ಸಾರಾಂಶ
ನವದೆಹಲಿ: ಸಿನಿಮಾ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಆಸ್ಕರ್‌ನ 2025ನೇ ಸಾಲಿನ ನಾಮನಿರ್ದೇಶನ ಪಟ್ಟಿ ಹೊರಬಿದ್ದಿದ್ದು, ಈ ಪಟ್ಟಿಯಲ್ಲಿ ಭಾರತದ ಕಿರುಚಿತ್ರ ಹಿಂದಿಯ ಅನುಜಾ ಅತ್ಯುತ್ತಮ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ನಾಮನಿರ್ದೇಶನ ಗೊಂಡಿದೆ.
ಈ ಕಿರು ಚಿತ್ರವನ್ನು ಆಡಮ್ ಜೆ ಗ್ರೇವ್ಸ್ ಮತ್ತು ಸುಚಿತ್ರಾ ಮಟ್ಟಾಯ್ ನಿರ್ದೇಶಿಸಿದ್ದಾರೆ. ಅನುಜಾ 8 ವರ್ಷದ ಪ್ರತಿಭಾನ್ವಿತ ಬಾಲಕಿಯ ಕಥೆಯಾಗಿದ್ದು, ಆಕೆ ತನ್ನ ಸಹೋದರಿಯೊಂದಿಗೆ ಶಿಕ್ಷಣ ಮತ್ತು ಕಾರ್ಖಾನೆಯ ಕೆಲಸದ ನಡುವೆ ಆಯ್ಕೆ ಮಾಡಿಕೊಳ್ಳಬೇಕಾಗಿರುವ ಕಥೆ. ಇದು ಇಬ್ಬರ ಭವಿಷ್ಯವನ್ನು ರೂಪಿಸುವ ಕಥಾ ಹಂದರವನ್ನು ಹೊಂದಿದೆ. ಇದರಲ್ಲಿ ಸಜ್ದಾ ಪಠಾಣ್ ಮತ್ತು ಅನನ್ಯ ಶಾನಭಾಗ್ ನಟಿಸಿದ್ದಾರೆ.
ಈ ಚಿತ್ರಕ್ಕೆ ಎರಡು ಬಾರಿ ಆಸ್ಕರ್ ಪ್ರಶಸ್ತಿ ವಿಜೇತ ನಿರ್ಮಾಪಕ ಗುನೀತ್ ಮೊಂಗಾ ಕಾರ್ಯನಿರ್ವಾಹಕ ನಿರ್ಮಾಪಕರಾಗಿದ್ದಾರೆ. ಹಾಲಿವುಡ್‌ನ ಖ್ಯಾತ ಬರಹಗಾರ ಮಿಂಡಿ ಜಾಲಿಗ್ ನಿರ್ಮಾಪಕರಾಗಿದ್ದು, ನಟಿ ಪ್ರಿಯಾಂಕಾ ಚೋಪ್ರಾ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.
97ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಮಾ.2 ರಂದು ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯಲಿದೆ.
ಲಾಸ್ ಏಂಜಲೀಸ್‌ನಲ್ಲಿ ಕಾಡ್ಗಿಚ್ಚಿನ ಕಾರಣಕ್ಕೆ ಈ ತಿಂಗಳ 17ರಂದು ನಡೆಯಬೇಕಿದ್ದ ನಾಮನಿರ್ದೇಶನ ಕಾರ್ಯಕ್ರಮವು ಮುಂದೂಡಲ್ಪಟ್ಟಿತ್ತು. ಆ ಬಳಿಕ ಜ.19ಕ್ಕೆ ನಿಗದಿಯಾಗಿತ್ತು. ಬಳಿಕ ಮತ್ತೆ ಮಂದೂಡಿಕೆಯಾಗಿ 23ರಂದು ಕಾರ್ಯಕ್ರಮ ನಡೆಯಿತು.
ಮಾರುತಿ ಶಾಕ್: ಫೆ.1ರಿಂದ ಕಾರು ದರ 32,500 ರು.ವರೆಗೆ ಏರಿಕೆ
ನವದೆಹಲಿ: ಭಾರತದಲ್ಲಿ ಅತಿದೊಡ್ಡ ಕಾರು ಮಾರುಕಟ್ಟೆ ಹೊಂದಿರುವ ಮಾರುತಿ ಸುಜು಼ಕಿ ಇಂಡಿಯಾವು ಕಾರು ಖರೀದಿದಾರರಿಗೆ ಶಾಕ್ ನೀಡಿದೆ. ವಿವಿಧ ಮಾದರಿಗಳಲ್ಲಿ 32,500 ರು.ಗಳವರೆಗೆ ಮಾರುತಿ ಕಾರುಗಳ ಬೆಲೆ ಏರಿಕೆಯಾಗಲಿವೆ. ಫೆ.1ರಿಂದಲೇ ಹೊಸ ದರಗಳು ಜಾರಿಗೊಳ್ಳಲಿವೆ ಎಂದು ಅದು ಗುರುವಾರ ಘೋಷಿಸಿದೆ. ಕಾರುಗಳ ತಯಾರಿಕೆ ಮತ್ತು ಕಾರ್ಯಾಚರಣಾ ವೆಚ್ಚಗಳು ಅಧಿಕವಾದ ಕಾರಣ ಬೆಲೆ ಏರಿಕೆ ಮಾಡುವುದಾಗಿ ಅದು ತಿಳಿಸಿದೆ. ಇತ್ತೀಚೆಗೆ ಜ,1ರಿಂದಲೂ ಅದು ಒಮ್ಮೆ ಬೆಲೆ ಘೋಷಣೆ ಮಾಡಿತ್ತು. ಒಂದೇ ತಿಂಗಳಲ್ಲಿ 2ನೇ ಬಾರಿ ದರ ಏರಿಸಿದೆ.
