ಸಾರಾಂಶ
ಫಾಸ್ಟ್ಯಾಗ್ ಬಳಕೆದಾರರೇ ಗಮನಿಸಿ, ಬೇರೆ ಬೇರೆ ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಅಥವಾ ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಬಳಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ಅಭಿಯಾನವನ್ನು ಪ್ರಾರಂಭಿಸಿದೆ.
ನವದೆಹಲಿ: ಫಾಸ್ಟ್ಯಾಗ್ ಬಳಕೆದಾರರೇ ಗಮನಿಸಿ, ಬೇರೆ ಬೇರೆ ವಾಹನಗಳಿಗೆ ಒಂದೇ ಫಾಸ್ಟ್ಯಾಗ್ ಅಥವಾ ಒಂದೇ ವಾಹನಕ್ಕೆ ಹಲವು ಫಾಸ್ಟ್ಯಾಗ್ ಬಳಕೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ‘ಒಂದು ವಾಹನ, ಒಂದು ಫಾಸ್ಟ್‌ಟ್ಯಾಗ್’ ಅಭಿಯಾನವನ್ನು ಪ್ರಾರಂಭಿಸಿದೆ.
ಈ ಹಿನ್ನೆಲೆಯಲ್ಲಿ ಫಾಸ್ಟ್ಯಾಗ್ ಹೊಂದಿರುವ ವಾಹನ ಮಾಲೀಕರು. ಫಾಸ್ಟ್ಯಾಗ್ ನಿಷ್ಕ್ರಿಯಗೊಳ್ಳುವುದನ್ನು ತಪ್ಪಿಸಲು ಜ.31ರೊಳಗೆ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದೆ.
ಇದೇ ವೇಳೆ, ಇ-ಕೆವೈಸಿ ಭರ್ತಿಯ ಜತೆಗೆ ಜ.31ರೊಳಗೆ ತಮ್ಮ ಬಳಿ ಇರುವ ಹಲವು ಫಾಸ್ಟ್ಯಾಗ್‌ಗಳ ಪೈಕಿ ಇತ್ತೀಚೆಗೆ ಖರೀದಿಸಿದನ್ನು ಹೊರತುಪಡಿಸಿ ಉಳಿದದ್ದನ್ನು (ಇದ್ದರೆ) ಬ್ಯಾಂಕ್‌ಗೆ ಒಪ್ಪಿಸಬೇಕು.
ಬಳಿಕ ಗ್ರಾಹಕರ ಬಳಿ ಇರುವ ತೀರಾ ಇತ್ತೀಚಿನ ಫಾಸ್ಟ್ಯಾಗ್ ಹೊರತುಪಡಿಸಿ ಉಳಿದಿದ್ದೆಲ್ಲಾ ನಿಷ್ಕ್ರಿಯವಾಗುತ್ತದೆ. ಒಂದು ವೇಳೆ ಇ - ಕೆವೈಸಿ ಮಾಡಿಸದೇ ಇದ್ದರೆ ಫಾಸ್ಟ್ಯಾಗ್‌ನಲ್ಲಿ ಹಣ ಇದ್ದ ಹೊರತಾಗಿಯೂ ಅದು ಬಳಕೆಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿಯುನ್ನು ನೀವು ಫಾಸ್ಟ್ಯಾಗ್ ಪಡೆದುಕೊಂಡ ಬ್ಯಾಂಕ್‌ಗಳಿಗೆ ಹೋಗಿ ತಿಳಿಯಬಹುದು ಅಥವಾ ಟೋಲ್ ಪ್ಲಾಜಾಗೆ ಹೋಗಿ ಪಡೆಯಬಹುದು ಅಥವಾ ಫಾಸ್ಟ್ಯಾಗ್ ಟೋಲ್ ಫ್ರೀ ಸಹಾಯವಾಣಿಗೆ ಕರೆ ಮಾಡಬಹುದು ಎಂದು ಅದು ಸಲಹೆ ನೀಡಿದೆ.
ಈ ಕ್ರಮ ಏಕೆ?
ಇತ್ತೀಚೆಗೆ ಒಂದೇ ಫಾಸ್ಟ್ಯಾಗನ್ನು ಬೇರೆ ಬೇರೆ ವಾಹನಗಳಿಗೆ ಬಳಸುವುದು ಹಾಗೂ ಒಂದೇ ವಾಹನಕ್ಕೆ ಬೇರೆ ಬೇರೆ ಫಾಸ್ಟ್ಯಾಗ್ ಲಿಂಕ್ ಮಾಡುವ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಎನ್‌ಎಚ್ಎಐ ಬಿಗಿ ಕ್ರಮ ತೆಗೆದುಕೊಂಡಿದೆ. ‘
ಇದು ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ ಸಿಸ್ಟಂ ದಕ್ಷತೆಯನ್ನು ಹೆಚ್ಚಿಸಲು ಮತ್ತು ಟೋಲ್ ಪ್ಲಾಜಾಗಳಲ್ಲಿ ತಡೆರಹಿತ ಚಲನೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ’ ಎಂದು ಅದು ಹೇಳಿದೆ.
ಈಗಾಗಲೇ ದೇಶದಲ್ಲಿ 8 ಕೋಟಿ ಫಾಸ್ಟ್ಯಾಗ್ ಬಳಕೆದಾರರಿದ್ದಾರೆ ಹಾಗೂ ಶೇ.98ರಷ್ಟು ವಾಹನಗಳು ಫಾಸ್ಟ್ಯಾಗ್‌ಗೆ ಒಳಪಟ್ಟಿವೆ.
ಇ ಕೆವೈಸಿಗೆ ಏನೇನು ದಾಖಲೆ ಬೇಕು?
ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ಮತದಾರರ ಗುರುತಿನ ಚೀಟಿ, ಪಾನ್ ಸಂಖ್ಯೆ, ಆಧಾರ್ ಸಂಖ್ಯೆ, ನರೇಗಾ ಅಥವಾ ಸರ್ಕಾರಿ ದಾಖಲೆಗಳು, ವಾಹನದ ನೋಂದಣಿ ಪ್ರಮಾಣಪತ್ರ.
ಬ್ಯಾಂಕ್‌ನಲ್ಲಿ ಇ - ಕೆವೈಸಿ ಹೇಗೆ?:
1) ಸಮೀಪದ ಬ್ಯಾಂಕ್‌ಗೆ ತೆರಳಿ
2) ಕೆವೈಸಿ ಫಾರ್ಮ್ ಕೇಳಿ ಪಡೆಯಿರಿ
3) ಫಾರ್ಮ್‌ನಲ್ಲಿ ಅಗತ್ಯ ಮಾಹಿತಿ ತುಂಬಿ
4) ಬ್ಯಾಂಕ್‌ಗೆ ಫಾರ್ಮ್ ಸಲ್ಲಿಕೆ ಮಾಡಿ