ಸಾರಾಂಶ
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿರುವ ಭಾರತ ಮೂಲದ ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ವಿಜ್ಞಾನಿ ಬುಚ್ ವಿಲ್ಮರ್ ನವೆಂಬರ್ 5 ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂತರಿಕ್ಷದಿಂದಲೇ ಮತದಾನ ಮಾಡಲಿದ್ದಾರೆ.
ವಾಷಿಂಗ್ಟನ್ : ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಿಲುಕಿರುವ ಭಾರತ ಮೂಲದ ನಾಸಾ ವಿಜ್ಞಾನಿ ಸುನಿತಾ ವಿಲಿಯಮ್ಸ್ ಹಾಗೂ ಅಮೆರಿಕದ ಇನ್ನೊಬ್ಬ ವಿಜ್ಞಾನಿ ಬುಚ್ ವಿಲ್ಮರ್ ಇದೇ ನ.5ರಂದು ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಂತರಿಕ್ಷದಿಂದಲೇ ಮತದಾನ ಮಾಡಲಿದ್ದಾರೆ.
ಅಂತರಿಕ್ಷದಿಂದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುನಿತಾ, ‘ಮತದಾನ ಬಹಳ ಮುಖ್ಯವಾದ ಕರ್ತವ್ಯ. ಅಧ್ಯಕ್ಷೀಯ ಚುನಾವಣೆಯಲ್ಲಿ ನಾವು ಇಲ್ಲಿಂದಲೇ ಮತ ಹಾಕಲು ಉತ್ಸುಕರಾಗಿದ್ದೇವೆ’ ಎಂದು ಹೇಳಿದರು. ವಿಲ್ಮರ್ ಮಾತನಾಡಿ, ‘ನಮಗೆ ಬ್ಯಾಲೆಟ್ ಪೇಪರ್ ಕಳಿಸುವಂತೆ ಮನವಿ ಮಾಡಿದ್ದೇವೆ’ ಎಂದರು.
ಸುನಿತಾ ಹಾಗೂ ವಿಲ್ಮರ್ ಕಳೆದ ಜೂನ್‌ನಲ್ಲಿ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದು, ಈ ತಿಂಗಳು ಸ್ಟಾರ್‌ಲೈನರ್ ನೌಕೆಯಲ್ಲಿ ವಾಪಸಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಆ ನೌಕೆಯಲ್ಲಿ ಅವರು ಮರಳಿಲ್ಲ. ಮುಂದಿನ ಫೆಬ್ರವರಿಯಲ್ಲಿ ಅವರನ್ನು ಬೇರೆ ನೌಕೆಯಲ್ಲಿ ಭೂಮಿಗೆ ಕರೆತರಲು ನಾಸಾ ನಿರ್ಧರಿಸಿದೆ. ಅಲ್ಲಿಯವರೆಗೂ ಅವರು ಅಲ್ಲೇ ಇರಲಿದ್ದಾರೆ.
ಈ ಹಿಂದೆ, 2020ರ ಚುನಾವಣೆಯಲ್ಲೂ ನಾಸಾ ವಿಜ್ಞಾನಿ ಕೇಟ್ ರೂಬಿನ್ಸ್ ಅಂ.ರಾ. ಬಾಹ್ಯಾಕಾಶ ಕೇಂದ್ರದಿಂದಲೇ ಮತ ಚಲಾಯಿಸಿದ್ದರು.
ಭರವಸೆ ಕಳೆದುಕೊಳ್ಳದ ಸುನಿತಾ:
ಪತ್ರಿಕಾಗೋಷ್ಠಿಯಲ್ಲಿ ಬಾಹ್ಯಾಕಾಶ ಕೇಂದ್ರದಲ್ಲಿನ ವಾಸದ ಬಗ್ಗೆ ಹಾಗೂ ಭೂಮಿಗೆ ಬರುವುದು ವಿಳಂಬವಾಗುತ್ತಿರುವುದರ ಬಗ್ಗೆ ಮಾತನಾಡಿದ ಸುನಿತಾ ಹಾಗೂ ವಿಲ್ಮರ್, ‘ನಾವು ಇಲ್ಲಿ ಚೆನ್ನಾಗಿಯೇ ಇದ್ದೇವೆ. ಆದರೆ ಇದು ಸುಲಭದ ಕೆಲಸವಲ್ಲ. ನಾವು ಆಯ್ದುಕೊಂಡಿದ್ದು ಅಪಾಯಕಾರಿ ಕೆಲಸವನ್ನು ಎಂಬುದು ನಮಗೆ ತಿಳಿದಿದೆ. ಇನ್ನೂ ಕೆಲ ತಿಂಗಳು ಇಲ್ಲೇ ಇದ್ದು ಭೂಮಿಗೆ ಮರಳುತ್ತೇವೆ’ ಎಂದು ಹೇಳಿದರು.