ಚಿನ್ನದ ಬೆಲೆ ದಾಖಲೆಯ ₹82,900ಕ್ಕೆ ನೆಗೆತ
ನವದೆಹಲಿ: ಭಾರತದಲ್ಲಿ ಬಂಗಾರದ ಬೆಲೆಯು ಮತ್ತೆ ಏರಿಕೆಯಾಗಿದ್ದು, ರಾಜಧಾನಿ ದೆಹಲಿಯಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ದರ 82,900 ರು.ಗೆ ಏರಿಕೆಯಾಗಿದೆ. ಆದರೆ 1 ಕೇಜಿ ಬೆಳ್ಳಿ ಬೆಲೆ ಮಾತ್ರ 500 ರು. ಇಳಿಕೆಯಾಗಿ, 94 ಸಾವಿರ ರು. ದಾಖಲಿಸಿದ.ಇದೇ ವೇಳೆ, ಬೆಂಗಳೂರಲ್ಲಿ ಶುದ್ಧ ಚಿನ್ನದ ದರ 10 ಗ್ರಾಂಗೆ 84,560 ರು. ದಾಖಲಾಗಿದ್ದರೆ ಆಭರಣ ಚಿನ್ನದ ಬೆಲೆ 10 ಗ್ರಾಂಗೆ 77,500 ರು.ನಷ್ಟು ದಾಖಲಾಗಿದೆ. ಬೆಳ್ಳಿ ಬೆಲೆ 1 ಕೇಜಿಗೆ 96,400 ರು.ಗೆ ತಲುಪಿದೆ.
ಚಿನ್ನದ ಬೆಲೆಯು ಸತತ 7ನೇ ಬಾರಿ ಏರಿಕೆಯಾಗಿದ್ದು, 7 ವ್ಯಾವಹಾರಿಕ ದಿನದಲ್ಲಿ 2,320 ರು. ಹೆಚ್ಚಿದೆ. ದೇಶದೊಳಗಿನ ಚಿಲ್ಲರೆ ಮಾರಾಟಗಾರರು, ಚಿನ್ನದ ಮಳಿಗೆಗಳಿಂದ ಒದಗಿಬಂದಿರುವ ಬೇಡಿಕೆಯಿಂದಾಗಿ ಬೆಲೆ ಏರಿಕೆಯಾಗಿದೆ. 1 ವರ್ಷದ ಕೆಳಗೆ 10 ಗ್ರಾಂಗೆ 62,720 ರು. ಇದ್ದ ಬೆಲೆ 82,900 ರು.ಗೆ ಹೆಚ್ಚಿದೆ. ಈ ಮೂಲಕ ಒಂದೇ ವರ್ಷದಲ್ಲಿ ಬಂಗಾರವು 20,180 ರು. (ಶೇ.32.17) ಹೆಚ್ಚಿದೆ.
ಟೀ ವ್ಯಾಪಾರಿಯಿಂದಲೇ ರೈಲು ಬೆಂಕಿ ವದಂತಿ
ಜಲಗಾಂವ್: ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಸಂಭವಿಸಿದ ಭೀಕರ ರೈಲು ದುರಂತಕ್ಕೆ ಚಹಾ ಮಾರುವ ವ್ಯಕ್ತಿಯು, ‘ಬೆಂಕಿ ಹೊತ್ತಿಕೊಂಡಿದೆ’ ಎಂದು ಹಬ್ಬಿಸಿದ ವದಂತಿಯೇ ಕಾರಣ. ಆತನೇ ರೈಲಿನ ಅಲಾರಾಂ ಚೈನ್ ಎಳೆದಿದ್ದ ಎಂದು ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಹೇಳಿದ್ದಾರೆ.ಗುರುವಾರ ಮಾತನಾಡಿದ ಅವರು, ‘ಟೀ ವ್ಯಾಪಾರಿಯ ಕೂಗಿನಿಂದ ಗಾಬರಿಗೊಂಡ ಪ್ರಯಾಣಿಕರು ರೈಲಿನಿಂದ ಹೊರ ಬಂದು ಪಕ್ಕದ ಹಳಿ ಮೇಲೆ ನಿಂತರು.ಆಗ ಆ ಹಳಿ ಮೇಲೆ ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ಬಂದು ಹರಿಯಿತು’ ಎಂದರು,
ಈ ನಡುವೆ, ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 13ಕ್ಕೇರಿಯಾಗಿದ್ದು, ಮೃತ ಕುಟಂಬಗಳಿಗೆ ರೈಲ್ವೆ ಇಲಾಖೆ 1.5 ಲಕ್ಷ ರು. ಪರಿಹಾರ ಘೋಷಿಸಿದೆ.
