ಸಾರಾಂಶ
ಅಯೋಧ್ಯೆ: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಇದೇ ಜ.22ರಂದು ಉದ್ಘಾಟನೆಯಾಗಲಿರುವ ನೂತನ ರಾಮಮಂದಿರದ ಮುಖ್ಯ ವಿಗ್ರಹವಾಗಿ ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿದೆ.
ಇದರೊಂದಿಗೆ ಅರುಣ್ ಅವರತು ಕರ್ನಾಟಕಕ್ಕೆ ಮತ್ತೊಮ್ಮೆ ಹಿರಿಮೆ ತಂದುಕೊಡುವ ಜೊತೆಗೆ ಮತ್ತೊಮ್ಮೆ ಅಯೋಧ್ಯೆಗೆ ಕರ್ನಾಟಕದ ಬಲವಾದ ನಂಟು ಬೆಸೆದಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಯೋಧ್ಯೆ ರಾಮಮಂದಿರ ಟ್ರಸ್ಟಿ ಚಂಪತ್ ರಾಯ್, ‘3 ಶಿಲ್ಪಿಗಳು ಕೆತ್ತಿದ್ದ ವಿಗ್ರಹಗಳ ಪೈಕಿ ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ನಿರ್ಮಿಸಿದ ವಿಗ್ರಹವನ್ನು ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಪ್ರಸ್ತುತ 70 ವರ್ಷದಿಂದ ಇರುವ ಬಾಲರಾಮನ ಪ್ರತಿಮೆಯನ್ನೂ ಗರ್ಭಗುಡಿಯಲ್ಲೇ ಇರಿಸಲಾಗುತ್ತದೆ’ ಎಂದು ಹೇಳಿದರು.
‘ಪ್ರಾಣ ಪ್ರತಿಷ್ಠಾಪನೆಯ ವಿಗ್ರಹವು ಸುಮಾರು 150-200 ಕೆ.ಜಿ.ಗಳಷ್ಟು ಭಾರ ಇರಬಹುದೆಂದು ಅಂದಾಜಿಸಲಾಗಿದೆ. ಜ.18ರಂದು ದೇವಸ್ಥಾನದ ಗರ್ಭ ಗೃಹದಲ್ಲಿ ವಿಗ್ರಹವನ್ನು ಅದರ ಸ್ಥಾನದಲ್ಲಿ ಇರಿಸಲಾಗುತ್ತದೆ’ ಎಂದರು.
ಮೂವರ ನಡುವೆ ಇತ್ತು ಸ್ಪರ್ಧೆ: ರಾಮಮಂದಿರದ ವಿಗ್ರಹ ಕೆತ್ತಲು ರಾಮಮಂದಿರ ನಿರ್ಮಾಣ ಟ್ರಸ್ಟ್ ಮೈಸೂರಿನ ಅರುಣ್ ಯೋಗಿರಾಜ್, ಕರ್ನಾಟಕದ ಇಡುಗುಂಜಿಯ ಪ್ರಖ್ಯಾತ ಶಿಲ್ಪಿ ಕೆ.ಎಲ್.ಭಟ್ ಮತ್ತು ರಾಜಸ್ಥಾನ ಸತ್ಯನಾರಾಯಣ ಪಾಂಡೆ ಅವರನ್ನು ಆಯ್ಕೆ ಮಾಡಿತ್ತು.
ಈ ಪೈಕಿ ಅರುಣ್ ಮತ್ತು ಕೆ.ಎಲ್.ಭಟ್ ಅವರು ಕರ್ನಾಟಕದ ಹೆಗ್ಗಡದೇವನೆಕೋಟೆಯ ಶ್ರೇಷ್ಠ ಗುಣಮಟ್ಟದ ಕಪ್ಪುಕಲ್ಲಿನಲ್ಲಿ ಬಾಲರಾಮನ ವಿಗ್ರಹ ಕೆತ್ತಿದ್ದರೆ, ಪಾಂಡೆ ಅವರು ರಾಜಸ್ಥಾನದ ಬಿಳಿಯ ಬಣ್ಣದ ಕಲ್ಲಿನಲ್ಲಿ ಬಾಲರಾಮನ ವಿಗ್ರಹ ಕೆತ್ತಿದ್ದರು.
ಮಾನದಂಡಗಳೇನು?
ಹೀಗೆ ಕೆತ್ತಿದ ವಿಗ್ರಹಗಳ ಪೈಕಿ ಯಾವುದು ಬಾಲರಾಮನನ್ನು ಹೆಚ್ಚಾಗಿ ಹೋಲುತ್ತದೆ? ಯಾವುದು ಹೆಚ್ಚು ಆಕರ್ಷಕವಾಗಿದೆ? ಬಾಲರಾಮನ ಮುಗ್ಧತೆ ಅದರಲ್ಲಿದೆಯೇ? ಯಾವುದು ರಚನಾತ್ಮಕ ವಿನ್ಯಾಸ ಹೊಂದಿದೆ? ಬಾಲರಾಮನ ವಿಚಾರವನ್ನು ಅತ್ಯಂತ ಮನಮುಟ್ಟುವಂತೆ ಹೇಗೆ ಬಿಂಬಿಸುತ್ತದೆ?
