ಕಬ್ಬಿಣದ ಯುಗ ಆರಂಭವಾಗಿದ್ದೇ ತಮಿಳುನಾಡಲ್ಲಿ!: ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್‌

| Published : Jan 24 2025, 12:46 AM IST / Updated: Jan 24 2025, 04:42 AM IST

MK Stalin

ಸಾರಾಂಶ

ಕಬ್ಬಿಣದ ಯುಗವು ತಮಿಳುನಾಡಿನಲ್ಲಿ ಆರಂಭವಾಗಿತ್ತು. ರಾಜ್ಯದಲ್ಲಿ ಕ್ರಿಸ್ತ ಪೂರ್ವ 4000 ಇಸವಿ ಹಿಂದೆಯೇ ಕಬ್ಬಿಣದ ಬಳಕೆ ಶುರುವಾಗಿತ್ತು.

ಚೆನ್ನೈ: ಕಬ್ಬಿಣದ ಯುಗವು ತಮಿಳುನಾಡಿನಲ್ಲಿ ಆರಂಭವಾಗಿತ್ತು. ರಾಜ್ಯದಲ್ಲಿ ಕ್ರಿಸ್ತ ಪೂರ್ವ 4000 ಇಸವಿ ಹಿಂದೆಯೇ ಕಬ್ಬಿಣದ ಬಳಕೆ ಶುರುವಾಗಿತ್ತು. 5300 ವರ್ಷಗಳ ಹಿಂದೆ ಕಬ್ಬಿಣ ಕರಗಿಸುವ ಕಲೆ ಪರಿಚಯಿಸಲಾಗಿತ್ತು ಎಂದು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ.

ಗುರುವಾರ ಆ್ಯಂಟಿಕ್ವಿಟಿ ಆಫ್‌ ಐರನ್‌ (ಕಬ್ಬಿಣದ ಪ್ರಾಚೀನತೆ) ಕೃತಿ ಬಿಡುಗಡೆ ಮಾಡಿ ಮಾತನಾಡಿದ ಸ್ಟಾಲಿನ್‌, ‘ತಮಿಳುನಾಡಿನಲ್ಲಿ ಕಬ್ಬಿಣದ ಬಳಕೆಯ ಕುರುಹುಗಳು ಲಭಿಸಿದ್ದು, ಅದನ್ನು ಪುಣೆ ಮತ್ತು ಅಮೆರಿಕದ ಫ್ಲೋರಿಡಾದಲ್ಲಿರುವ ವಿಶ್ವ ದರ್ಜೆಯ ಪ್ರಯೋಗಾಲಯಕ್ಕೆ ಕಳುಹಿಸಿ ಫಲಿತಾಂಶ ಪಡೆಯಲಾಗಿದೆ. ಇದರಲ್ಲಿ ತಮಿಳುನಾಡಿನಲ್ಲಿಯೇ ಕಬ್ಬಿಣ ಯುಗ ಆರಂಭವಾಗಿತ್ತು ಎಂದು ಸಾಬೀತಾಗಿದೆ. ದಕ್ಷಿಣ ಭಾರತದಲ್ಲಿ ಕ್ರಿಸ್ತಪೂರ್ವ 3345ರಕ್ಕೂ ಮುನ್ನವೇ ಕಬ್ಬಿಣದ ಪರಿಚಯವಾಗಿತ್ತು ಎಂದು ತಿಳಿದುಬಂದಿದೆ’ ಎಂದರು.

ಜೊತೆಗೆ, ‘ನಾನು ಹಿಂದಿನಿಂದಲೂ ಭಾರತದ ಇತಿಹಾಸವು ತಮಿಳುನಾಡಿನಿಂದ ಆರಂಭವಾಗಬೇಕು ಎಂದು ಪ್ರತಿಪಾದಿಸುತ್ತಿದ್ದೇನೆ. ಈಗ ನನ್ನ ಕೂಗಿಗೆ ಶಕ್ತಿ ಬಂದಿದೆ’ ಎಂದು ಹರ್ಷಿಸಿದರು.

ರಾಹುಲ್‌ ಗಾಂಧಿ ಸಂತಸ:ಸ್ಟಾಲಿನ್‌ ಹೇಳಿಕೆಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದು, ಭಾರತದ ಶ್ರೀಮಂತ ಪರಂಪರೆಯು ವಿಶ್ವವನ್ನು ಪ್ರೇರೇಪಿಸುತ್ತಿದೆ. ತಮಿಳುನಾಡಿನಲ್ಲಿಯೇ ಕಬ್ಬಿಣದ ಯುಗ ಶುರುವಾಗಿತ್ತು ಎಂದಿದ್ದಾರೆ.

ಗಂಗೆ ರೀತಿ ಯಮುನೆಯಲ್ಲಿ ಕೇಜ್ರಿ ಸ್ನಾನ ಮಾಡಬಲ್ಲರೇ?: ಯೋಗಿ

ನವದೆಹಲಿ: ‘ಕೇಜ್ರಿವಾಲ್‌ ಅವರು ದೆಹಲಿಯಲ್ಲಿ ತಮ್ಮ ಸಚಿವರೊಂದಿಗೆ ಯಮುನಾ ನದಿಯಲ್ಲಿ ಸ್ನಾನ ಮಾಡಬಲ್ಲರೇ?’ ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಆಪ್‌ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಸವಾಲೆಸೆದಿದ್ದಾರೆ.ದಿಲ್ಲಿ ಧಾನಸಭೆ ಚುನಾವಣೆ ನಿಮಿತ್ತ ಪ್ರಚಾರದ ಸಭೆಯಲ್ಲಿ ಮಾತನಾಡಿದ ಯೋಗಿ, ‘ಆಪ್‌ ಸರ್ಕಾರ ದೆಹಲಿಯನ್ನು ಕಸದ ತೊಟ್ಟಿ ಮಾಡಿದೆ. ಸ್ವಚ್ಛ ನೀರು, ವಿದ್ಯುತ್‌ ಹಾಗೂ ಸಬ್ಸಿಡಿಗಳಂತಹ ಅಗತ್ಯ ಸೇವೆಗಳನ್ನೂ ನಿರ್ಲಕ್ಷಿಸುತ್ತಿದೆ. ನಿನ್ನೆ ನಾನು ನನ್ನ ಸಚಿವರೊಂದಿಗೆ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದಂತೆ ಕೇಜ್ರಿವಾಲ್‌ಗೆ ದೆಹಲಿಯ ಯಮುನಾದಲ್ಲಿ ಮಾಡುವುದು ಸಾಧ್ಯವೇ’ ಎಂದರು.

ಆಪ್‌ ಸಚಿವರು ಅಕ್ರಮ ಬಾಂಗ್ಲಾ ವಲಸಿಗರು ಹಾಗೂ ರೋಹಿಂಗ್ಯಾಗಳಿಗೆ ದೆಹಲಿಯಲ್ಲಿ ನೆಲೆ ಒದಗಿಸುತ್ತಿದ್ದಾರೆ ಎಂದು ಆರೋಪಿಸಿದ ಯೋಗಿ, ಬಿಜೆಪಿ ನೇತೃತ್ವದ ಡಬಲ್‌ ಎಂಜಿನ್‌ ಸರ್ಕಾರವನ್ನು ತರುವುದು ಅಗತ್ಯ ಎಂದರು.

ದೆಹಲಿಯಲ್ಲಿ ಫೆ.5ರಂದು ಚುನಾವಣೆ ನಡೆಯಲಿದ್ದು, ಫೆ.8ರಂದು ಫಲಿತಾಂಶ ಘೋಷಣೆಯಾಗಲಿದೆ.

ಪುಷ್ಪ-2’ ನಿರ್ದೇಶಕ ಸುಕುಮಾರ್ ಕಚೇರಿ ಮೇಲೆ ಐಟಿ ದಾಳಿ

ಹೈದರಾಬಾದ್‌: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ‘ಪುಷ್ಪ-2’ ಚಿತ್ರದ ನಿರ್ದೇಶಕ ಸುಕುಮಾರ್ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ನಿರ್ದೇಶಕರು ಮತ್ತು ಮೈತ್ರಿ ಮೂವಿ ಮೇಕರ್ಸ್‌ನ ಇತರ ಸದಸ್ಯರಿಗೆ ಸಂಬಂಧಿಸಿದ ಇನ್ನಿತರ ಸ್ಥಳಗಳ ಮೇಲೂ ದಾಳಿಗಳು ಮುಂದುವರೆಯುವ ನಿರೀಕ್ಷೆಯಿದೆ. ಮಂಗಳವಾರ (ಜ.21) ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷ ದಿಲ್ ರಾಜು ಸೇರಿದಂತೆ ‘ಪುಷ್ಪ-2’ ಮತ್ತು ‘ಗೇಮ್ ಚೇಂಜರ್’ ನಿರ್ಮಾಪಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಐಟಿ ದಾಳಿ ನಡೆಸಿತ್ತು.

ಮ.ಪ್ರ.: ಭಿಕ್ಷುಕಿಗೆ ಭಿಕ್ಷೆ ನೀಡಿದವನ ಮೇಲೆ ಕೇಸ್‌!

ಇಂದೋರ್: ಭಿಕ್ಷೆ ನೀಡುವುದು ನಿಷೇಧ ಇದ್ದರೂ ಭಿಕ್ಷುಕಿಗೆ ಭಿಕ್ಷೆ ನೀಡಿದ ವ್ಯಕ್ತಿಯೊಬ್ಬನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.ಖಾಂಡ್ವಾ ರಸ್ತೆಯ ದೇವಸ್ಥಾನವೊಂದರ ಎದುರು ಭಿಕ್ಷೆ ಬೇಡುತ್ತಿದ್ದಾಕೆಗೆ ಸಹಾಯ ಮಾಡಿದ ಕಾರಣ ಅಪರಿಚಿತ ವ್ಯಕ್ತಿಯೊಬ್ಬನ ಮೇಲೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ 223(ಸರ್ಕಾರದ ಆದೇಶ ಉಲ್ಲಂಘನೆ) ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿಲಾಗಿದೆ. ಅವರಿಗೆ 1 ವರ್ಷ ಸೆರೆವಾಸ ಅಥವಾ 5 ಸಾವಿರ ರು. ದಂಡ ಅಥವಾ ಎರಡನ್ನೂ ವಿಧಿಸುವ ಸಾಧ್ಯತೆಯಿದೆ.

ಭಾರತದ ಅತಿ ಸ್ವಚ್ಛ ನಗರವೆಂಬ ಖ್ಯಾತಿಗೆ ಪಾತ್ರವಾಗಿರುವ ಮಧ್ಯಪ್ರದೇಶದ ಇಂದೋರ್‌ ನಗರವನ್ನು ಭಿಕ್ಷುಕ ಮುಕ್ತವಾಗಿಸುವ ಉದ್ದೇಶವೂ ಇದ್ದು, ಇದರ ಭಾಗವಾಗಿ ಭಿಕ್ಷೆ ಬೇಡುವುದು, ನೀಡುವುದು ಹಾಗೂ ಭಿಕ್ಷುಕರಿಗೆ ವಸ್ತುಗಳನ್ನು ನೀಡುವುದನ್ನು ನಿಷೇಧಿಸಲಾಗಿದೆ. ಜತೆಗೆ, ಇಂತಹ ಘಟನೆಗಳ ಬಗ್ಗೆ ಸೂಚನೆ ನೀಡಿದವರಿಗೆ 1 ಸಾವಿರ ರು. ಬಹುಮಾನವನ್ನೂ ಘೋಷಿಸಲಾಗಿದೆ.

ಕಪಿಲ್‌ ಶರ್ಮಾ, ರಾಜಪಾಲ್, ರೆಮೋಗೆ ಬೆದರಿಕೆ ಇ-ಮೇಲ್‌

ಬಾಲಿವುಡ್‌ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಹಾಸ್ಯ ನಟ ಕಪಿಲ್‌ ಶರ್ಮಾ, ನಟ ರಾಜ್‌ಪಾಲ್‌ ಯಾದವ್‌ ಮತ್ತು ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಸೇರಿ ಅನೇಕ ಕಲಾವಿದರಿಗೆ ಜೀವ ಬೆದರಿಕೆಯ ಇ-ಮೇಲ್‌ಗಳು ಬಂದಿವೆ. ಮುಂಬೈ ಪೊಲೀಸರು ಈ ಸಂಬಂಧ ಪ್ರಕರಣವೊಂದನ್ನು ದಾಖಲಿಸಿದ್ದಾರೆ.

ಕಳೆದ ವರ್ಷ ಡಿ.14 ರಂದು ವಿಷ್ಣು ಎಂಬಾತನ ಹೆಸರಲ್ಲಿ ನಟರಾದ ರಾಜ್‌ಪಾಲ್‌ ಯಾದವ್‌ ಮತ್ತು ಕಪಿಲ್‌ ಶರ್ಮಾಗೆ ಬೆದರಿಕೆಯ ಇ-ಮೇಲ್‌ ಕಳುಹಿಸಿದ್ದಾನೆ. ಆದರೆ ಇದರ ತನಿಖೆ ನಡೆಸಿದಾಗ don99284@gmail.com ಎಂಬ ಪಾಕಿಸ್ತಾನಿ ಖಾತೆಯಿಂದ ಇ-ಮೇಲ್‌ ಬಂದಿದೆ ಎಂದು ಗೊತ್ತಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್‌ ಅಧಿಕಾರಿ ಹೇಳಿದರು.ಈ ನಡುವೆ, ನೃತ್ಯ ನಿರ್ದೇಶಕ ರೆಮೋ ಡಿಸೋಜಾ, ಗಾಯಕಿ ಸುಗಂಧಾ ಮಿಶ್ರಾ ಇದೇ ಮಾದರಿ ಬೆದರಿಕೆ ಇ-ಮೇಲ್‌ ಬಂದಿರುವುದಾಗಿ ದೂರು ನೀಡಿದ್ದಾರೆ.

ಶಾಲೆಗೂ ಬೆದರಿಕೆ:ಮುಂಬೈನ ಓಶಿವಾರಾ ಪ್ರದೇಶದ ಶಾಲೆಯೊಂದಕ್ಕೂ ‘ಅಫ್ಜಲ್ ಗ್ಯಾಂಗ್‌’ ಹೆಸರಲ್ಲಿ ಬೆದರಿಕೆ ಇ-ಮೇಲ್‌ ಬಂದಿದೆ.