ಅಮೆರಿಕದಲ್ಲಿ ಮತ್ತೆ ಕಾಡ್ಗಿಚ್ಚು
ಕ್ಯಾಲಿಫೋರ್ನಿಯಾ: ಅಮೆರಿಕದಲ್ಲಿ ಜ.7ರಂದು ಹತ್ತಿಕೊಂಡ ಕಾಡ್ಗಿಚ್ಚಿನ ಕರಾಳತೆ ಮಾಸುವ ಮುನ್ನವೇ ಉತ್ತರ ಲಾಸ್ ಏಂಜಲೀಸ್ ಮತ್ತೆ ಹೊತ್ತಿ ಉರಿಯತೊಡಗಿದೆ.
ಬುಧವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಬೆಂಕಿ ಒಂದೇ ದಿನದಲ್ಲಿ 16 ಚದರ ಮೈಲಿಗೆ ವಿಸ್ತರಿಸಿದ್ದು, 50 ಸಾವಿರ ಜನರಿಗೆ ಎಚ್ಚರಿಕೆ ರವಾನಿಸಿ, ಸ್ಥಳಾಂತರಕ್ಕೆ ಆದೇಶಿಸಲಾಗಿದೆ. ಈವರೆಗೆ ಯಾವುದೇ ಜೀವ ಅಥವಾ ಆಸ್ತಿ ಹಾನಿ ವರದಿಯಾಗಿಲ್ಲ.ಈ ಬೆಂಕಿಯು ಕಳೆದ ಬಾರಿ ಕಾಡ್ಗಿಚ್ಚು ಕಾಣಿಸಿಕೊಂಡ ಪ್ರದೇಶದಿಂದ 40 ಮೈಲು ದೂರದಲ್ಲಿ ಹತ್ತಿಕೊಂಡಿದ್ದು, ಗಾಳಿಯ ವೇಗ ಕಡಿಮೆಯಿದ್ದ ಕಾರಣ ವಿಮಾನಗಳ ಮೂಲಕ ಶೇ.14 ಬೆಂಕಿಯನ್ನು ಬುಧವಾರ ರಾತ್ರಿಯೊಳಗೆ ನಂದಿಸಲಾಗಿತ್ತು. ಮಧ್ಯಾಹ್ನ ಪ್ರತಿ ಗಂಟೆಗೆ 67 ಕಿ.ಮೀ. ಇದ್ದ ಗಾಳಿಯ ವೇಗ ರಾತ್ರಿ ಪ್ರತಿ ಗಂಟೆಗೆ 105 ಕಿ.ಮೀ. ವೇಗ ತಲುಪಿತ್ತು ಎಂದು ಹವಾಮಾನಶಾಸ್ತ್ರಜ್ಞರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗಿನ ವರೆಗೆ ರೆಡ್ ಫ್ಲಾಗ್ ಎಚ್ಚರಿಕೆಯನ್ನು ವಿಸ್ತರಿಸಲಾಗಿದೆ. ಜತೆಗೆ, 4 ಸಾವಿರ ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೀಜಿಸಲಾಗಿದೆ.ಅತ್ತ ಕಾಡ್ಗಿಚ್ಚಿನಿಂದ ಭಸ್ಮವಾಗಿರುವ ಲಾಸ್ ಏಂಜಲೀಸ್‌ನ ದಕ್ಷಿಣ ಭಾಗದಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಈ ವೇಳೆ ವಿಷಕಾರಿ ಗಾಳಿ ಬೀಸುವ ಸಾಧ್ಯತೆಯಿದ್ದು, ಎಚ್ಚರಿಕೆಯಿಂದಿರುವಂತೆ ಜನರಿಗೆ ಸೂಚಿಸಲಾಗಿದೆ. ಆ ದುರಂತದಲ್ಲಿ 28 ಮಂದಿ ಸಾವನ್ನಪ್ಪಿದ್ದು, 14 ಸಾವಿರಕ್ಕೂ ಅಧಿಕ ಕಟ್ಟಡಗಳಿಗೆ ಹಾನಿಯಾಗಿತ್ತು. ಕಾಣೆಯಾಗಿದ್ದ 22 ಮಂದಿಗೆ ಶೋಧ ನಡೆದಿದೆ.