ಬಾಗಲಕೋಟೆಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಕುರಿತು ಜಿಲ್ಲೆಯಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದ್ದು, ಪ್ರಸಕ್ತ ಸಾಲಿನ ಬಜೆಟ್ ಜನರ ಆಶೋತ್ತರಗಳಿಗೆ ತಿಲಾಂಜಲಿ ನೀಡಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದರೆ, ಬಿಜೆಪಿಯು ಪ್ರಸಕ್ತ ಸಾಲಿನ ಬಜೆಟ್ ವಿಕಸಿತ ಭಾರತ ಕಟ್ಟುವಂತ ಅಭಿವೃದ್ಧಿಶೀಲವಾಗಿರುವ ಮಾದರಿ ಬಜೆಟ್ ಎಂದು ಬಣ್ಣಿಸಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಕುರಿತು ಜಿಲ್ಲೆಯಲ್ಲಿ ಮಿಶ್ರ ಅಭಿಪ್ರಾಯ ವ್ಯಕ್ತವಾಗಿದ್ದು, ಪ್ರಸಕ್ತ ಸಾಲಿನ ಬಜೆಟ್ ಜನರ ಆಶೋತ್ತರಗಳಿಗೆ ತಿಲಾಂಜಲಿ ನೀಡಿದೆ ಎಂದು ಕಾಂಗ್ರೆಸ್ ಪಕ್ಷ ಟೀಕಿಸಿದರೆ, ಬಿಜೆಪಿಯು ಪ್ರಸಕ್ತ ಸಾಲಿನ ಬಜೆಟ್ ವಿಕಸಿತ ಭಾರತ ಕಟ್ಟುವಂತ ಅಭಿವೃದ್ಧಿಶೀಲವಾಗಿರುವ ಮಾದರಿ ಬಜೆಟ್ ಎಂದು ಬಣ್ಣಿಸಿದೆ.

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಯಾವುದೇ ವಿಶೇಷತೆ, ಕೊಡುಗೆಗಳಿಂದ ಕೂಡಿಲ್ಲ. ಭಾರತೀಯರ ಆಶೋತ್ತರಗಳಿಗೆ ತೀಲಾಂಜಲಿ ಇಟ್ಟಿದೆ. ಮಧ್ಯಮ ವರ್ಗ, ದುಡಿಮೆ ವರ್ಗದವರ ಆರ್ಥಿಕ, ಸಾಮಾಜಿಕ ಶಕ್ತಿ ತುಂಬವ ಕೆಲಸ ಮಾಡಿಲ್ಲ. ಹಲವಾರು ವರ್ಷಗಳಿಂದ ನಿರಂತರ ಬೆಲೆ ಏರಿಕೆಯಿಂದ ಜನ ಜೀವನ ತತ್ತರಿಸಿ ಹೋಗಿದೆ. ಚಿನ್ನ, ಬೆಳ್ಳಿ, ಆಹಾರ ಧಾನ್ಯ , ಕೃಷಿ ಉಪಕರಣ ಸೇರಿದಂತೆ ಹಲವು ವಿಭಾಗಗಳು ಬೆಲೆ ಏರಿಕೆಯಾಗಿವೆ. ಈ ಬಜೆಟ್ ನಲ್ಲಿ ಬೆಲೆ ಇಳಿಕೆಯ ಆಶಯ ಸುಳ್ಳಾಗಿಸಿದೆ. ತೆರಿಗೆ ಭಾರ ಇಳಿಸುವ ಪ್ರಯತ್ನ ಮಾಡಿಲ್ಲ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯಮ ವಲಯಕ್ಕೆ ಯಾವುದೇ ದೊಡ್ಡಮಟ್ಟದ ಕೊಡುಗೆ ನೀಡಿಲ್ಲ. ಹಿಂದಿನ ಬಜೆಟ್ ನಂತೆ ಇದು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿಲ್ಲ. ವಿಮೆ, ಆರೋಗ್ಯ, ಆದಾಯ ತೆರಿಗೆ ವಿಷಯದಲ್ಲಿ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಲಾಗಿದೆ ಹೊರತು ಒಳಮರ್ಮ ಆಘಾತ ಉಂಟು ಮಾಡಿದೆ. ಡಾಲರ್ ಎದುರು ಕುಸಿದಿರುವ ರೂಪಾಯಿ ಮೌಲ್ಯ ಮೇಲಕ್ಕೆ ಎತ್ತುವ ಹಾಗೂ ದೇಶದ ಆರ್ಥಿಕತೆ ಚೇತರಿಸಿಕೊಳ್ಳುವ ಒಂದೇ ಒಂದು ನಿರ್ಧಾರ, ಯೋಜನೆ ಇಲ್ಲ. ಒಟ್ಟಾರೆ ಜನರ ಆಶೋತ್ತರಗಳಿಗೆ ಕೊಡಲಿ ಪೆಟ್ಟು ಬಿದ್ದಿದೆ.

