ಸಾರಾಂಶ
ಶ್ರೀನಗರ: ಭಾರತವನ್ನು ಪರಮಾಣು ಬಾಂಬ್ ದಾಳಿಯ ಬ್ಲ್ಯಾಕ್‌ಮೇಲ್‌ಗೆ ಗುರಿ ಮಾಡುತ್ತಿರುವ ಪಾಕಿಸ್ತಾನ ವಿರುದ್ಧ ಕಿಡಿಕಾರಿರುವ ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ‘ರಾಕ್ಷಸ ದೇಶದ ಬಳಿ ಪರಮಾಣು ಅಸ್ತ್ರ ಇರುವುದು ಸುರಕ್ಷಿತವೇ’ ಎಂದು ಜಾಗತಿಕ ಸಮುದಾಯವನ್ನು ಪ್ರಶ್ನಿಸಿದ್ದಾರೆ. ಇದೇ ವೇಳೆ ಪಾಕಿಸ್ತಾನವನ್ನು ಪರಮಾಣು ಬಾಂಬ್ ಇರುವ ಭಿಕ್ಷುಕ ದೇಶ ಎಂದು ವ್ಯಂಗ್ಯವಾಡಿದ್ದಾರೆ.
ಗುರುವಾರ ಕಾಶ್ಮೀರದ ಎಲ್‌ಒಸಿಗೆ ಭೇಟಿ ನೀಡಿ ಸೈನಿಕರ ಜತೆ ಸಂವಾದ ನಡೆಸಿದ ಸಿಂಗ್, ಪಾಕಿಸ್ತಾನ ಎಲ್ಲಿ ನಿಲ್ಲುತ್ತದೆಯೋ ಅಲ್ಲಿಂದಲೇ ಭಿಕ್ಷುಕರ ಸಾಲು ಆರಂಭವಾಗುತ್ತದೆ. ನಾವು ಬಡ ದೇಶಗಳಿಗೆ ನೆರವಾಗಲೆಂದು ಐಎಂಎಫ್‌ಗೆ ಸಾಲ ನೀಡುತ್ತೇವೆ. ಮತ್ತೊಂದೆಡೆ ಪಾಕಿಸ್ತಾನ ಸಾಲದ ಹಣಕ್ಕಾಗಿ ಐಎಂಎಫ್ ಮುಂದೆ ಅಂಗಲಾಚುತ್ತದೆ’ ಎಂದು ಹೇಳಿದ್ದಾರೆ.ವಿವರ 7
ಕರಾಚಿ: ಭಾರತದ ವಿರುದ್ಧ ಮಂಡಿಯೂರಿ ಗರ್ವಭಂಗ ಅನುಭವಿಸಿದರೂ ಪಾಕಿಸ್ತಾನದ ಬುದ್ಧಿ ಮಾತ್ರ ನೆಟ್ಟಗಾಗುವಂತೆ ಕಾಣುತ್ತಿಲ್ಲ. ಭಾರತದ ‘ಆಪರೇಷನ್ ಸಿಂದೂರ’ ಕಾರ್ಯಾಚರಣೆ ವೇಳೆ ಧ್ವಂಸಗೊಂಡಿದ್ದ ಮುರೀದ್‌ಕೆಯಲ್ಲಿನ ಭಯೋತ್ಪಾದನಾ ಶಿಬಿರವನ್ನು ಸರ್ಕಾರದಿಂದಲೇ ಮರಳಿ ನಿರ್ಮಿಸಿಕೊಡುವುದಾಗಿ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಭರವಸೆ ನೀಡಿದೆ. ಈ ಮೂಲಕ ಭಯೋತ್ಪಾದನೆಗೆ ತನ್ನ ಬೆಂಬಲ ಎಂದಿಗೂ ನಿಲ್ಲುವುದಿಲ್ಲ ಎಂದು ಮತ್ತೊಮ್ಮೆ ಸಾರಿ ಹೇಳಿದೆ.
