ಆಪ್‌ ತೊರೆದು ಬಿಜೆಪಿ ಸೇರಿದ್ದ ರಾಜ್ಯಸಭೆ ಸದಸ್ಯರಾದ ರಾಘವ್ ಚಡ್ಢಾ, ಹರ್ಭಜನ್ ಸಿಂಗ್‌ ಸೇರಿದಂತೆ 7 ಮಂದಿಯ ಬಿಜೆಪಿ ಜತೆಗಿನ ವಿಲೀನವನ್ನು ಉಪರಾಷ್ಟ್ರಪತಿ, ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್‌ ಅಂಗೀಕರಿಸಿದ್ದಾರೆ. ಈ ಮೂಲಕ ಸಂಸತ್‌ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯ ಬಲ 113ಕ್ಕೆ ಏರಿಕೆಯಾಗಿದ್ದರೆ, ಆಪ್‌ನ ಬಲ 3ಕ್ಕೆ ಕುಸಿದಿದೆ.

 ನವದೆಹಲಿ: ಆಪ್‌ ತೊರೆದು ಬಿಜೆಪಿ ಸೇರಿದ್ದ ರಾಜ್ಯಸಭೆ ಸದಸ್ಯರಾದ ರಾಘವ್ ಚಡ್ಢಾ, ಹರ್ಭಜನ್ ಸಿಂಗ್‌ ಸೇರಿದಂತೆ 7 ಮಂದಿಯ ಬಿಜೆಪಿ ಜತೆಗಿನ ವಿಲೀನವನ್ನು ಉಪರಾಷ್ಟ್ರಪತಿ, ರಾಜ್ಯಸಭೆಯ ಸಭಾಪತಿ ಸಿ.ಪಿ. ರಾಧಾಕೃಷ್ಣನ್‌ ಅಂಗೀಕರಿಸಿದ್ದಾರೆ. ಈ ಮೂಲಕ ಸಂಸತ್‌ ಮೇಲ್ಮನೆಯಲ್ಲಿ ಬಿಜೆಪಿ ಸದಸ್ಯ ಬಲ 113ಕ್ಕೆ ಏರಿಕೆಯಾಗಿದ್ದರೆ, ಆಪ್‌ನ ಬಲ 3ಕ್ಕೆ ಕುಸಿದಿದೆ.

ಶುಕ್ರವಾರವಷ್ಟೇ ಆಪ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದ 7 ಸಂಸದರನ್ನು ರಾಜ್ಯಸಭೆಯಲ್ಲೂ ಬಿಜೆಪಿ ಸದಸ್ಯರಾಗಿ ಪರಿಗಣಿಸುವಂತೆ ಬಿಜೆಪಿ, ರಾಜ್ಯಸಭಾಧ್ಯಕ್ಷರಿಗೆ ಮನವಿ ಮಾಡಿತ್ತು.

ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಪ್ರತಿಕ್ರಿಯಿಸಿ ‘ ರಾಜ್ಯಸಭೆಯ ಗೌರವಾನ್ವಿತ ಅಧ್ಯಕ್ಷ ಸಿ.ಪಿ. ರಾಧಾಕೃಷ್ಣನ್ 7 ಆಪ್‌ ಸಂಸದರ ವಿಲೀನವನ್ನು ಒಪ್ಪಿಕೊಂಡಿದ್ದಾರೆ. ಅವರು ತುಕ್ಡೆ- ತುಕ್ಡೆ ಇಂಡಿಯಾ ಕೂಟಕ್ಕೆ ವಿದಾಯ ಹೇಳಿದ್ದಾರೆ. ಬಿಜೆಪಿ ಸಂಸದರಾಗಿದ್ದಾರೆ‘ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಯಾರ್ಯಾರು ಸೇರ್ಪಡೆ?:

ರಾಘವ್ ಚಡ್ಢಾ, ಅಶೋಕ್‌ ಮಿತ್ತಲ್‌, ಹರ್ಭಜನ್‌ ಸಿಂಗ್‌, ಸಂದೀಪ್ ಪಾಠಕ್‌, ವಿಕ್ರಮಜಿತ್ ಸಾಹ್ನಿ, ಸ್ವಾತಿ ಮಲಿವಾಲ್‌, ರಾಜೀಂದರ್‌ ಗುಪ್ತಾ, ಬಿಜೆಪಿ ಸೇರಿದ ಸಂಸದರಾಗಿದ್ದಾರೆ.

ರಾಜ್ಯಸಭೆಯಲ್ಲಿ ಎನ್‌ಡಿಎ ಬಲ 148ಕ್ಕೆ

7 ಆಪ್‌ ಸಂಸದರ ಸೇರ್ಪಡೆಯೊಂದಿಗೆ ರಾಜ್ಯಸಭೆಯಲ್ಲಿ ಎನ್‌ಡಿಎ ಬಲ 148ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸಂಸತ್ತಿನ ಮೇಲ್ಮನೆಯಲ್ಲಿ 3ನೇ 2ರಷ್ಟು ಬಹುಮತಕ್ಕೆ (163) ಎನ್‌ಡಿಎ ಇನ್ನಷ್ಟು ಹತ್ತಿರವಾಗಿದೆ. ಈ ವರ್ಷಾಂತ್ಯಕ್ಕೆ ರಾಜ್ಯಸಭೆಯಲ್ಲಿ 30 ಸ್ಥಾನ ಖಾಲಿಯಾಗಲಿದ್ದು, ಆಗ ಬಿಜೆಪಿಗೆ ಮತ್ತೆ 5 ಸ್ಥಾನ ಸಿಗುವ ನಿರೀಕ್ಷೆ ಇದೆ. ಇದು ಮಹತ್ವದ ಮಸೂದೆಗಳಿಗೆ ಅಂಗೀಕಾರ ಪಡೆಯಲು ಕೂಟಕ್ಕೆ ನೆರವಾಗಲಿದೆ.