ಕಲ್ಲಿನ ಗುಣಮಟ್ಟ ಯಾವುದು ಉತ್ಕೃಷ್ಟವಾಗಿದೆ? ಯಾವ ಮೂರ್ತಿಯ ಆಯುಷ್ಯ ಹೆಚ್ಚಿದೆ? ಶಿಲ್ಪಿ ಅದೆಷ್ಟು ಹಿರಿಮೆ ಹೊಂದಿದ್ದಾನೆ ಎಂಬುದನ್ನು ಆಧರಿಸಿ ಅವರು ಕೆತ್ತಿದ ವಿಗ್ರಹವನ್ನು ಆಯ್ಕೆ ಮಾಡಲಾಗುತ್ತದೆ ಎಂದು ಮೊದಲೇ ಘೋಷಿಸಲಾಗಿತ್ತು.
ಅದರಂತೆ ಮೂವರೂ ಶಿಲ್ಪಿಗಳು ತಮ್ಮದೇ ಆದ ಶೈಲಿಯಲ್ಲಿ ವಿಗ್ರಹ ಕೆತ್ತಿದ್ದರು. ಅತ್ಯಂತ ರಹಸ್ಯವಾಗಿರುವ ಮತ್ತು ಈವರೆಗೂ ಯಾರೂ ನೋಡದ ಈ ವಿಗ್ರಹಗಳನ್ನು ಕಳೆದ ವಾರ ತಜ್ಞರ ಸಮಿತಿಯೊಂದು ಪರಿಶೀಲನೆ ಮಾಡಿ, ದೇಗುಲದ ಮುಖ್ಯ ವಿಗ್ರಹ ಯಾವುದಾಗಬಹುದೆಂಬ ಶಿಫಾರಸು ಮಾಡಿತ್ತು.
ಆ ಶಿಫಾರಸು ಇದೀಗ ಬಹಿರಂಗವಾಗಿದ್ದು ಅರುಣ್ ಕೆತ್ತಿದ ಬಾಲರಾಮನ 51 ಇಂಚು ಎತ್ತರದ, ಕೈಯಲ್ಲಿ ಬಿಲ್ಲುಬಾಣ ಹೊಂದಿರುವ ಭಂಗಿಯಲ್ಲಿರುವ ಅತ್ಯಂತ ಆಕರ್ಷಕವಾದ ವಿಗ್ರಹವನ್ನು ಅಯೋಧ್ಯೆ ರಾಮಮಂದಿರದ ಮುಖ್ಯ ಮೂರ್ತಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ವಿಗ್ರಹ ಹೇಗಿದೆ?
5 ವರ್ಷದ ಬಾಲರಾಮನನ್ನು ಹೋಲುವ ವಿಗ್ರಹ 4.25 ಅಡಿ ಅಥವಾ 51 ಇಂಚು ಎತ್ತರ, 150-200 ಕೆಜಿ ಭಾರ ಇದೆ. ಬಾಲರಾಮನ ಕೈಯಲ್ಲಿ ಬಿಲ್ಲು ಬಾಣವಿದೆ.
ಎಚ್.ಡಿ.ಕೋಟೆ ಶಿಲೆ: ಬಾಲರಾಮ ಮೂರ್ತಿಯನ್ನು ಕೆತ್ತಲು ಶಿಲ್ಪಿ ಅರುಣ್ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆ ತಾಲೂಕಿನಲ್ಲಿ ಸಿಗುವ ಪ್ರಸಿದ್ಧ ಕಪ್ಪುವರ್ಣದ ಕೃಷ್ಣ ಶಿಲೆಯನ್ನು ಬಳಸಿದ್ದರು.
ಅರುಣ್ ಹಿರಿಮೆ: ಉತ್ತರಾಖಂಡದ ನವೀಕೃತ ಕೇದಾರನಾಥ ದೇಗುಲದ ಬಳಿ ಸ್ಥಾಪಿಸಲಾಗಿರುವ ಶಂಕರಾಚಾರ್ಯರ ಸಮಾಧಿ ಸ್ಥಳದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾಚಾರ್ಯರ ಸುಂದರ ವಿಗ್ರಹ ಕೆತ್ತಿದ್ದು ಅರುಣ್.
ಜೊತೆಗೆ ದೆಹಲಿಯ ಇಂಡಿಯಾ ಗೇಟ್ ಬಳಿ ಅಳವಡಿಸಲಾದ ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಸುಂದರ ಪ್ರತಿಮೆ ಕೆತ್ತಿದ್ದು ಕೂಡಾ ಅರುಣ್.ಇಡೀ ಕುಟುಂಬ ಶಿಲ್ಪಿಗಳದ್ದು.
ಅರುಣ್ ಅವರ ಅಜ್ಜ ಬಸವಣ್ಣ ಶಿಲ್ಪಿ. ಇನ್ನು ಅರುಣ್ ಅವರ ತಂದೆ ಯೋಗಿ ರಾಜ್ ಕೂಡಾ ಪ್ರಖ್ಯಾತ ಶಿಲ್ಪಿ. ಇಡೀ ಕುಟುಂಬ 5 ದಶಕಗಳಿಂದ ಸುಂದರವಾದ ವಿಗ್ರಹಗಳನ್ನು ಕೆತ್ತುವ ಕೆಲಸದಲ್ಲಿ ತೊಡಗಿಸಿಕೊಂಡಿದೆ.