜೆಜೆರೊ ಕುಳಿಯಿಂದ ಸಂಗ್ರಹಿಸಿದ ಬಂಡೆಯ ತುಣುಕುಗಳಲ್ಲಿ ಪ್ರಾಚೀನ ಸೂಕ್ಷ್ಮಜೀವಿಯ ಕುರುಹುಗಳು ಕಂಡುಬಂದಿವೆ. 2024ರಲ್ಲಿ ಸಂಗ್ರಹಿಸಲಾದ ಆ ತುಣುಕುಗಳಿಗೆ ನಾಸಾ ಸಫೈರ್‌ ಕ್ಯಾನ್ಯನ್‌ ಎಂದು ಹೆಸರಿಟ್ಟಿದ್ದು, ಅದು ಪತ್ತೆಯಾದ ಬಂಡೆಯನ್ನು ಛೆಯಾವಾ ಫಾಲ್ಸ್‌ ಎಂದು ಕರೆದಿದೆ. ಇವುಗಳಲ್ಲಿ ಜೀವಿಗಳ ಸೂಕ್ಷ್ಮ ಕುರುಹುಗಳಿವೆ ಎಂದಿರುವ ವಿಜ್ಞಾನಿಗಳು, ಇದನ್ನು ಸಾಬೀತುಪಡಿಸಲು ಇನ್ನಷ್ಟು ಪರೀಕ್ಷೆಗಳು ಅಗತ್ಯ ಎಂದಿದ್ದಾರೆ. ಜೆಜೆರೊ ಕುಳಿಗೆ ನೀರು ಒದಗಿಸುತ್ತಿದ್ದ ನದಿಯ ಅನ್ವೇಷಣೆ ವೇಳೆ ರೋವರ್‌ಗೆ ಫಾಲ್ಸ್‌ ದೊರಕಿತ್ತು. ತನ್ನಲ್ಲಿದ್ದ ಪಿಕ್ಸಲ್‌ ಮತ್ತು ಶೆರ್ಲಾಕ್‌ ಸಾಧನವನ್ನು ಬಳಸಿ ಪರಿಶೀಲಿಸಿದಾಗ ಆ ಶಿಲೆಯಲ್ಲಿ, ಭೂಮಿಯ ಮೇಲ್ಪದರದಲ್ಲಿರುವ ಕಲ್ಲುಗಳಲ್ಲಿರುವ ವಿಶಿಷ್ಟ ರಾಸಾಯನಿಕ ಮತ್ತು ರಚನಾತ್ಮಕ ಲಕ್ಷಣಗಳು ಪತ್ತೆಯಾಗಿದೆ. ಜತೆಗೆ, ಕಬ್ಬಿಣದ ಅಂಶ ಹೆಚ್ಚಿರುವ ವಿವಿಯನೈಟ್ ಮತ್ತು ಗ್ರೀಗೈಟ್ ಮಿನರಲ್‌ಗಳೂ ಪತ್ತೆಯಾಗಿವೆ. ವಿವಿಯನೈಟ್ ಸಾಮಾನ್ಯವಾಗಿ ತೇವವಿರುವ ಪ್ರದೇಶ ಅಥವಾ ಕೊಳೆಯುತ್ತಿರುವ ವಸ್ತುಗಳಲ್ಲಿ ಕಂಡುಬರುತ್ತದೆ. ಶಕ್ತಿ ಉತ್ಪಾದಿಸುವ ಪ್ರತಿಕ್ರಿಯೆಯಲ್ಲಿ ಗ್ರೀಗೈಟ್ ಇರುತ್ತದೆ. ಇಂತಹ ಅಂಶಗಳು ಮಂಗಳದಲ್ಲಿ ಜೀವವಿದ್ದ ವಾದಕ್ಕೆ ಪುಷ್ಠಿ ಕೊಡುತ್ತದೆ.