- ಕೆಪಿಸಿಸಿ ಸದಸ್ಯೆ ರಕ್ಷಿತಾ ಭರತಕುಮಾರ ಈಟಿ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿರುವ ಕೇಂದ್ರದ 9ನೇ ಬಜೆಟ್ ಸಮಗ್ರ ದೃಷ್ಟಿಕೋನ ಹೊಂದಿದೆ. ಎಲ್ಲ ಕ್ಷೇತ್ರಗಳಿಗೆ ಆದ್ಯತೆ ನೀಡಿದ್ದಾರೆ. ಆದರೆ ವಾಸ್ತವವಾಗಿ ಹಲವು ನ್ಯೂನತೆಗಳಿಂದ ಕೂಡಿದೆ. ಶಿಕ್ಷಣ, ಆರೋಗ್ಯ , ಕೃಷಿ, ಪ್ರವಾಸೋದ್ಯಮ, ಉದ್ಯಮ ವಲಯಕ್ಕೆ ಆದ್ಯತೆ ನೀಡಿದ್ದಾರೆ. ಹಿಂದಿನ ಬಜೆಟ್ ಗಳಿಗೆ ಪೂರಕವಾಗಿದೆ. ಹೊಸ ಅಂಶ, ಯೋಜನೆ, ನೀತಿ, ನಿರೂಪಣೆ ಕಂಡು ಬಂದಿಲ್ಲ. ರೈತರಿಗೆ ಸಾಲ ನೀಡುವ ಸರಳೀಕರಣ ಎಂದು ಹೇಳಿದ್ದಾರೆ. ಅದು ಕಾರ್ಯರೂಪಕ್ಕೆ ಬರಬೇಕು. ಬೆಲೆ ಇಳಿಕೆ ಬಗ್ಗೆ ಯಾವುದೇ ಪ್ರಯತ್ನ ಮಾಡಿಲ್ಲ. ಉತ್ಪಾದನಾ ವಲಯಕ್ಕೆ ಯಾವುದೇ ರಿಲ್ಯಾಕ್ಸ್‌ ನೀಡಿಲ್ಲ. ಮಾರಕ ರೋಗಗಳ ಔಷಧಿ ಬೆಲೆ ಇಳಿಕೆ ಒಪ್ಪಬಹುದು ಆದರೆ, ಗುಣಮಟ್ಟದ ಆಹಾರ ಲಭ್ಯತೆ ಬಗ್ಗೆ ಚಿಂತನೆ ಮಾಡಬೇಕಿದೆ. ಈ ಬಾರಿ ಜನರ ನಿರೀಕ್ಷಿತ ತಕ್ಕಂತೆ ಶೇ.50ಮಾತ್ರ ಕೇಂದ್ರ ಸ್ಪಂದಿಸಿದೆ. ಬಜೆಟ್ ಅನುಷ್ಠಾನ ಬಂದಾಗ ಮಾತ್ರ ಸ್ಪಷ್ಟವಾದ ಅಂಶ ಬೆಳಕಿಗೆ ಬರಲಿದೆ. ದೇಶದ ಆರ್ಥಿಕ ಶಕ್ತಿ ಬಲ ಪಡಿಸಲು ನವೀನ ಮಾದರಿಯ ಯೋಜನೆಗಳು, ನೀತಿಗಳು ಬೇಕಿತ್ತು. ಕರ್ನಾಟಕ ರಾಜ್ಯದ ನೀರಾವರಿ, ಪ್ರವಾಸೋದ್ಯಮ, ರೈಲ್ವೆ ಯೋಜನೆಗಳಿಗೆ ಮಹತ್ವ ನೀಡದಿರುವುದು ಬೇಸರ ಮೂಡಿಸಿದೆ.

