ಭುವನೇಶ್ವರ: ಮೃತ ಸಹೋದರಿಯ ಹೆಸರಿನಲ್ಲಿ ಠೇವಣಿ ಇಟ್ಟಿದ್ದ 19,300 ರು. ತೆಗೆಯಲು ಒಡಿಶಾದ ಬುಡಕಟ್ಟು ವ್ಯಕ್ತಿಯೊಬ್ಬ ಆಕೆಯ ಅಸ್ಥಿಪಂಜರವನ್ನೇ ಬ್ಯಾಂಕಿಗೆ ತಂದಿರುವ ಮನಮಿಡಿಯುವ ಘಟನೆ ಒಡಿಶಾದ ಕಿಯೋಂಜಾರ್ ಜಿಲ್ಲೆಯ ಒಡಿಶಾ ಗ್ರಾಮೀಣ ಬ್ಯಾಂಕಿನ ಮಾಲಿಪೋಸಿ ಶಾಖೆಯಲ್ಲಿ ನಡೆದಿದೆ. ಘಟನೆಗೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಇದು ತಪ್ಪು ತಿಳುವಳಿಕೆಯಿಂದ ಆಗಿದ್ದು ಎಂದು ಬ್ಯಾಂಕ್‌ ಸ್ಪಷ್ಟಪಡಿಸಿದೆ.

‘ಕಾಕ್ರಾ ಮುಂಡಾ ಎಂಬಾಕೆ 2 ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಆಕೆಗೆ ಮಕ್ಕಳಿರಲಿಲ್ಲ. ಹಾಗಾಗಿ ಆಕೆಯ ಖಾತೆಯಲ್ಲಿ ಉಳಿದಿರುವ 19,300 ರು. ಪಡೆಯಲು ಅವರ ಸಹೋದರ ಜೀತು ಮುಂಡಾ ಬ್ಯಾಂಕ್‌ಗೆ ತೆರಳಿದ್ದರು. ಆಗ ಸಿಬ್ಬಂದಿ, ಖಾತೆ ಯಾರ ಹೆಸರಿನಲ್ಲಿ ಇದೆಯೋ ಅವರು ಹಾಜರಿರಬೇಕು, ಇಲ್ಲವೇ ಸಾವಿಗೆ ಪುರಾವೆ ಒದಗಿಸಬೇಕು ಎಂದಿದ್ದಾರೆ. ಅನಕ್ಷರಸ್ಥರಾಗಿದ್ದ ಜೀತು ಯಾವ ದಾಖಲೆಯೂ ಇರಲಿಲ್ಲ. ಅಲ್ಲದೆ, ಬ್ಯಾಂಕ್‌ನವರು ಆತನಿಗೆ ಅರ್ಥವಾಗುವಂತೆ ವಿವರಿಸಿರಲಿಲ್ಲ’ ಎಂದು ಪೊಲೀಸರು ಹೇಳಿದ್ದಾರೆ.

ಹೀಗಾಗಿ ಬೇರೆ ದಾರಿ ಕಾಣದೆ ಜೀತು ಸೋಮವಾರ ಊರಿನ ಸ್ಮಶಾನಕ್ಕೆ ಹೋಗಿ, ಸಹೋದರಿಯ ಅಸ್ಥಿಪಂಜರವನ್ನು ಹೊರತೆಗೆದು, ಬಟ್ಟೆಯಲ್ಲಿ ಸುತ್ತಿ 3 ಕಿ.ಮೀ ದೂರದಲ್ಲಿರುವ ಬ್ಯಾಂಕ್‌ಗೆ ನಡೆದೇ ಸಾಗಿದ್ದಾರೆ. ಇದರ ವಿಡಿಯೋ ವೈರಲ್‌ ಆಗಿದ್ದು, ಬ್ಯಾಂಕಿನವರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.


ಅತ್ತ ಸಚಿವ ಸುರೇಶ್‌ ಪೂಜಾರಿ ಪ್ರತಿಕ್ರಿಯಿಸಿ, ಬ್ಯಾಂಕಿನವರ ಈ ಅಮಾನವೀಯ ವರ್ತನೆಯ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಭರವಸೆ ಇತ್ತಿದ್ದಾರೆ. ಸಿಎಂ ಮೋಹನ್‌ ಚರಣ್‌ ಮಾಂಝಿ ಅವರ ಕ್ಷೇತ್ರದಲ್ಲಿ ಈ ಘಟನೆ ನಡೆದಿರುವ ಕಾರಣ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಅಸಮಾಧಾನ ಹೊರಹಾಕಿದೆ.

ಬ್ಯಾಂಕ್‌ ಸ್ಪಷ್ಟನೆ:

ಬ್ಯಾಂಕ್‌ ಸಿಬ್ಬಂದಿಯ ವರ್ತನೆಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಅದರ ಪ್ರಾಯೋಜಕನಾಗಿರುವ ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ ಪ್ರತಿಕ್ರಿಯಿಸಿದ್ದು, ‘ಸೋದರಿ ಮೃತಪಟ್ಟಿರುವ ಬಗ್ಗೆ ಆ ವ್ಯಕ್ತಿ ತಿಳಿಸಿದಾಗ ನಮ್ಮ ಸಿಬ್ಬಂದಿ ಮರಣ ಪ್ರಮಾಣಪತ್ರ ತರುವಂತೆ ಕೇಳಿರುವರೇ ಹೊರತು ಆಕೆಯನ್ನೇ ಕರೆತನ್ನಿ ಎಂದಿರಲಿಲ್ಲ’ ಎಂದು ಸ್ಪಷ್ಟನೆ ನೀಡಿದೆ. 

ಆಗಿದ್ದೇನು?

- ಒಡಿಶಾದ ಕಾಕ್ರಾ ಮುಂಡಾ ಎಂಬಾಕೆ 2 ತಿಂಗಳ ಹಿಂದೆ ಸಾವು

- ಆಕೆಯ ಬ್ಯಾಂಕ್‌ ಖಾತೆಯಲ್ಲಿ 19,300 ರು. ಠೇವಣಿ ಇತ್ತು

- ಆಕೆಗೆ ಮಕ್ಕಳಿರದ ಕಾರಣ, ಹಣಕ್ಕಾಗಿ ಸೋದರನಿಂದ ಬೇಡಿಕೆ

- ಮರಣಪತ್ರದ ಬದಲು, ಸಾವಿನ ಸಾಕ್ಷ್ಯ ಕೊಡಿ ಎಂದ ಬ್ಯಾಂಕ್‌

- ದಾಖಲೆ ಇಲ್ಲದ ಕಾರಣ ಅಸ್ತಿಪಂಜರ ಹೊರತೆಗೆದ ಜೀತು

- ಸ್ಕೆಲಿಟನ್‌ ಹಿಡಿದು ಬ್ಯಾಂಕ್‌ಗೆ 3 ಕಿ.ಮೀ. ನಡೆದ ಸೋದರ

- ಬ್ಯಾಂಕ್‌ ನಡೆಗೆ ವ್ಯಾಪಕ ಜನಾಕ್ರೋಶ, ಬಳಿಕ ಬ್ಯಾಂಕ್ ಸ್ಪಷ್ಟನೆ

- ಮರಣ ಪ್ರಮಾಣಪತ್ರ ತರಲು ಕೇಳಲಾಗಿತ್ತು: ಬ್ಯಾಂಕ್‌ ಹೇಳಿಕೆ