2 ತಿಂಗಳ ಪ್ರಾಯೋಗಿಕ ಕಾರ್ಯಾಚರಣೆಯ ಬಳಿಕ ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ ‘ಭಾರತ್ ಟ್ಯಾಕ್ಸಿ’ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಲಿದ್ದಾರೆ.
ನವದೆಹಲಿ: 2 ತಿಂಗಳ ಪ್ರಾಯೋಗಿಕ ಕಾರ್ಯಾಚರಣೆಯ ಬಳಿಕ ವಿಶ್ವದ ಮೊದಲ ಸಹಕಾರಿ ಟ್ಯಾಕ್ಸಿ ಸೇವೆಯಾದ ‘ಭಾರತ್ ಟ್ಯಾಕ್ಸಿ’ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಚಾಲನೆ ನೀಡಲಿದ್ದಾರೆ. ಪ್ರಸ್ತುತ ದೆಹಲಿ ಮತ್ತು ಗುಜರಾತ್‌ನಲ್ಲಿ ಲಭ್ಯವಿರುವ ಈ ಸೇವೆ 2 ವರ್ಷಗಳಲ್ಲಿ ದೇಶವ್ಯಾಪಿ ಲಭಿಸಲಿದೆ. ಇದು, ಓಲಾ, ಉಬರ್, ರ್‍ಯಾಪಿಡೋಗೆ ನೇರ ಸ್ಪರ್ಧಿಯಾಗಲಿದೆ. ಗುರುವಾರ ಉದ್ಘಾಟನಾ ಸಮಾರಂಭದಲ್ಲಿ ಶಾ ಅವರು ಈಗಾಗಲೇ ಸೇವೆ ನೀಡುತ್ತಿರುವ 6 ಚಾಲಕರನ್ನು ಸನ್ಮಾನಿಸಲಿದ್ದು, ಸಾರಥಿಯೇ ಮಾಲೀಕ ಎಂಬ ಆಶಯದಡಿ ಅವರಿಗೆ ಷೇರು ಪ್ರಮಾಣಪತ್ರವನ್ನು ನೀಡಲಿದ್ದಾರೆ. ಅವರಿಗೆ 5 ಲಕ್ಷ ರು. ಅಪಘಾತ ವಿಮೆ ಹಾಗೂ ಅಷ್ಟೇ ಮೊತ್ತದ ಕುಟುಂಬ ಆರೋಗ್ಯ ವಿಮೆ ಸಿಗಲಿದೆ.
ಏನಿದು ಭಾರತ್ ಟ್ಯಾಕ್ಸಿ?:
ಕಳೆದ ಜೂ.6ರಂದು ಸ್ಥಾಪಿಸಲಾಗಿರುವ ಭಾರತ್ ಟ್ಯಾಕ್ಸಿ, ಪ್ರಯಾಣಿಕರಿಂದ ಕಮಿಷನ್ ಪಡೆಯದೆ, ಸರ್ಜ್ ಮಾದರಿಯನ್ನೂ(ಬೇಡಿಕೆ ಹೆಚ್ಚಿದ್ದಾಗ ದರ ಏರಿಕೆ) ಅಳವಡಿಸಿಕೊಳ್ಳದೆ ಕಾರ್ಯನಿರ್ವಹಿಸುವ ಸರ್ಕಾರಿ ವೇದಿಕೆ. 8 ಸಹಕಾರಿ ಸಂಸ್ಥೆಗಳ ಸಹಕಾರದೊಂದಿಗೆ ಕೆಲಸ ಆರಂಭಿಸಿರುವ ಇದಕ್ಕೆ ಈಗಾಗಲೇ 3 ಲಕ್ಷ ಸಾರಥಿಗಳು ಸೇರಿಕೊಂಡಿದ್ದಾರೆ. 1 ಲಕ್ಷ ಜನ ನೋಂದಾಯಿಸಿಕೊಂಡಿದ್ದು, 10,000ಕ್ಕೂ ಅಧಿಕ ಮಂದಿ ಪ್ರಯಾಣಿಸಿದ್ದಾರೆ.
ಲಾಭವನ್ನು ನೇರವಾಗಿ ಚಾಲಕರಿ ನೀಡುವ ನಿಯಮವಿದ್ದು, ಈಗಾಗಲೇ 10 ಕೋಟಿ ರು. ಮೊತ್ತವನ್ನು ವರ್ಗಾಯಿಸಲಾಗಿದೆ. ಜತೆಗೆ ಅವರಿಗೆ ಆರೋಗ್ಯ, ಅಪಘಾತ ವಿಮೆ, ನಿವೃತ್ತಿ ಉಳಿತಾಯದಂತಹ ವ್ಯವಸ್ಥೆಗಳಿ ಸಿಗಲಿವೆ.
ಬರಲಿದ್ದಾರೆ ಬೈಕ್ ದೀದೀ!
ಭಾರತ್ ಟ್ಯಾಕ್ಸಿ ಅಡಿಯಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒತ್ತು ನೀಡಲು ‘ಬೈಕ್ ದೀದೀ’ ಎಂಬ ಯೋಜನೆ ಜಾರಿಗೆ ತರಲಾಗಿದ್ದು, 150 ಮಹಿಳಾ ಚಾಲಕಿಯರು ಇದನ್ನು ಸೇರಿಕೊಂಡಿದ್ದಾರೆ.