- ಮಲ್ಲಿಕಾರ್ಜುನ ಚ.ಚರಂತಿಮಠ ಅಧ್ಯಕ್ಷರು ಚರಂತಿಮಠ ಮತ್ತು ವಸ್ತ್ರದ ಫೌಂಡೇಶನ್ ಬಾಗಲಕೋಟೆ

ಭಾರತವನ್ನು ವಿಶ್ವದ 3ನೇ ಆರ್ಥಿಕ ಶಕ್ತಿಯನ್ನಾಗಿ ಮಾಡಲು ವಿಕಸಿತ ಭಾರತ ಕಟ್ಟುವಂತ ಅಭಿವೃದ್ದಿ ಶೀಲವಾಗಿರುವ ಮಾದರಿ ಬಜೆಟ್ ನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಜನರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲರನ್ನು ಮುಟ್ಟುವಂತಹ ಬಜೆಟ್ ಇದಾಗಿದ್ದು, ವಿಶ್ವದ ಎಲ್ಲ ರಾಷ್ಟ್ರಗಳು ಜಾಗತಿಕ ಆರ್ಥಿಕ ಸಂಕಷ್ಟದಲ್ಲಿರುವಾಗ ಭಾರತ ತನ್ನ ಆರ್ಥಿಕ ಪ್ರಗತಿ ಮುಂದುವರೆಸಿಕೊಂಡು ಹೋಗುವಂತಹ ಅಭಿವೃದ್ಧಿ ಪರವಾದ ಬಜೆಟ್‌ ಇದಾಗಿದೆ. ಆರ್ಥಿಕ ಅಭಿವೃದ್ಧಿ ಸ್ತರೀಕರಣ ಮತ್ತು ಹಣದುಬ್ಬರ ನಿಯಂತ್ರಣ ಮಾಡುವುದು, ಜನರ ಆಶೋತ್ತರಗಳನ್ನು ಈಡೇರಿಸುವುದರ ಜತೆಗೆ 7.4 ಆರ್ಥಿಕ ಬೆಳವಣಿಗೆ ಮುಂದುವರೆಸಿ ಎಲ್ಲ ಜನರನ್ನು ಒಳಗೊಂಡಿರುವ ಆರ್ಥಿಕ ಅಭಿವೃದ್ಧಿ ಮತ್ತು ಎಲ್ಲರನ್ನು ಮುಟ್ಟುವಂತಹ ಬಜೆಟ್ ಆಗಿದೆ.

-ಪಿ.ಎಚ್. ಪೂಜಾರ ವಿಧಾನ ಪರಿಷತ್ ಸದಸ್ಯರು

ದೇಶದ ಪ್ರಮುಖ ಶಕ್ತಿಯಾಗಿರುವ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರಸಕ್ತ ಸಾಲಿನ ಬಜೆಟ್ ಗಮನಾರ್ಹವಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಕಸಿತ ಭಾರತ ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪೂರಕವಾದ ಬಜೆಟ್ ಮಂಡಿಸಲಾಗಿದೆ. ಜಾಗತಿಕವಾಗಿ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದರೂ ನಿರ್ಮಲಾ ಸೀತಾರಾಮನ್ ಸಮತೋಲಿತ ಆಯವ್ಯಯ ಮಂಡಿಸಿದ್ದಾರೆ. 16ನೇ ಹಣಕಾಸು ಆಯೋಗದ ಶಿಫಾರಸಿನಲ್ಲಿ ರಾಜ್ಯಗಳಿಗೆ ಶೇ.41ರಷ್ಟು ತೆರಿಗೆ ಹಂಚಿಕೆ ಮಾಡುತ್ತಿರುವುದು ಗಮನಾರ್ಹವಾಗಿದೆ. ಬಜೆಟ್‌ ನಲ್ಲಿ ಕೈಗಾರಿಕೆ ವಲಯಕ್ಕೂ ವಿಶೇಷ ಒತ್ತು ನೀಡಲಾಗಿದೆ. ರೈತರಿಗೆ ಉತ್ತೇಜನ, ಮೀನುಗಾರಿಕೆಗೆ ಬೆಂಬಲ ಮತ್ತು ಗ್ರಾಮೀಣ ಆರ್ಥಿಕತೆಗೆ ಬಲ ತುಂಬುವ ಕೆಲಸ ಆಗಿದೆ. ಪ್ರವಾಸೋದ್ಯಮ, ನೀರಾವರಿ, ರೈಲ್ವೆ, ಎಂಎಸ್.ಎಂ.ಇ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗಿದೆ. ಕ್ಯಾನ್ಸರ್ ಔಷಧಿ ಹಾಗೂ 17 ಔಷಧಿಗಳ ಮೇಲೆ ತೆರಿಗೆ ವಿನಾಯಿತಿ ನೀಡಿರುವುದು ಸ್ವಾಗತಾರ್ಹ ಕ್ರಮ. ಕರಾವಳಿ ಅಭಿವೃದ್ಧಿಗೆ, ಹೈಸ್ಪೀಡ್ ರೈಲು ಕಾರಿಡಾರ್ ಘೋಷಣೆ ಮಾಡಲಾಗಿದೆ. ರೈತಾಪಿ ವರ್ಗಕ್ಕೂ ಬಜೆಟ್‌ ನಲ್ಲಿ ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಒಟ್ಟಾರೆಯಾಗಿ ಇದು ರಾಜ್ಯಕ್ಕೆ ಹಿತವಾದ, ಅಭಿವೃದ್ಧಿಗೆ ಪೂರಕವಾದ ಹಾಗೂ ವಿಕಸಿತ ಭಾರತದ ಪರಿಕಲ್ಪನೆಗೆ ಸಾಕಾರಗೊಳ್ಳುವ ಅತ್ಯುತ್ತಮ ಬಜೆಟ್.