ಶೆಹಬಾಜ್ ಸರ್ಕಾರದಲ್ಲಿ ಸಚಿವರಾಗಿರುವ ರಾಣಾ ತನ್ವೀರ್ ಹುಸೇನ್, ಗುರುವಾರ ತಮ್ಮ ಆಪ್ತರೊಡಗೂಡಿ ಧ್ವಂಸಗೊಂಡ ಮುರೀದ್‌ಕೆ ಕಟ್ಟಡದ ಸ್ಥಳಕ್ಕೆ ಭೇಟಿದ್ದರು. ಅಲ್ಲಿ ಲಷ್ಕರ್ ಎ ತೊಯ್ಬಾ ಉಗ್ರ ಇಕ್ಬಾಲ್ ಹಶ್ಮಿಯನ್ನು ಭೇಟಿಯಾಗಿದ್ದ ಹುಸೇನ್, ಸರ್ಕಾರದ ಹಣದಲ್ಲೇ ಮುರೀದ್‌ಕೆ ಮಸೀದಿಯನ್ನು ಮರು ನಿರ್ಮಾಣ ಮಾಡಿಕೊಡುವ ಭರವಸೆ ನೀಡಿದ್ದಾರೆ. ಜೊತೆಗೆ ಪ್ರಧಾನಿ ಶೆಹಬಾಜ್ ಮತ್ತು ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಕೂಡ ಇದಕ್ಕೆ ಬೆಂಬಲ ನೀಡಲಿದ್ದಾರೆ ಎಂಬ ಭರವಸೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಸರ್ಕಾರ ನಡೆಸಲೆಂದೇ ಐಎಂಎಫ್‌ನಿಂದ ಅಂಗಲಾಚಿ ಸಾಲದ ಮೊತ್ತದ ಮೊದಲ ಕಂತಿನ ಹಣವನ್ನು ಪಾಕಿಸ್ತಾನ ಪಡೆದುಕೊಂಡಿತ್ತು. ಇದೀಗ ಆ ಹಣವನ್ನೇ ಸರ್ಕಾರ, ಉಗ್ರರ ಕಲ್ಯಾಣಕ್ಕೆ ಬಳಸುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿಬಂದಿದೆ.
ಕಳೆದ ಮೇ 7ರಂದು ಭಾರತ ಮುರೀದ್‌ಕೆ ಸೇರಿದಂತೆ ಉಗ್ರರಿಗೆ ಸೇರಿದ 9 ಸ್ಥಳಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಧ್ವಂಸಗೊಳಿಸಿತ್ತು. ಇದರಲ್ಲಿ 100ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದರು. ಮುರೀದ್‌ಕೆ ಅನ್ನು ಮಸೀದಿ ಎಂದು ಪಾಕಿಸ್ತಾನ ಹೇಳಿದ್ದರೂ, ಅದನ್ನು ಲಷ್ಕರ್ ಸಂಘಟನೆ ತನ್ನ ಬಹುದೊಡ್ಡ ಉಗ್ರ ತರಬೇತಿ ಕೇಂದ್ರವನ್ನಾಗಿ ಮಾಡಿಕೊಂಡಿತ್ತು ಎಂಬ ಮಾಹಿತಿಯನ್ನು ಭಾರತೀಯ ಗುಪ್ತಚರ ಸಂಸ್ಥೆಗಳು ಕಲೆ ಹಾಕಿದ್ದವು. ಜೊತೆಗೆ ಮುರೀದ್‌ಕೆ ಮಸೀದಿ ಭಯೋತ್ಪಾದನೆಯ ಫ್ಯಾಕ್ಟರಿ ಎಂಬ ಕುಖ್ಯಾತಿಯನ್ನೂ ಹೊಂದಿತ್ತು. ಹೀಗಾಗಿ ಅದನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಮಸೀದಿ ಕಟ್ಟಡ ಬಹುತೇಕ ಧ್ವಂಸವಾಗಿತ್ತು.
ಮಾತಿಗೆ ತಪ್ಪಿದ ಪಾಕ್:
9 ಉಗ್ರ ನೆಲೆಗಳು ಮತ್ತು ವಾಯುನೆಲೆಗಳ ಮೇಲೆ ಭಾರತ ನಡೆಸಿದ ದಾಳಿಯಿಂದ ಕಂಗೆಟ್ಟಿದ್ದ ಪಾಕಿಸ್ತಾನವು ಭಾರತದ ಮುಂದೆ ಕದನ ವಿರಾಮಕ್ಕೆ ಅಂಗಲಾಚಿತ್ತು. ಈ ವೇಳೆ ಮುಂದಿನ ದಿನಗಳಲ್ಲಿ ತಾನು ಭಯೋತ್ಪಾದನೆಗೆ ಬೆಂಬಲ ನೀಡುವುದಿಲ್ಲ ಎಂದು ಭರವಸೆ ನೀಡಿತ್ತು. ಈ ವಿಷಯವನ್ನು ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ, ವಿಶ್ವವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲೂ ಹೇಳಿದ್ದರು.
ಆದರೆ ಭರವಸೆ ನೀಡಿದ ಮೂರೇ ದಿನದಲ್ಲಿ ಅದನ್ನು ಉಲ್ಲಂಘಿಸಿರುವ ಪಾಕಿಸ್ತಾನ ನೇರಾ ನೇರ ಲಷ್ಕರ್ ಉಗ್ರರಿಗೆ ತನ್ನ ಹಣಕಾಸಿನ ನೆರವನ್ನು ಘೋಷಿಸಿದೆ. ಮುಂದಿನ ದಿನಗಳಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವ ಪಾಕಿಸ್ತಾನದ ಯಾವುದೇ ನಡೆಯನ್ನು ಯುದ್ಧವೆಂದೇ ಪರಿಗಣಿಸಲಾಗುವುದು ಎಂದು ಪ್ರಧಾನಿ ಮೋದಿ ಎಚ್ಚರಿಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.