ಸಾರಾಂಶ
ಶಕ್ತಿ (ಎನರ್ಜಿ) ಉತ್ಪಾದನೆಗಾಗಿ ಚೀನಾ ಕೈಗೊಂಡಿರುವ ಪರಮಾಣು ಸಮ್ಮಿಳನ ಪ್ರಯೋಗದ ಭಾಗವಾಗಿ ಸೃಷ್ಟಿಸಲಾಗಿರುವ ‘ಕೃತಕ ಸೂರ್ಯ’ನ ಮೇಲಿನ ಶಾಖವು ಸತತ 1 ಸಾವಿರ ಸೆಕೆಂಡುಗಳ ಕಾಲ (17 ನಿಮಿಷ) 100 ದಶಲಕ್ಷ ಡಿಗ್ರಿ ತಾಪಮಾನದ ಸ್ಥಿರತೆ ಕಾಯ್ದುಕೊಂಡಿದೆ.
ಬೀಜಿಂಗ್: ಶಕ್ತಿ (ಎನರ್ಜಿ) ಉತ್ಪಾದನೆಗಾಗಿ ಚೀನಾ ಕೈಗೊಂಡಿರುವ ಪರಮಾಣು ಸಮ್ಮಿಳನ ಪ್ರಯೋಗದ ಭಾಗವಾಗಿ ಸೃಷ್ಟಿಸಲಾಗಿರುವ ‘ಕೃತಕ ಸೂರ್ಯ’ನ ಮೇಲಿನ ಶಾಖವು ಸತತ 1 ಸಾವಿರ ಸೆಕೆಂಡುಗಳ ಕಾಲ (17 ನಿಮಿಷ) 100 ದಶಲಕ್ಷ ಡಿಗ್ರಿ ತಾಪಮಾನದ ಸ್ಥಿರತೆ ಕಾಯ್ದುಕೊಂಡಿದೆ. ಈ ಮೂಲಕ 2023ರಲ್ಲಿ 403 ಸೆಕೆಂಡುಗಳ ಕಾಲ ಈ ಸಾಧನೆ ಮಾಡಿದ ತನ್ನದೇ ದಾಖಲೆಯನ್ನು ಚೀನಾ ಮುರಿದಿದೆ.
ಈ ಕುರಿತು ಮಾಹಿತಿ ನೀಡಿದ ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್‌ನ ಪ್ಲಾಸ್ಮಾ ಫಿಸಿಕ್ಸ್ ಸಂಸ್ಥೆಯ ನಿರ್ದೇಶಕ ಸಾಂಗ್ ಯುನ್ಟಾಒ, ‘ನಿರಂತರ ಶಕ್ತಿ ಉತ್ಪಾದನೆಗೆ ಅವಶ್ಯಕವಾಗಿರುವ ಪ್ಲಾಸ್ಮಾದ ಸತತ ಪರಿಚಲನೆಗೆ ಸಮ್ಮಿಳನ ಸಾಧನವು ಸಾವಿರಾರು ಸೆಕೆಂಡುಗಳ ಕಾಲ ಸ್ಥಿರವಾಗಿ ಕಾರ್ಯಾಚರಿಸಬೇಕು. ಇದನ್ನು ಸಾಧಿಸಿದ್ದೇವೆ. ಸಮ್ಮಿಳನ ಶಕ್ತಿಯನ್ನು ಬಳಕೆಗೆ ತರಲು ಅಂತಾರಾಷ್ಟ್ರೀಯ ಸಹಯೋಗ ವಿಸ್ತರಿಸಲು ಆಶಿಸಿದ್ದೇವೆ’ ಎಂದರು.ಅಂದಹಾಗೆ, ಪರಮಾಣು ಸಮ್ಮಿಳನ ಸ್ವಂತವಾಗಿ ಶಕ್ತಿಯನ್ನು ಸೃಷ್ಟಿಸಿ ಅದನ್ನು ಕಾಯ್ದುಕೊಳ್ಳಲು ಅಗತ್ಯವಾದ ಇಗ್ನೀಷನ್ (ದಹನ) ಪ್ರಕ್ರಿಯೆಯನ್ನು ಇನ್ನೂ ಆರಂಭಿಸಿಲ್ಲ.
ಚೀನಾ ಉದ್ದೇಶವೇನು?:ಹೈಡ್ರೋಜನ್ ಮತ್ತು ಡ್ಯೂಟೇರಿಯಮ್ ಅನಿಲಗಳನ್ನು ಇಂಧನವಾಗಿ ಬಳಸಿ, ವಿಜ್ಞಾನಿಗಳು ಸೂರ್ಯನಿಗೆ ಶಕ್ತಿ ನೀಡುವ ಸಮ್ಮಿಳನ ಪ್ರಕ್ರಿಯೆ ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಇದನ್ನು ಇಂಧನ ಮೂಲವಾಗಿ ಬಳಸುವ ಉದ್ದೇಶವಿದೆ.