- ಮುರುಗೇಶ ನಿರಾಣಿ ಮಾಜಿ ಸಚಿವರು, ಬಿಜೆಪಿ ರಾಜ್ಯ ಉಪಾಧ್ಯಕ್ಷರು

ಕೇಂದ್ರ ಸರ್ಕಾರದ ಇಂದಿನ ಬಜೆಟ್ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿನ ಬಜೆಟ್ ಆಗಿದೆ. ಕರ್ತವ್ಯ ಭವನದಲ್ಲಿ ಸಿದ್ಧಪಡಿಸಲಾದ ಮೊದಲ ಬಜೆಟ್. ಇದು ನಮ್ಮ ಕರ್ತವ್ಯ ಹೆಚ್ಚಿಸುವ ಮತ್ತು ದೇಶಕ್ಕೆ ಅಭಿವೃದ್ಧಿ-ಆಧಾರಿತ ಮತ್ತು ಭವಿಷ್ಯ ಆಧಾರಿತ ಬಜೆಟ್. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ ಜನಕೇಂದ್ರಿತವಾಗಿದೆ.

- ನಾರಾಯಣಸಾ ಕೆ.ಭಾಂಡಗೆ ರಾಜ್ಯಸಭೆ ಸದಸ್ಯರು

ಕೆಂದ್ರದ ಬಜೆಟ್ ಆಶಾದಾಯಕವಾಗಿದ್ದು, ಯುವಕರು, ಬಡವರು, ರೈತರು, ಕಾರ್ಮಿಕರು, ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು 2047 ವಿಕಸಿತ ಭಾರತದ ಕಲ್ಪನೆಯೊಂದಿಗೆ ಮಂಡಿಸಿದ ಬಜೆಟ್ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ. ₹53 ಲಕ್ಷ 56 ಸಾವಿರ ಕೋಟಿಯ ಗಾತ್ರದ ಬಜೆಟ್ ನ ಬಗ್ಗೆ ಹಾಗೂ ಪ್ರಧಾನಮಂತ್ರಿ ನರೆಂದ್ರಮೋದಿಯವರ ಬಗ್ಗೆ ಅಭಿಮಾನ ಮೂಡುತ್ತದೆ. ಆದಾಯ ತೆರಿಗೆ ನಮೂನೆಗಳನ್ನು ಸರಳೀಕರಿಸಲಾಗಿದೆ ಹಾಗೂ ಆಯುರ್ವೇದಿಕ್ ಹಬ್, ಎಮ್ಸ್, ಹೈಸ್ಪೀಡ್ ಟ್ರೇನ್ ಗಳು ಸೇರಿದಂತೆ ಅನೇಕ ಜನಪರ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ನೀಡಲಾಗಿದ್ದು ಇದು ಪ್ರತಿಯೊಬ್ಬರ ಹಿತ ಹಾಗೂ ಅಭಿವೃದ್ಧಿ ಪಥದ ಸಂಕೇತವಾಗಿದೆ.

-ಡಾ.ವೀರಣ್ಣ ಸಿ, ಚರಂತಿಮಠ ಮಾಜಿ ಶಾಸಕರು. ಬಾಗಲಕೋಟೆ