ಸಾರಾಂಶ
ನಲ್ಲೂರು: ಆಂಧ್ರಪ್ರದೇಶದಲ್ಲಿ ಎನ್‌ಡಿಎ ಬಹುಮತದಿಂದ ಅಧಿಕಾರಕ್ಕೆ ಬಂದಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ತಲಾ 1 ಲಕ್ಷ ರು.ಗಳ ಸರ್ಕಾರಿ ಸಹಾಯಧನ ನೀಡಲಾಗುವುದು ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಘೋಷಿಸಿದ್ಧಾರೆ.
ನಗರದಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಸಂವಾದ ನಡೆಸುತ್ತಾ, ‘ಟಿಡಿಪಿ ಅಧಿಕಾರದಲ್ಲಿದ್ದಾಗ ಮುಸ್ಲಿಮರ ಹಬ್ಬವೊಂದಕ್ಕೆ ನಾಡಹಬ್ಬದ ಸ್ಥಾನಮಾನ ನೀಡಲಾಗಿದೆ. ಜೊತೆಗೆ ನಿಯತ್ತು, ಧೈರ್ಯ ಹಾಗೂ ನಂಬಿಕೆಗೆ ಹೆಸರಾಗಿರುವ ಮುಸ್ಲಿಂ ಸಮುದಾಯಕ್ಕೆ ಎಂದಿಗೂ ಅನ್ಯಾಯವಾಗಲು ಟಿಡಿಪಿ ಬಿಟ್ಟಿಲ್ಲ. ಹಾಗೆಯೇ ಈ ಬಾರಿಯೂ ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಹಜ್ ಯಾತ್ರೆಗೆ ತಲಾ 1 ಲಕ್ಷ ರು. ಸಹಾಯಧನ ನೀಡಲಾಗುವುದು. ಆದರೆ ಹಾಲಿ ಅಧಿಕಾರದಲ್ಲಿರುವ ಜಗನ್ ನೇತೃತ್ವದ ವೈಎಸ್‌ಆರ್ ಪಕ್ಷ ಮುಸ್ಲಿಮರನ್ನು ನಿರ್ಲಕ್ಷಿಸಿರುವುದಕ್ಕೆ ಕಳೆದ ಐದು ವರ್ಷಗಳಲ್ಲಿ ಒಂದೂ ಮಸೀದಿಯನ್ನು ಕಟ್ಟದಿರುವುದೇ ನಿದರ್ಶನ’ ಎಂದು ಆರೋಪಿಸಿದ್ದಾರೆ.
ಆಂಧಪ್ರದೇಶದಲ್ಲಿ ಮೇ.13ರಂದು ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿದಿವೆ.